ಮಂಗಳೂರು/ಗುರುಪುರ, ಜೂನ್.12: ಕುಲಶೇಖರ-ಮೂಡುಬಿದಿರೆ-ಸೋಲಾಪುರ ರಾಷ್ಟ್ರೀಯ ಹೆದ್ದಾರಿ 169ರ ಗುರುಪುರ ಫಲ್ಗುಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ನೂತನ ಸೇತುವೆ ಶುಕ್ರವಾರ ಲೋಕಾರ್ಪಣೆಗೊಂಡಿತು.
ಸಂಸದ ನಳಿನ್ ಕುಮಾರ್ ಕಟೀಲ್ ಅವರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಮತ್ತು ಮಂಗಳೂರು ಉತ್ತರ ಶಾಸಕ ಡಾ.ಭಾರತ್ ವೈ ಶೆಟ್ಟಿ ಅವರು ಹೊಸ ಸೇತುವೆಯನ್ನು ಇಂದು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು ಕೇಂದ್ರ ಹಾಗೂ ರಾಜ್ಯ ಸರಕಾರ ಮೂಲಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡಿ ಕೆಲಸ ಮಾಡುತ್ತಿದೆ. ಗುರುಪುರ ಸೇತುವೆ ಬೇಡಿಕೆ ಬಹಳ ವರ್ಷಗಳಿಂದ ಇತ್ತು. ಅನುದಾನ ನೀಡಿ ಸಹಕರಿಸಿದ ಕೇಂದ್ರದ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಕೃತಜ್ಞತೆಗಳು. “175 ಮೀಟರ್ ಗುರುಪುರ ಸೇತುವೆಯನ್ನು ಪೂರ್ಣಗೊಳಿಸಲು ಟೆಂಡರ್ ಪ್ರಕಾರ ಎರಡು ವರ್ಷಗಳ ಗಡುವು ನೀಡಲಾಗಿದ್ದರೂ 16 ತಿಂಗಳಲ್ಲಿ ಪೂರ್ಣಗೊಂಡಿದೆ ಎಂದು ಹೇಳಲು ಸಂತೋಷವಾಗುತ್ತಿದೆ ಎಂದರು.
ಗುರುಪುರ ಸೇತುವೆ ನಿರ್ಮಾಣದ ಸಮಯವೇ ಒಂದು ದಾಖಲೆಯಾಗಿದೆ . ಮೊಗರೋಡಿ ಕನ್ ಸ್ಟ್ರಕ್ಷನ್ ಕೇವಲ ಒಂದೂವರೆ ವರ್ಷದಲ್ಲಿ ಸೇತುವೆ ನಿರ್ಮಾಣ ಮಾಡಿ ದಾಖಲೆ ನಿರ್ಮಿಸಿದೆ. ಮುಲರಪಟ್ನಾ ಸೇತುವೆ ಧಿಡೀರ್ ಕುಸಿತ ಕಂಡಾಗ , ಹಳೆಯ ಗುರುಪುರ ಸೇತುವೆಯ ಬಗ್ಗೆ ಎಚ್ಚರಿಕೆ ವಹಿಸಿ ಹೊಸ ಸೇತುವೆ ನಿರ್ಮಿಸಲು ನಿರ್ಧರಿಸಲಾಯಿತು. 39.42 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣದ ಸೇತುವೆ ಇದೀಗ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಂಡಿದೆ ಎಂದು ನಳಿನ್ ಕುಮಾರ್ ಕಟೀಲ್ ಹರ್ಷ ವ್ಯಕ್ತಪಡಿಸಿದರು.
ಶಾಸಕ ಡಾ.ಭರತ್ ಶೆಟ್ಟಿ ವೈ ಮಾತನಾಡಿ, ನೂತನ ಸೇತುವೆ ದಾಖಲೆ ಸಮಯದಲ್ಲಿ ನಿರ್ಮಿಸಿ ಜನ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ .ಸ್ಥಳೀಯವಾಗಿ ಹೊಸ ಅಭಿವೃದ್ಧಿ ಕಾರ್ಯಗಳಿಗೂ ಸೇತುವೆ ಪ್ರಧಾನ ಪಾತ್ರ ವಹಿಸಲಿದೆ. ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಹೆದ್ದಾರಿ ಅಗಲೀಕರಣವಾಗಲಿದೆ ಎಂದರು.
ದಾಖಲೆಯ ಸಮಯದಲ್ಲಿ ನಿರ್ಮಾಣ: ಸುಮಾರು 39.42 ಕೋ.ರೂ. ವೆಚ್ಚದ ಈ ಸೇತುವೆ ನಿರ್ಮಾಣ ಕಾರ್ಯ ಕಳೆದ ವರ್ಷದ ಫೆಬ್ರವರಿಯಲ್ಲಿ ಆರಂಭಗೊಂಡಿದೆ. ಕಾಮಗಾರಿ ಪೂರ್ಣಗೊಳಿಸಲು 2 ವರ್ಷದ ಗಡುವು ನೀಡಲಾಗಿದ್ದರೂ ಕೂಡ ನಗರದ ಕಾವೂರಿನ ಮೊಗ್ರೋಡಿ ಕನ್ಸ್ಟ್ರಕ್ಷನ್ ಕಂಪೆನಿಯು ಕೇವಲ ಒಂದೂವರೆ ವರ್ಷದಲ್ಲಿ ಪೂರ್ಣಗೊಳಿಸಿದೆ. ಸೇತುವೆ ನಿರ್ಮಾಣಕ್ಕೆ ಮೊಗರೋಡಿ ಕನ್ಸ್ಟ್ರಕ್ಷನ್ ಕಂಪೆನಿಯು ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡಿದ್ದು, 7 ಅಂಗಣಗಳ ಸೇತುವೆಯ ಎರಡೂ ಬದಿಯಲ್ಲಿ ಪಾದಚಾರಿಗಳು ನಡೆದಾಡುವ ಘೋಟ್ ನಾತ್ ಹಾಗೂ ಎರಡೂ ತುದಿಗಳಲ್ಲಿ ತಲಾ 500 ಮೀಟರ್ ಉದ್ದಕ್ಕೆ ರಸ್ತೆ ಅಗಲೀಕರಣಗೊಳಿಸಲಾಗಿದೆ.
ಗುರುಪುರ ಸೇತುವೆಯ ಕಾಮಗಾರಿಯು ಅತ್ಯಂತ ಕ್ಷಿಪ್ರಗತಿಯಲ್ಲಿ ನಡೆದಿದೆ. ಹಳೆ ಸೇತುವೆಯಲ್ಲಿ ಘನ ವಾಹನ ಹೊರತುಪಡಿಸಿ ಉಳಿದ ವಾಹನಗಳ (ತ್ರಿಚಕ್ರ, ದ್ವಿಚಕ್ರ) ಸಂಚಾರಕ್ಕೆ ಸಂಬಂಧಿಸಿ ಸಮಾಲೋಚಿಸ ಲಾಗುವು ದು ಎಂದು ಶಾಸಕ ಡಾ. ಭರತ್ ಶೆಟ್ಟಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ಕೋಟಾ ಸುದರ್ಶನ್, ಮುಗ್ರೋಡಿ ಸುಧಾಕರ ಶೆಟ್ಟಿ ಮತ್ತಿತ್ತರ ಗಣ್ಯರು ಉಪಸ್ಥಿತರಿದ್ದರು.
Comments are closed.