ಕಲಬುರ್ಗಿ(ಜೂ.08): ನಾಳೆಯಿಂದ ಗ್ರಾಮೀಣ ಭಾಗದ ಸಂಚಾರ ಸೇವೆ ಆರಂಭವಾಗಲಿದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು. ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಸಾರಿಗೆ ಸಚಿವ ಲಕ್ಷ್ಮಣ ಸವದಿ, ಈಗಾಗಲೇ ಅಂತರ್ ಜಿಲ್ಲೆ ಬಸ್ ಸಂಚಾರ ಶುರುವಾಗಿದೆ. ಹೀಗಾಗಿ ಬೆಂಗಳೂರಿನಿಂದ ಎಲ್ಲಾ ಜಿಲ್ಲೆಗಳಿಗೂ ಬಸ್ ಲಭ್ಯವಿದೆ. ಈಗ ಗ್ರಾಮೀಣ ಭಾಗದ ಬಸ್ ಸಂಚಾರ ಪ್ರಾರಂಭ ಮಾಡಲಿದ್ದೇವೆ ಎಂದರು.
ಕೊರೋನಾ ಲಾಕ್ಡೌನ್ನಿಂದ ಸುಮಾರು 2,200 ಕೋಟಿ ರೂ. ಸಾರಿಗೆ ಇಲಾಖೆಗೆ ನಷ್ಟವಾಗಿದೆ. ಸದ್ಯದಲ್ಲೇ ಇದು 3 ಸಾವಿರ ಕೋಟಿ ರೂ. ಆಗುವ ಸಾಧ್ಯತೆ ಇದೆ. ಹೀಗಾಗಿ ಸಾರಿಗೆ ಇಲಾಖೆ ಸುಧಾರಣೆಗಾಗಿ ಮತ್ತು ರಾಜ್ಯದ ಆರ್ಥಿಕ ಸಂಕಷ್ಟ ಸರಿದೂಗಿಸಲು ಗ್ರಾಮೀಣ ಭಾಗದ ಬಸ್ ಸಂಚಾರ ಶುರು ಮಾಡಲಿದ್ದೇವೆ ಎಂದರು ಲಕ್ಷ್ಮಣ ಸವದಿ.
ಇನ್ನು, ಬಸ್ನಲ್ಲಿ ಕೇವಲ 30 ಜನ ಮಾತ್ರ ಪ್ರಯಾಣ ಮಾಡಬೇಕು. ಹಾಗೆಯೇ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು ಕಡ್ಡಾಯ. ಸಂಸ್ಥೆಯಿಂದ ಆರೋಗ್ಯ ತಪಾಸಣೆ ನಡೆಸಲಾಗುವುದು. ಸ್ಯಾನಿಟೈಜರ್ ಉಪಯೋಗಿಸಲಾಗುವುದು ಎಂದು ಹೇಳಿದರು.
ಅಂತರ್ ರಾಜ್ಯಗಳಿಗೆ ಬಸ್ ಸಂಚಾರ ಆರಂಭಿಸಬೇಕು ಎಂದು ನಿರ್ಧಾರ ಮಾಡಲಾಗಿದೆ. ಹೀಗಾಗಿ ಎಲ್ಲಾ ರಾಜ್ಯಗಳಿಗೆ ಸರ್ಕಾರ ಪತ್ರ ಬರೆದಿದೆ. ಎಲ್ಲಾ ರಾಜ್ಯಗಳ ಸರ್ಕಾರದಿಂದ ಪತ್ರಕ್ಕೆ ಪತಿಕ್ರಿಯೆ ಬಂದ ಬಳಿಕ ಅಂತರ್ ರಾಜ್ಯ ಬಸ್ ಸಂಚಾರ ಮಾಡಲಾಗುವುದು ಎಂದು ತಿಳಿಸಿದರು.
ಸಾರಿಗೆ ಇಲಾಖೆ ನೌಕರರಿಗೆ 2 ತಿಂಗಳ ಸಂಬಳ ನೀಡಲಾಗಿದೆ. ಅದಕ್ಕಾಗಿ 650 ಕೋಟಿ ರೂ. ಮೀಸಲಿಟ್ಟಿದ್ದೇವೆ. ಯಾರನ್ನೂ ಕೆಲಸದಲ್ಲಿ ತೆಗೆಯಲಾಗುವುದಿಲ್ಲ, ಕಡ್ಡಾಯ ರಜೆ ಸಾಧ್ಯವೇ ಇಲ್ಲ. ಯಾರಿಗಾದರೂ ರಜೆ ನೀಡಿದರೇ ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
Comments are closed.