ಕರ್ನಾಟಕ

ಗೈರಾಗುವ ವೈದ್ಯರ ವಿರುದ್ದ ಕಠಿಣ ಕ್ರಮ; ಈಶ್ವರಪ್ಪ ಎಚ್ಚರಿಕೆ

Pinterest LinkedIn Tumblr


ಶಿವಮೊಗ್ಗ(ಜೂ.08): ಶಿವಮೊಗ್ಗ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ 130 ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಬಹುತೇಕ ವೈದ್ಯರು ಕರ್ತವ್ಯಕ್ಕೆ ಹಾಜರಾಗದೆ ಕೇವಲ ಸಹಿ ಮಾಡಿ ಹೋಗುತ್ತಿದ್ದಾರೆ. ಶಿಮ್ಸ್​​ನಲ್ಲಿರುವ ವಿದ್ಯಾರ್ಥಿಗಳು ರೋಗಿಗಳನ್ನು ನೋಡಿಕೊಳ್ಳುತ್ತಿದ್ದು, ಕರ್ತವ್ಯದಲ್ಲಿರಬೇಕಾದ ವೈದ್ಯರು ವಾಟ್ಸಾಪ್ ಮೂಲಕ ಈ ವಿದ್ಯಾರ್ಥಿಗಳಿಗೆ ಸೂಚನೆಗಳನ್ನು ನೀಡುತ್ತಿದ್ದಾರೆ. ಈಗ ವೈದ್ಯರ ಬಗ್ಗೆ ಹಲವಾರು ದೂರುಗಳು ನಿರಂತರವಾಗಿ ಬರುತ್ತಿವೆ.

ಹೌದು ಶಿವಮೊಗ್ಗ ಮೆಡಿಕಲ್ ಕಾಲೇಜಿನ ವೈದ್ಯರ ಕರ್ತವ್ಯದ ಬಗ್ಗೆ ಹಲವಾರು ದೂರುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ. ವೈದ್ಯರು ಸೂಕ್ತ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಆಸ್ಪತ್ರೆಗೆ ಯಾವಾಗಬೇಕಾದರೂ, ಬರುತ್ತಾರೆ, ಯಾವಾಗ ಬೇಕಾದರೂ ಹೋಗುತ್ತಾರೆ. ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ ಎಂಬ ದೂರುಗಳು ಪದೇ ಪದೇ ಕೇಳಿ ಬರುತ್ತಿವೆ. ಹೀಗಾಗಿ ಆಸ್ಪತ್ರೆಯಲ್ಲಿ ಸರಿಯಾದ ಡ್ಯೂಟಿ ಮಾಡದ ವೈದ್ಯರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಲಾಗಿದೆ.

ಬೆಳಗ್ಗೆ ಬಂದು ಸಹಿ ಹಾಕಿ ಹೋಗುವಂತ ವೈದ್ಯರಿಗೆ ಈಗ ಬಿಸಿ ಮುಟ್ಟಿಸುವ ಕೆಲಸ ಮಾಡಲಾಗುತ್ತಿದೆ. ಇಂತಹ ವೈದ್ಯರ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವ ಸೂಚನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರಪ್ಪ ನೀಡಿದ್ದಾರೆ. 130 ಜನ ವೈದ್ಯರು ಇಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಎಲ್ಲಾ ವೈದ್ಯರು ಕಡ್ಡಾಯವಾಗಿ ಡ್ಯೂಟಿ ಸಮಯದಲ್ಲಿ ಆಸ್ಪತ್ರೆಯಲ್ಲಿರುವಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶಕರಿಗೆ ಸೂಚಿಸಿದ್ದಾರೆ.

ಇಲ್ಲದೇ ಇದು ನಿರ್ದೇಶಕರ ಜವಾಬ್ದಾರಿ ಕೂಡ. ವೈದ್ಯರ ಹಾಜರಾತಿಗಾಗಿ ಫೇಸ್ ರೀಡಿಂಗ್ ಯಂತ್ರ ಸೇರಿದಂತೆ ಅಗತ್ಯ ಯಂತ್ರಗಳನ್ನು ಖರೀದಿಸಿ. ಕರ್ತವ್ಯದಲ್ಲಿರುವ ವೈದ್ಯರ ಪಟ್ಟಿಯನ್ನು ಎಲ್ಲರಿಗೆ ಕಾಣುವಂತೆ ಪ್ರತಿದಿನ ಪ್ರಕಟಿಸಿ. ಶಿಮ್ಸ್ ಆಡಳಿತ ಮಂಡಳಿಯ ಮೂರು ಮಂದಿ ನಾಮನಿರ್ದೇಶಿತ ಸದಸ್ಯರ ವಿಜಿಲೆನ್ಸ್ ಸಮಿತಿಯನ್ನು ರಚಿಸಿ, ಪ್ರತಿ ನಿತ್ಯ ವೈದ್ಯರು ಕರ್ತವ್ಯದ ಬಗ್ಗೆ ಮಾಹಿತಿ ಕಲೆ ಹಾಕುವಂತೆ ಸೂಚನೆ ನೀಡಿದರು.

ಔಷಧಿಗಳನ್ನು ವೈದ್ಯರು ಹೊರಗೆ ಖರೀದಿಸಲು ಚೀಟಿ ಬರೆದುಕೊಡುವಂತಿಲ್ಲ. ಮೆಗ್ಗಾನ್​​ ನಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾಗದೆ ಬೇರೆ ಆಸ್ಪತ್ರೆಗೆ ರೋಗಿಗಳನ್ನು ಕಳುಹಿಸಬೇಕಿದ್ದರೆ, ಆಯಾ ವಿಭಾಗದ ಮುಖ್ಯಸ್ಥರು ಮಾತ್ರ ಶಿಫಾರಸು ಮಾಡಬೇಕು. ಖಾಸಗಿ ಆ್ಯಂಬುಲೆನ್ಸ್​​ಗಳು ಮೆಗ್ಗಾನ್ ಆವರಣದ ಒಳಗೆ ಬಾರದಂತೆ, ಸಾರ್ವಜನಿಕರಿಗೆ ಕಿರಿಕಿರಿ ಆಗದಂತೆ ನೋಡಿಕೊಳ್ಳಬೇಕು ಎಂದು ಖಡಕ್ ಆಗಿ ನಿರ್ದೇಶಕರಿಗೆ ಸೂಚಿಸಿದ್ದಾರೆ.

ಒಂದು ವೇಳೆ ವೈದ್ಯರು ಗೈರು ಹಾಜೂರಾದರೆ, ಕೇವಲ ಬಂದು ಸಹಿ ಹಾಕಿ ನಂತರ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸದೇ ಇದ್ದ ಅಂಶ ಕಂಡು ಬಂದರೆ, ಅಂತಹ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುಬೇಕು ಎಂದು ಸಚಿವ ಈಶ್ವರಪ್ಪ ತಿಳಿಸಿದ್ದಾರೆ.

ಮೆಗ್ಗಾನ್ ಗೆ ಬರುವಂತ ರೋಗಿಗಗಳು ಬಡವರಾಗಿದ್ದು, ಅವರಿಗೆ ಉತ್ತಮ ಚಿಕಿತ್ಸೆ ಸಿಗಬೇಕು. ಇದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡುವ ವಿಶ್ವಾಸವನ್ನು ಈಶ್ವರಪ್ಪ ವ್ಯಕ್ತಪಡಿಸಿದ್ದಾರೆ.

Comments are closed.