ಕುಂದಾಪುರ: ಉಡುಪಿ ಜಿಲ್ಲೆಯಲ್ಲಿ ಈ ವರೆಗೆ ಪತ್ತೆಯಾಗಿರುವ 1039ಸೋಂಕಿನ ಪ್ರಕರಣಗಳಲ್ಲಿ ಕೇವಲ 92 ಪ್ರಕರಣಗಳು ಮಾತ್ರ ಸಕ್ರೀಯವಾಗಿದೆ. ಈ ಪೈಕಿ ಕುಂದಾಪುರ ಹಾಗೂ ಬೈಂದೂರು ಭಾಗದಲ್ಲಿಯೇ ಗರಿಷ್ಠ 755 ಪ್ರಕರಣಗಳು ಪತ್ತೆಯಾಗಿತ್ತು. ಇದರಲ್ಲಿ ಕೇವಲ 59 ಪ್ರಕರಣಗಳು ಮಾತ್ರ ಸಕ್ರೀಯವಾಗಿದೆ. ಶೇಖಡವಾರು ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರನ್ನು ಗುಣಪಡಿಸುವಲ್ಲಿ ಇಲ್ಲಿನ ಡಾ.ನಾಗಭೂಷಣ ಉಡುಪ, ಡಾ.ರಾಬರ್ಟ್ ರೆಬೆಲ್ಲೋ, ಡಾ.ನಾಗೇಶ್, ಡಾ.ಕೆ.ಪ್ರೇಮಾನಂದ, ಡಾ.ಸನ್ಮಾನ್ ಶೆಟ್ಟಿ ಮುಂತಾದ ವೈದ್ಯ ತಂಡದ ನೇತ್ರತ್ವದಲ್ಲಿ ಕೊವಿಡ್–19 ವಾರಿಯರ್ಸ್ ಹಗಲಿರುವ ಸೇವೆಯನ್ನು ಮಾಡಿ ಮಾದರಿಯಾಗಿದ್ದಾರೆ. ಕುಂದಾಪುರದ ಡಾ.ಜಿ.ಶಂಕರ್ ಆಸ್ಪತ್ರೆಯನ್ನು ಅಮ್ಲಜನಕ, ವೆಂಟಿಲೇಟರ್ ಮುಂತಾದ ಸೌಲಭ್ಯಗಳನ್ನು ಅಳವಡಿಸಿ ಸುಸಜ್ಜಿತ ಕೊವಿಡ್–19 ಆಸ್ಪತ್ರೆಯನ್ನಾಗಿಸುವಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಕುಂದಾಪುರ ತಾಲ್ಲೂಕು ಆರೋಗ್ಯ ಇಲಾಖೆಯ ಕಚೇರಿಯಲ್ಲಿ ಶುಕ್ರವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್ (ಜಿವಿಟಿ) ವತಿಯಿಂದ ನೀಡಲಾದ ಗಂಟಲು ದ್ರವ ಮಾದರಿ ಸಂಗ್ರಹ ‘ಸೆಲ್ಕೋ ಕಿಯೋಸ್ಕ್ ’ ಸೌರ ಚಾಲಿತ ಘಟಕಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸೌರ ಚಾಲಿತ ಕಿಯೋಸ್ಕ್…..
ಭಾರತೀಯ ವಿಕಾಸ ಟ್ರಸ್ಟ್ ಸೌರ ಚಾಲಿತ ಗಂಟಲು ದ್ರವ ಮಾದರಿ ಸಂಗ್ರಹ ’ಕಿಯೋಸ್ಕ್’ ನೀಡಿರುವುದು, ಕೋವಿಡ್–19 ವಿರುದ್ಧ ಹೋರಾಟ ನಡೆಸುತ್ತಿರುವ ಕೊವಿಡ್ ವಾರಿಯರ್ಸ್‌ಗಳ ಆತ್ಮ ವಿಶ್ವಾಸವನ್ನು ಹೆಚ್ಚಿಸಿದೆ. ಈ ಹಿಂದೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ ಅವರ ಮಾರ್ಗದರ್ಶನದಲ್ಲಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ಸಂಚಾರಿ ಗಂಟಲು ದ್ರವ ಮಾದರಿ ಸಂಗ್ರಹ ಘಟಕವನ್ನು ಜಿಲ್ಲೆಯಲ್ಲಿ ಪ್ರಾರಂಭಿಸಲಾಗಿತ್ತು. ‘ಉಡುಪ’ ಮಾದರಿಗೆ ರಾಜ್ಯದಲ್ಲಿಯೇ ವಿಶೇಷ ಬೇಡಿಕೆ ಇದೆ. ಸರ್ಕಾರದ ಸಲಹೆಯಂತೆ ಹೆಚ್ಚು ಸಂಚಾರಿ ಘಟಕವನ್ನು ಪ್ರಾರಂಭಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದರು.
ಜನರು ಯಾವುದನ್ನು ಮುಚ್ಚಿಡಬೇಡಿ…
ಸೋಂಕು ಕಾಣಿಸಿಕೊಂಡ ತಕ್ಷಣ ವೈದ್ಯಕೀಯ ಚಿಕಿತ್ಸೆ ನೀಡುವುದರಿಂದ ಕಾಯಿಲೆಯನ್ನು ಕೂಡಲೇ ಗುಣಪಡಿಸಲು ಪ್ರಯತ್ನ ಮಾಡಬಹುದು. ಆದರೆ ಪರಿಸ್ಥಿತಿ ಕೈ ಮೀರಿ ಹೋದ ಬಳಿಕ ವೈದ್ಯರಿಗೂ ರೋಗಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗುದಿಲ್ಲ. ಈ ಹಿನ್ನೆಲೆಯಲ್ಲಿ ಹೊರ ಭಾಗದಿಂದ ಬಂದವರು ಸರ್ಕಾರದ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಕೊವಿಡ್–19 ಶಂಕೆಯ ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ಫಿವರ್ ಕ್ಲಿನಿಕ್‌ಗಳಿಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳುವುದನ್ನು ನಿರ್ಲಕ್ಷ್ಯ ಮಾಡಬಾರದು ಎಂದು ಜಿಲ್ಲಾಧಿಕಾರಿಗಳು ಸಾರ್ವಜನಿಕರನ್ನು ವಿನಂತಿಸಿಕೊಂಡಿದ್ದಾರೆ.
ಕಂದಾಯ ಉಪವಿಭಾಗಾಧಿಕಾರಿ ಕೆ.ರಾಜು, ಸೆಲ್ಕೋ ಕಂಪೆನಿಯ ವಲಯ ಮಹಾಪ್ರಬಂಧಕ ಗುರುಪ್ರಸಾದ್ ಶೆಟ್ಟಿ, ಭಾರತೀಯ ವಿಕಾಸ್ ಟ್ರಸ್ಟ್‌ನ ಸಿಇಓ ಮನೋಹರ್ ಕೆ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ, ಡಾ.ರಾಬರ್ಟ್ ರೆಬೆಲ್ಲೋ, ಡಾ.ನಾಗೇಶ್ ಇದ್ದರು.
(ವರದಿ- ಯೋಗೀಶ್ ಕುಂಭಾಸಿ)
Comments are closed.