ರಾಷ್ಟ್ರೀಯ

ರಾಜ್ಯಸಭೆ ಚುನಾವಣೆ ಫಲಿತಾಂಶ; ಬಿಜೆಪಿಗೆ 8, ಕಾಂಗ್ರೆಸ್​ಗೆ 4, ಇತರೆ ಪಕ್ಷಗಳಿಗೆ 6 ಸ್ಥಾನಗಳು

Pinterest LinkedIn Tumblr


ನವದೆಹಲಿ: ಇಂದು(ಶುಕ್ರವಾರ) ದೇಶದ ಎಂಟು ರಾಜ್ಯಗಳ 18 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆದಿದೆ. ಉಳಿದಂತೆ, ಕರ್ನಾಟಕ ಹಾಗೂ ಅರುಣಾಚಲ ಪ್ರದೇಶದಲ್ಲಿ ಅವಿರೋಧ ಆಯ್ಕೆ ನಡೆದಿದ್ದು, ಮತದಾನ ನಡೆಯುತ್ತಿರುವ ರಾಜ್ಯಗಳ ಚುನಾವಣಾ ಫಲಿತಾಂಶ ಹೊರಬಿದ್ದಿದೆ.

ಆಂಧ್ರಪ್ರದೇಶದಲ್ಲಿ ವೈಎಸ್​ಆರ್​ಸಿಪಿ ನಾಲ್ಕು ಸ್ಥಾನಗಳನ್ನು ಪಡೆದುಕೊಂಡಿದೆ. ಮಧ್ಯಪ್ರದೇಶದಲ್ಲಿ ಬಿಜೆಪಿ ಎರಡು ಸ್ಥಾನಗಳಲ್ಲಿ ಹಾಗೂ ಕಾಂಗ್ರೆಸ್ ಒಂದು ಸ್ಥಾನದಲ್ಲಿ ಗೆಲುವು ಸಾಧಿಸಿದೆ. ಹಾಗೆಯೇ ರಾಜಸ್ಥಾನದಲ್ಲಿ ಕಾಂಗ್ರೆಸ್ ಎರಡು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಬಿಜೆಪಿ ಒಂದು ಸ್ಥಾನ ಪಡೆದುಕೊಂಡಿದೆ. ಗುಜರಾತ್​ನಲ್ಲಿ ಮತ ಎಣಿಕೆ ಪ್ರಕ್ರಿಯೆ ತಡವಾಗಿದೆ. ಜಾರ್ಖಂಡ್​ನಲ್ಲಿ ಜೆಎಂಎಂ ವರಿಷ್ಠ ಶಿಬು ಸೊರೆನ್ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ದೀಪಕ್ ಪ್ರಕಾಶ್ ಗೆಲುವು ಸಾಧಿಸುವ ಮೂಲಕ ರಾಜ್ಯಸಭೆ ಪ್ರವೇಶಿಸಿದ್ದಾರೆ.

ಆಂಧ್ರಪ್ರದೇಶ ಹಾಗೂ ಗುಜರಾತ್​ ರಾಜ್ಯಗಳಲ್ಲಿ ತಲಾ ನಾಲ್ಕು ಸ್ಥಾನಗಳು, ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ತಲಾ ಮೂರು ಸ್ಥಾನಗಳು, ಜಾರ್ಖಂಡ್​ನಲ್ಲಿ ಎರಡು ಸ್ಥಾನ, ಮಣಿಪುರ, ಮಿಜೋರಾಂ ಹಾಗೂ ಮೇಘಾಲಯದಲ್ಲಿ ತಲಾ ಸ್ಥಾನಗಳಿಗೆ ಇಂದು ಮತದಾನ ನಡೆದಿದೆ.

