ನಿಮ್ಮ ಮುಖದ ಮೇಲೆ ಹಲವಾರು ರೀತಿಯ ಗುಳ್ಳೆಗಳು, ಬೊಬ್ಬೆಗಳು ಎದ್ದೇಳಬಹುದು. ನಿಮ್ಮ ಗಲ್ಲದ ಮೇಲೆ ಆಗುವ ಕೀವಿನ ಗುಳ್ಳೆಯಿಂದ ಹಿಡಿದು ತುಟಿಯ ಮೇಲೆ ಆಗುವ ಒಡೆದ ಗಾಯದವರೆಗೆ, ಇವುಗಳು ನಮ್ಮ ಮುಖದ ಬಹುಷಃ ಎಲ್ಲಾ ಭಾಗಗಳಲ್ಲೂ ಕಾಣಿಸಿಕೊಳ್ಳುತ್ತವೆ. ಆದರೆ ಕೆಲವೊಂದು ಬಹಳ ಅಹಿತಕರವಾಗಿರುತ್ತವೆ. ಉದಾಹರಣೆಗೆ ಕಣ್ಣಿನ ಬಳಿ ಆಗುವ ಕೀವಿನ ಗುಳ್ಳೆಯೂ ಒಂದು. ಇವುಗಳು ಇತರೆ ಗುಳ್ಳೆಗಳಂತೆ ಕಾಣಬಹುದು ಮತ್ತು ಅದನ್ನು ಒಡೆಯುವಂತೆ ನಿಮಗೆ ಅನಿಸಬಹುದೂ ಕೂಡ.
ನಿಮ್ಮ ಕಣ್ಣಿನ ರೆಪ್ಪೆಗಳ ಬಳಿ ಉಂಟಾಗುವ ಗುಳ್ಳೆಗಳ ಬಗ್ಗೆ ನೀವು ತಿಳಿದಿರಬೇಕಾದ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಏನಿದು ಗುಳ್ಳೆ?
ಇವುಗಳೇನು ಜೀವಕ್ಕೆ ಕುತ್ತು ತರುವಂತ ಅಂಶಗಳಲ್ಲ. ಆದರೂ ಇವುಗಳಿಗೆ ಸರಿಯಾದ ಚಿಕಿತ್ಸೆ ನೀಡಬೇಕು. ಕಣ್ಣನ್ನು ನೀರಿನಾಂಶದಿಂದ ತುಂಬುವ ಜವಾಬ್ದಾರಿ ಹೊತ್ತಿರುವ ಕಣ್ಣಿನ ಗುಡ್ಡೆಯ ಮೇಯಿಬಾಮಿಯಾನ್ ಗ್ರಂಥಿಗಳಲ್ಲಿ ಬ್ಯಾಕ್ಟೀರಿಯಾಗಳು ಸೇರಿಕೊಂಡರೆ ಈ ಗುಳ್ಳೆಗಳು ಉಂಟಾಗುತ್ತವೆ. ಈ ಬ್ಯಾಕ್ಟೀರಿಯಾಗಳು ಸಾಮಾನ್ಯವಾಗಿ ಕಣ್ಣಿನ ರೆಪ್ಪೆಯ ಕೂದಲಿನಿಂದ ಬರುತ್ತವೆ. ಅದರಲ್ಲೂ ಬ್ಲೇಫಾರಿಟಿಸ್ ಎಂಬ ಬ್ಯಾಕ್ಟೀರಿಯಾ ಸೇರಿಕೊಂಡರಂತೂ ನಿಮ್ಮ ರೆಪ್ಪೆಯ ಅಂಚಿನಲ್ಲಿ ಯಾವಾಗಲೂ ಗಟ್ಟಿಯಾದ ಪಿಸಿರು ಕಟ್ಟುವುದನ್ನ ಕಾಣಬಹುದು.
ಈ ಗುಳ್ಳೆಗಳು ಮೊದಲಿಗೆ ಕೆಂಪು ಬಣ್ಣದ್ದಾಗಿರುತ್ತವೆ ಮತ್ತು ಮುಟ್ಟಿದರೆ ನೋವು ಉಂಟು ಮಾಡುತ್ತವೆ. ಆದರೆ ಕಾಲಕ್ರಮೇಣ ಇವುಗಳು ಕಡಿಮೆ ಕೆಂಪು ಬಣ್ಣ ಹೊಂದುತ್ತಾ ಮತ್ತು ಕಡಿಮೆ ನೋವು ಉಂಟು ಮಾಡುತ್ತಾ ಹೋಗುತ್ತವೆ. ಇವುಗಳು ಸಾಮಾನ್ಯವಾಗಿ ನಿಮ್ಮ ಕಣ್ಣಿನ ರೆಪ್ಪೆಯ ಮೇಲೆ ಕಾಣಿಸಿಕೊಳ್ಳುತ್ತವೆ ಅಥವಾ ಕೆಳಗಡೆ ಕಾಣಿಸಿಕೊಳ್ಳುತ್ತವೆ.
