ಬಾಲಿವುಡ್ನ ಪ್ರತಿಭಾನ್ವಿತ ನಟ ಸುