ರಾಷ್ಟ್ರೀಯ

ಟೆಸ್ಟ್ ವರದಿ ಬರುವ ಮುನ್ನವೇ ತಾಳಿ ಕಟ್ಟಿದ ವರನಿಗೆ ಕೊರೋನಾ ಸೋಂಕು

Pinterest LinkedIn Tumblr


ಪಾಲ್ಘಾರ್: ಮಾರಕ ಕೊರೋನಾ ವೈರಸ್ ಗೆ ಮಹಾರಾಷ್ಟ್ರ ರಾಜ್ಯ ತತ್ತರಿಸಿ ಹೋಗಿದ್ದು, ಇದೀಗ ಇದೇ ರಾಜ್ಯದಲ್ಲಿ ಕೊರೋನಾ ಸೋಂಕು ಪೀಡಿತ ನವ ಮದುಮಗನ ವಿರುದ್ಧ ಪ್ರಕರಣ ದಾಖಲಾಗಿದೆ.

ಹೌದು.. ಮಹಾರಾಷ್ಟ್ರದಲ್ಲಿ ಕೊರೋನಾ ಮರಣ ಮೃದಂಗ ಮುಂದುವರೆಯುತ್ತಿರುವಂತೆಯೇ ಅಲ್ಲಿನ ಜನರಲ್ಲಿ ನಿರ್ಲಕ್ಷ್ಯತನ ಕೂಡ ಮುಂದುವರೆದಿದೆ. ಇದಕ್ಕೆ ಈ ಪ್ರಕರಣ ಸ್ಪಷ್ಟ ಉದಾಹರಣೆಯಾಗಿದ್ದು, ಇಲ್ಲೋರ್ವ ಯುವಕ ಕೊರೋನಾ ಸೋಂಕು ಟೆಸ್ಟ್ ಮಾಡಿಸಿದ್ದು, ಅದರ ವರದಿ ಬರುವ ಮುನ್ನವೇ ಮದುವೆ ಮಾಡಿಕೊಂಡಿದ್ದಾನೆ. ಆಘಾತಕಾರಿ ವಿಚಾರವೆಂದರೆ ಆತನಿಗೆ ಮದುವೆಯಾದ ಬಳಿಕ ವರದಿ ಬಂದಿದ್ದು, ಅದರಲ್ಲಿ ಮದುಮಗನಿಗೆ ಕೊರೋನಾ ಪಾಸಿಟಿವ್ ಎಂದು ಬಂದಿದೆ. ಇದೀಗ ಮದುಮಗ ಮಾತ್ರವಲ್ಲದೇ ಆತನ ಪತ್ನಿ ಮತ್ತು ಮದುವೆಗೆ ಹಾಜರಾಗಿದ್ದವರೆಲ್ಲರೂ ಸೋಂಕಿನ ಭೀತಿ ಎದುರಿಸುತ್ತಿದ್ದಾರೆ.

ಇದೇ ಕಾರಣಕ್ಕೆ ಇದೀಗ ಪೊಲೀಸರು ಮದುಮಗ ಮತ್ತು ಆತನ ಪೋಷಕರ ವಿರುದ್ಧ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಿದ್ದಾರೆ.

ಇಷ್ಟಕ್ಕೂ ಅಗಿದ್ದೇನು?
ಮಹಾರಾಷ್ಟ್ರದ ವಾಡಾದ ಲ್ಯಾಂಬ್ ವೊಂದರಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಯುವಕನ ಗಂಟಲು ದ್ರವವನ್ನು ಕೋರೋನಾ ಪರೀಕ್ಷೆಗೆ ಕಳುಹಿಸಲಾಗಿತ್ತು. ಆದರೆ ಜೂನ್ 11ರಂದು ತನ್ನ ಮದುವೆ ಇದ್ದ ಕಾರಣ ಆತ ವರದಿ ಬರುವುದನ್ನೂ ಕಾಯದೇ ಊರಿಗೆ ತೆರಳಿದ್ದ. ಪಾಲ್ಗಾರ್ ನ ಜಾವ್ಹರ್ ನ ಕೇಲ್ಘಾರ್ ಪ್ರಾಂತ್ಯದಲ್ಲಿ ಯುವತಿಯನ್ನು ಮದುವೆಯಾಗಿದ್ದ. ಈ ಮದುವೆಗಾಗಿ ಸುಮಾರು 100ಕ್ಕೂ ಅಧಿಕ ವ್ಕಕ್ತಿಗಳನ್ನು ಆಹ್ವಾನಿಸಲಾಗಿತ್ತು. ಆದರೆ ಮದುವೆಗೆ 50 ಜನರಿಗಿಂತ ಅಧಿಕ ಮಂದಿ ಸೇರುವಂತಿಲ್ಲ ಎಂಬ ನಿಯಮವಿದ್ದರಿಂದ ಸ್ಥಳಕ್ಕಾಗಮಿಸಿದ ಪೊಲೀಸರು ಮದುಮಗ ಮತ್ತು ಆತನ ಕುಟುಂಬಸ್ಥರನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಆತ ಪರೀಕ್ಷೆಗೊಳಪಟ್ಟ ಮಾಹಿತಿ ನೀಡಿದ್ದು, ಅದರ ವರದಿಯನ್ನು ತರಿಸಿಕೊಂಡ ಅಧಿಕಾರಿಗಳಿಗೆ ಆತನಿಗೂ ಸೋಂಕು ಇರುವುದು ಪತ್ತೆಯಾಗಿದೆ.

ಹೀಗಾಗಿ ಪೊಲೀಸರು ಮದುಮಗ ಮತ್ತು ಕುಟುಂಬಸ್ಥರ ವಿರುದ್ಧ ಐಪಿಸಿ ಮತ್ತು ವಿಪತ್ತು ನಿಯಂತ್ರಣ ನಿರ್ವಹಣಾ ಕಾಯ್ದೆ, ಸಾಂಕ್ರಾಮಿಕ ಕಾಯ್ದೆ, ಮಹಾರಾಷ್ಟ್ರ ಪೊಲೀಸ್ ಕಾಯ್ದೆಯ ಇತರ ಸಂಬಂಧಿತ ನಿಬಂಧನೆಗಳ 188 (ಸಾರ್ವಜನಿಕ ಸೇವಕ ಹೊರಡಿಸಿದ ಆದೇಶವನ್ನು ಧಿಕ್ಕರಿಸುವುದು)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಸ್ತುತ ಜಾವ್ಹರ್ ಅರೋಗ್ಯಾಧಿಕಾರಿಗಳು ಮದುವೆಯಲ್ಲಿ ಪಾಲ್ಗೊಂಡಿದ್ದವರೆಲ್ಲರನ್ನೂ ಕ್ವಾರಂಟೈನ್ ಮಾಡಿದ್ದು ಎಲ್ಲರನ್ನೂ ಕೊರೋನಾ ಪರೀಕ್ಷೆಗೊಳಪಡಿಸುವುದಾಗಿ ಹೇಳಿದೆ.

Comments are closed.