ಬೆಂಗಳೂರು: ಚಾಮರಾಜಪೇಟೆಯ ಬಿಬಿಎಂಪಿ ಹೆರಿಗೆ ಆಸ್ಪತ್ರೆಯಲ್ಲಿ ನವಜಾತ ಗಂಡು ಶಿಶು ಕಳ್ಳತನವಾಗಿದೆ. ಮಗು ಹುಟ್ಟಿದ ಎರಡೇ ಗಂಟೆಯಲ್ಲಿ ಅದನ್ನು ಕಳ್ಳರು ಅಪಹರಿಸಿದ್ಧಾರೆ.
ಹೆರಿಗೆ ನೋವಿನಿಂದ ಸುಧಾರಿಸಿಕೊಳ್ಳುತ್ತಿದ್ದ ತಾಯಿ ಮಲಗಿದ್ದ ವೇಳೆ ಮಗುವನ್ನು ಕಳ್ಳರು ಹೊತ್ತೊಯ್ದಿದ್ದಾರೆ. ಶುಕ್ರವಾರ ಬೆಳಗ್ಗೆಯಷ್ಟೇ ಉಸ್ನಾ ಬಾನು ಎಂಬುವರು ಮಗುವಿಗೆ ಜನ್ಮ ನೀಡಿದ್ದರು.
ಪಾದರಾಯನಪುರ ಮೊದಲ ಕ್ರಾಸ್ ನಿವಾಸಿಯಾದ ಉಸ್ನಾ ಬಾನು ಹಾಗೂ ಆಕೆಯ ಪತಿ ನವಿತ್ ಪಾಷಾ ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ. ಶುಕ್ರವಾರ ಬೆಳಗಿನ ಜಾವ ಉಸ್ನಾ ಬಾನು ಅವರಿಗೆ ಹೆರಿಗೆ ನೋವು ಶುರುವಾಗಿತ್ತು. ಈ ವೇಳೆ ನವಿತ್ ಪಾಷಾ ಅವರ ಸಹೋದರ ಅಕ್ಮಲ್ ಖಾನ್ ಅವರು ತಮ್ಮ ಪತ್ನಿ ನೀಲೂಫರ್ ಅವರಿಗೆ ಮಾಹಿತಿ ನೀಡಿದರು. ಆಜಾದ್ ನಗರ ಟೋಲ್ ಗೇಟ್ ಬಳಿ ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೀಲೂಫರ್ ಅವರು ಚಾಮರಾಜಪೇಟೆಯ ಬಿಬಿಎಂಪಿ ಹೆರಿಗೆ ಆಸ್ಪತ್ರೆಗೆ ದಾಖಲಿಸುವಂತೆ ಸಲಹೆ ನೀಡಿದರು. ಅದೇ ಆಸ್ಪತ್ರೆಯಲ್ಲಿ ಬೆಳಗ್ಗೆ 9 ಗಂಟೆಗೆ ಬಾನು ಅವರಿಗೆ ನಾರ್ಮಲ್ ಡಿಲೆವರಿ ಆಗಿತ್ತು.
ಬೇರೆ ವಾರ್ಡ್‌ಗಳು ಭರ್ತಿಯಾಗಿದ್ದ ಕಾರಣ ಬಾನು ಅವರನ್ನು ಖಾಲಿ ವಾರ್ಡ್ ಒಂದಕ್ಕೆ ಸ್ಥಳಾಂತರಿಸಲಾಗಿತ್ತು. ಈ ವಾರ್ಡ್‌ನ ಬಾಗಿಲುಗಳು ತೆರೆದಿದ್ದವು ಎಂದು ಆಸ್ಪತ್ರೆಯ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಆಸ್ಪತ್ರೆಗೆ ಬಟ್ಟೆ ಒಗೆಯುವ ಸಿಬ್ಬಂದಿ ಆಗಮಿಸಿ ಒಂದಷ್ಟು ಬಟ್ಟೆಗಳನ್ನು ತೆಗೆದುಕೊಂಡು ಹೋಗಿದ್ದರು. ಎಂದು ಭದ್ರತಾ ಸಿಬ್ಬಂದಿ ಹೇಳುತ್ತಿದ್ದಾರೆ.
ಬಾನು ಅವರು ನಿದ್ರಿಸುತ್ತಿದ್ದಾಗ ಆಸ್ಪತ್ರೆಗೆ ಪ್ರವೇಶಿಸಿದ ಮಹಿಳೆಯೊಬ್ಬರು ಮಗುವನ್ನು ಕಳ್ಳತನ ಮಾಡಿ ಹಿಂಬಾಗಿಲಿನಿಂದ ಹೋಗಿದ್ದಾರೆ. ಬಾನು ಅವರಿಗೆ ಎಚ್ಚರವಾದಾಗ ಮಗು ಅವರ ಪಕ್ಕದಲ್ಲಿ ಇರಲಿಲ್ಲ. ಇನ್ನು ಬಾನು ಅವರ ಪತಿ ತಮ್ಮ ಸಂಬಂಧಿಕರನ್ನು ಕರೆದುಕೊಂಡು ಬರಲು ತೆರಳಿದ್ದರು. ಅವರ ಸಹೋದರ ಅಕ್ಮಲ್ ತನ್ನ ಪತ್ನಿಯನ್ನು ಮನೆಗೆ ಬಿಟ್ಟು ಬರಲು ತೆರಳಿದ್ದರು. ಈ ವೇಳೆ ಮಗುವಿನ ಕಳ್ಳತನವಾಗಿದ್ದು, ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿದೆ.
ಪೊಲೀಸರು ಈಗಾಗಲೇ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಮಹಿಳೆಯೊಬ್ಬರು ಮಗುವನ್ನು ಹಿಡಿದುಕೊಂಡು ಆಟೋದಲ್ಲಿ ತೆರಳುತ್ತಿರೋದು ಒಂದು ಸಿಸಿಟಿವಿಯಲ್ಲಿ ದಾಖಲಾಗಿದೆ. ಅಕ್ಮಲ್ ಅವರ ಪತ್ನಿ ಕೆಲಸ ಮಾಡುತ್ತಿದ್ದ ಆಸ್ಪತ್ರೆ ಕಡೆಗೆ ಆಟೋ ತೆರಳಿದ್ದು ಕಂಡು ಬಂದಿದೆ. ಇದಲ್ಲದೆ ಇನ್ನೂ ಎರಡು ವಿವಿಧ ಕಡೆಗಳಿಗೆ ಆಟೋ ತೆರಳಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಅಕ್ಮಲ್ ಹಾಗೂ ಅವರ ಪತ್ನಿಯನ್ನೇ ಮೊದಲು ವಿಚಾರಣೆಗೆ ಒಳಪಡಿಸಿದ್ದಾರೆ. ಆದ್ರೆ, ಅವರ ಕೈವಾಡ ಇರೋದಕ್ಕೆ ಯಾವುದೇ ದಾಖಲೆ ಸಿಕ್ಕಿಲ್ಲ. ಹೀಗಾಗಿ ಪೊಲೀಸರು ಆಸ್ಪತ್ರೆ ಸಿಬ್ಬಂದಿ ಕೈವಾಡ ಇರಬಹುದೇ ಎಂದು ಶಂಕಿಸಿದ್ದಾರೆ.
Comments are closed.