ಇವುಗಳನ್ನ ಹೇಗೆ ಹೋಗಲಾಡಿಸಬೇಕು?
ಒಂದು ವೇಳೆ ನಿಮ್ಮಲ್ಲೂ ಈ ಗುಳ್ಳೆಗಳು ಕಾಣಿಸಿಕೊಂಡರೆ, ಯಾವುದೇ ಕಾರಣಕ್ಕೂ ನೀವು ಇತರೆ ಗುಳ್ಳೆಗಳನ್ನ ಒಡೆದುಕೊಳ್ಳುವಂತೆ ಈ ಗುಳ್ಳೆಯನ್ನು ಕೈಯಿಂದ ಅಥವಾ ಬೇರೆ ಯಾವ ಚೂಪಾದ ವಸ್ತುವಿನಿಂದ ಒಡೆದುಕೊಳ್ಳಲೇ ಬಾರದು. ಏಕೆಂದರೆ, ಈ ಬ್ಯಾಕ್ಟೀರಿಯಾ ಸೋಂಕು ನಿಮ್ಮ ಕಣ್ಣಿನ ರೆಪ್ಪೆಯ ಇತರೆ ಭಾಗಗಳಿಗೂ ಹರಡುತ್ತದೆ ಮತ್ತು ಕಣ್ಣಿನ ಕೇಂದ್ರ ಭಾಗಗಳಿಗೂ ಹರಡುವ ದೊಡ್ಡ ಅಪಾಯ ಇರುತ್ತದೆ. ಇನ್ನೂ ಕೆಲವೊಂದು ವಿರಳ ಪ್ರಕರಣಗಳಲ್ಲಿ ಈ ಸೋಂಕು ಮೆದುಳಿಗೂ ಹರಡಿ, ಮಾರಣಾಂತಿಕ ಆಗಬಹುದು.
ಹೀಗಾಗಿ ಇವುಗಳು ಕಾಣಿಸಿಕೊಂಡರೆ, ವೈದ್ಯರನ್ನ ಭೇಟಿ ಮಾಡಿ. ಅವರು ನಿಮಗೆ ಆಂಟಿಬಯೋಟಿಕ್ ಮಾತ್ರೆಗಳನ್ನ ನೀಡುತ್ತಾರೆ. ಅದು ನಿಮ್ಮ ಸೋಂಕು ಕಡಿಮೆ ಆಗುವಂತೆ ಮಾಡುತ್ತದೆ. ಈ ಸೋಂಕು ನಿರ್ಮೂಲನೆಯನ್ನು ಮತ್ತಷ್ಟು ಚುರುಕುಗೊಳಿಸಲು ನೀವು ಒಂದು ಬಟ್ಟೆಯಲ್ಲಿ ಉಪ್ಪನ್ನು ಕಟ್ಟಿ ಬಿಸಿ ಮಾಡಿಯೋ ಅಥವಾ ಬಿಸಿನೀರನ್ನು ವಾಟರ್ ಬ್ಯಾಗ್ ಅಲ್ಲಿ ಕಟ್ಟಿಕೊಂಡಿಯೋ ನಿಮ್ಮ ಕಣ್ಣಿನ ಗುಳ್ಳೆಗೆ ಬಿಸಿ ನೀಡಿಕೊಳ್ಳಿ. ಇದು ಸೋಂಕು ಮತ್ತಷ್ಟು ಬೇಗ ಕರಗುವಂತೆ ಮಾಡುತ್ತದೆ.
ತುಂಬಾ ಅಪರೂಪದ ಪ್ರಕರಣಗಳಲ್ಲಿ ಇವೆಲ್ಲವನ್ನ ಮಾಡಿದ ಮೇಲೆಯೂ ಗುಳ್ಳೆ ಹೋಗುವುದಿಲ್ಲ. ಆಗ ನಿಮಗೆ ವೈದ್ಯರು ಸರ್ಜರಿ ಮಾಡಿಸಿಕೊಳ್ಳಲು ಸೂಚಿಸುತ್ತಾರೆ.
ಅದೇನೇ ಇದ್ದರೂ, ನೀವಂತೂ ಈ ಗುಳ್ಳೆಯನ್ನ ಉಗುರುಗಳಿಂದ ಆಗಲಿ ಅಥವಾ ಮತ್ತ್ಯಾವುದೋ ಚೂಪಾದ ವಸ್ತುವಿನಿಂದ ಒಡೆಯಲು ಪ್ರಯತ್ನಿಸಲೇ ಬೇಡಿ.
Comments are closed.