ಕರ್ನಾಟಕದಲ್ಲಿ ನಾಲ್ಕು ಸ್ಥಾನಗಳಿಗೆ ಇಂದೇ ಚುನಾವಣೆ ನಡೆಯಬೇಕಿತ್ತು. ಆದರೆ, ನಾಲ್ವರು ಅಭ್ಯರ್ಥಿಗಳು ಮಾತ್ರ ಸ್ಪರ್ಧಿಸಿದ್ದರಿಂದ ಎಲ್ಲರೂ ಅವಿರೋಧವಾಗಿ ಆಯ್ಕೆಯಾಗಿದ್ಧಾರೆ. ಬಿಜೆಪಿಯಿಂದ ಅಶೋಕ್ ಗಸ್ತಿ, ಈರಣ್ಣ ಕಡಾಡಿ, ಕಾಂಗ್ರೆಸ್​ನಿಂದ ಮಲ್ಲಿಕಾರ್ಜುನ ಖರ್ಗೆ ಮತ್ತು ಕಾಂಗ್ರೆಸ್ ಬೆಂಬಲದೊಂದಿಗೆ ಜೆಡಿಎಸ್​ನಿಂದ ಹೆಚ್.ಡಿ. ದೇವೇಗೌಡ ಅವರು ರಾಜ್ಯಸಭೆ ಪ್ರವೇಶ ಗಿಟ್ಟಿಸಿದ್ಧಾರೆ. ಅರುಣಾಚಲ ಪ್ರದೇಶದಲ್ಲೂ ಬಿಜೆಪಿ ಅಭ್ಯರ್ಥಿ ನಬಮ್​ ರೆಬಿಯಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಬಿಜೆಪಿ 3, ಕಾಂಗ್ರೆಸ್​ 1 ಹಾಗೂ ಇತರೆ ಒಂದು ಸ್ಥಾನ ಪಡೆದುಕೊಂಡಿದೆ.

ಮಧ್ಯಪ್ರದೇಶದ ಕಾಂಗ್ರೆಸ್‌ ಶಾಸಕ ಕುನಾಲ್ ಚೌಧರಿ ಅವರಿಗೆ ಮಾರಕ ಕೊರೋನಾ ಸೋಂಕು ತಗುಲಿದ್ದರೂ ಸಹ ಪಿಪಿಇ ಕಿಟ್‌ ಧರಿಸಿ ವಿಧಾನಸಭೆಗೆ ಆಗಮಿಸಿ ಮತ ಚಲಾಯಿಸುವ ಮೂಲಕ ಇಡೀ ರಾಷ್ಟ್ರದ ಗಮನ ಸೆಳೆದಿದ್ದಾರೆ. ಶಾಸಕ ಕುನಾಲ್‌ ಚೌಧರಿ ಅವರಿಗೆ ಜೂನ್ 12 ರಂದು ಕೊರೋನಾ ತಗುಲಿರುವುದು ಖಚಿತವಾಗಿತ್ತು. ಹೀಗಾಗಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಈ ಕೊರೋನಾ ಭೀತಿ ಅವರ ರಾಜ್ಯಸಭಾ ಮತ ಚಲಾವಣೆಗೆ ಅಡ್ಡಿಯಾಗಿಲ್ಲ. ರಾಜ್ಯಸಭಾ ಚುನಾವಣೆಗೆ ಕನಿಷ್ಠ 205 ಶಾಸಕರು ಮತ ಚಲಾಯಿಸಿದ ನಂತರ ಅವರ ಮತದಾನದ ಸರದಿ ಬಂದಿತ್ತು. ಮುಡಿಯಿಂದ ಅಡಿವರೆಗೂ ವೈಯಕ್ತಿಕ ರಕ್ಷಣಾ ಸಾಧನಗಳನ್ನು (ಪಿಪಿಇ ಸೂಟ್) ತೊಟ್ಟಿದ್ದ ಅವರು ಕೈಯಲ್ಲಿ ಮೊಬೈಲ್ ಫೋನ್ ಹಿಡಿದುಕೊಂಡು ಮತದಾನದ ಕೋಣೆಗೆ ಬಂದು ಮತ ಚಲಾಯಿಸಿದ್ದರು.

Comments are closed.