ಸ್ಯಾಂಡಲ್ವುಡ್ ನಟ ಚಿರಂಜೀವಿ ಸರ್ಜಾ ಅವರ ಅಕಾಲಿಕ ನಿಧನದಿಂದ ಇಡೀ ಚಿತ್ರರಂಗವೇ ದಿಗ್ಭ್ರಾಂತಿಗೆ ಒಳಗಾಗಿದೆ. ತನ್ನ 39ನೇ ವಯಸ್ಸಿನಲ್ಲೇ ಹೃದಯಾಘಾತಕ್ಕೀಡಾಗಿ ಚಿರು, ಸಾವನ್ನಪ್ಪಿದ್ದಾರೆ. ಕನ್ನಡ ಚಿತ್ರರಂಗ ಮಾತ್ರವಲ್ಲದೆ, ರಾಜಕೀಯ ಮುಖಂಡರು, ಬೇರೆ ಬೇರೆ ಭಾಷೆಯ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ. ಆದರೆ, ಹೀಗೆ ಸಂತಾಪ ಸೂಚಿಸುವ ಭರದಲ್ಲಿ ಲೇಖಕಿ ಶೋಭಾ ಡೇ ಒಂದು ಎಡವಟ್ಟು ಮಾಡಿಬಿಟ್ಟಿದ್ದಾರೆ! ಆ ಕಾರಣಕ್ಕೆ ಅವರೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್ ಆಗುತ್ತಿದ್ದಾರೆ ಕೂಡ! ಅಷ್ಟಕ್ಕೂ ಅವರು ಮಾಡಿದ್ದೇನು?
ಈ ಚಿರು ಬದಲು, ಆ ಚಿರು ಫೋಟೋ!
ನಟ ಚಿರಂಜೀವಿ ಸರ್ಜಾ ಅವರ ನಿಧನಕ್ಕೆ ಸಂತಾಪ ಸೂಚಿಸುವ ಸಲುವಾಗಿ ಶೋಭಾ ಒಂದು ಟ್ವೀಟ್ ಮಾಡಿದ್ದರು. ‘ಮತ್ತೊಬ್ಬ ಶೈನಿಂಗ್ ಸ್ಟಾರ್ನನ್ನು ಕಳೆದುಕೊಂಡಿದ್ದೇವೆ. ಎಂತಹ ದುರಂತ ಸಾವು ಇದು. ಅವರ ಕುಟುಂಬದವರಿಗೆ ದುಃಖ ಬರಿಸುವ ಶಕ್ತಿ ಸಿಗಲಿ’ ಎಂದು ಟ್ವೀಟ್ ಮಾಡಿದ್ದರು. ಅದಕ್ಕೆ ಚಿರು ಸರ್ಜಾ ಅವರ ಟ್ವಿಟರ್ ಖಾತೆಯನ್ನು ಟ್ಯಾಗ್ ಕೂಡ ಮಾಡಿದ್ದರು. ಆದರೆ, ಫೋಟೋ ಹಾಕೋ ವಿಚಾರದಲ್ಲಿ ಮಾತ್ರ ಅವರು ಯಾಮಾರಿದ್ದರು. ಹೌದು, ಚಿರು ಸರ್ಜಾ ಫೋಟೋ ಬದಲು, ಅಲ್ಲಿ ತೆಲುಗಿನ ‘ಮೆಗಾ ಸ್ಟಾರ್’ ಚಿರಂಜೀವಿ ಫೋಟೋ ಹಾಕಿಬಿಟ್ಟಿದ್ದರು.
ತಕ್ಷಣವೇ ಟ್ವೀಟ್ ಡಿಲೀಟ್!
ಹೀಗೆ ಟ್ವೀಟ್ ಮಾಡುತ್ತಲೇ ಅದು ತಪ್ಪಾಗಿದೆ ಎಂಬುದು ಶೋಭಾ ಡೇ ಅವರ ಗಮನಕ್ಕೆ ಬಂದಿದೆ. ಇಂಥದ್ದೊಂದು ಮಹಾಪ್ರಮಾದ ಮಾಡಿದ್ದಕ್ಕಾಗಿ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ. ಹಾಗಾಗಿ, ಅವರು ಆ ಟ್ವೀಟ್ ಅನ್ನೇ ಡಿಲೀಟ್ ಮಾಡಿಬಿಟ್ಟಿದ್ದಾರೆ. ಅಷ್ಟರಲ್ಲಾಗಲೇ ಅದರ ಸ್ಕ್ರೀನ್ ಶಾಟ್ಸ್ ಎಲ್ಲೆಡೆ ಹರಿದಾಡಲು ಆರಂಭಿಸಿವೆ. ‘ಮೆಗಾ ಸ್ಟಾರ್’ ಅಭಿಮಾನಿಗಳಂತೂ ಶೋಭಾ ಅವರನ್ನು ಸಖತ್ ಟ್ರೋಲ್ ಮಾಡುತ್ತಿದ್ದಾರೆ.
Comments are closed.