ಕರ್ನಾಟಕ

ಮೊಬೈಲ್​ ಖರೀದಿ ಮಾಡಲು ಅಪ್ರಾಪ್ತ ಬಾಲಕನಿಂದ ಸರಣಿ ಕಳ್ಳತನ!

Pinterest LinkedIn Tumblr


ಬೆಂಗಳೂರು (ಜೂ.18): ಸಾಮಾಜಿಕ ಜಾಲತಾಣಗಳ ಮೇಲೆ ಮೋಹಗೊಂಡ ಅಪ್ರಾಪ್ತ ಬಾಲಕನೊಬ್ಬ ಪೋನ್ ಖರೀದಿಗಾಗಿ ಕಳ್ಳತನಕ್ಕಿಳಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಗರದ ವಿವೇಕನಗರ ಠಾಣಾ ವ್ಯಾಪ್ತಿ ನಿವಾಸಿಯಾದ ಬಾಲಕನಿಗೆ ಸ್ಮಾರ್ಟ್ ಫೋನ್ ಖರೀದಿ ಮಾಡುವ ಆಸೆ ಉಂಟಾಗಿದೆ ಆದರೆ, ಪೋನ್ ಖರೀದಿಸಲು ಹಣದ ಅವಶ್ಯಕತೆ ಇದ್ದು, ಇದಕ್ಕಾಗಿ ಅಂಗಡಿಗಳಲ್ಲಿ ಕಳ್ಳತನ ಮಾಡಿದ್ದಾನೆ!

ಹುಡುಗನ ಸ್ನೇಹಿತರು ಸ್ಮಾರ್ಟ್ ಫೋನ್ ಬಳಕೆ ಮಾಡುತ್ತಿದ್ದರಂತೆ. ಅಲ್ಲದೆ ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದರಂತೆ. ಇದನ್ನ ಸಾಕಷ್ಟು ಬಾರಿ ಗಮನಸಿದ್ದ ಹುಡುಗ ತಾನು ಸಹ ಒಳ್ಳೆ ಸ್ಮಾರ್ಟ್ ಪೋನ್ ಖರೀದಿ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಬೇಕು ಅಂತ ಅಲೋಚಿಸಿದ್ದ. ಆದರೆ, ಸ್ಮಾರ್ಟ್ ಫೋನ್ ಖರೀದಿಗೆ ಹೆಚ್ಚಿನ ಹಣದ ಅವಶ್ಯಕತೆ ಇದ್ದರಿಂದ ಹುಡುಗ ಕಳ್ಳತನದ ಮಾರ್ಗ ಹಿಡಿದಿದ್ದಾನೆ.

ಜೂನ್ 9 ರಂದು ನಗರದ ಪ್ರಮುಖ ವ್ಯಾಪಾರ ವಹಿವಾಟು ಏರಿಯಾಗಳಾದ ವಿಠ್ಠಲ ಮಲ್ಯ ರಸ್ತೆ, ಲ್ಯಾವೆಲ್ಲೆ ರಸ್ತೆ, ಸೇಂಟ್ ಮಾರ್ಕ್ ರಸ್ತೆಯ ನಾಲ್ಕು ಅಂಗಡಿಗಳಲ್ಲಿ ಕಳ್ಳತನ ಆಗಿತ್ತು. ಒಂದೇ ದಿನ ನಡೆದ ಈ ಸರಣಿ ಕಳ್ಳತನ ಬಗ್ಗೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಅಂಗಡಿಗಳ ಸಿಸಿಟಿವಿ ಪರಿಶೀಲನೆ ನಡೆಸಿದ್ದಾರೆ.

ಈ ವೇಳೆ ಓರ್ವ ಹುಡುಗ ಅಂಗಡಿಗಳ ಬಳಿ ಓಡಾಡುತ್ತಿರುವುದು ಪತ್ತೆಯಾಗಿದ್ದು ಬಳಿಕ ಪೊಲೀಸರು ಆತನನ್ನ ಪತ್ತೆ ಮಾಡಿ ವಿಚಾರಿಸಿದ್ದಾರೆ. ಪೊಲೀಸರ ತನಿಖೆ ವೇಳೆ ಬಾಲಕ ಸ್ಮಾರ್ಟ್ ಫೋನ್ ಹಾಗೂ ಸೋಷಿಯಲ್‌ ಮೀಡಿಯಾ ವ್ಯಾಮೋಹದ ಬಗ್ಗೆ ಬಾಯ್ಬಿಟ್ಟಿದ್ದಾನೆ. ಸದ್ಯ ಕಬ್ಬನ್ ಪಾರ್ಕ್ ಪೊಲೀಸರು ಬಾಲಕನನ್ನ ಬಾಲಮಂದಿರಕ್ಕೆ ಕಳಿಸಿಕೊಟ್ಟಿದ್ದಾರೆ.

ಅದೇನೇ ಇರಲಿ ಪುಟ್ಟ ಮಕ್ಕಳ ಮೇಲೆ ಸ್ಮಾರ್ಟ್ ಫೋನ್‌ಗಳು ಮತ್ತು ಸೋಷಿಯಲ್‌ ಮೀಡಿಯಾ ಬೀರುತ್ತಿರುವ ಪ್ರಭಾವ ಭಯ ಹುಟ್ಟಿಸುವಂತೆ ಮಾಡಿದೆ. ಸಾಮಾಜಿಕ ಜಾಲತಾಣಗಳು ಹಾಗೂ ಪೋನ್ ಗಳಿಂದ ಬೆಳೆಯೋ ವಯಸ್ಸಿನಲ್ಲೆ ಮಕ್ಕಳು ದಾರಿ ತಪ್ಪುವ ಘಟನೆಗಳು ಬೆಳಕಿಗೆ ಬರುತ್ತಿದ್ದು ಪೋಷಕರು ತಮ್ಮ ಮಕ್ಕಳ ಬಗ್ಗೆ ಇನ್ನಷ್ಟು ಕೇರ್ ತೆಗೆದುಕೊಳ್ಳುವುದು ಅನಿವಾರ್ಯ ಅನ್ನೋದು ಸಾರ್ವಜನಿಕರ ಮಾತು.

Comments are closed.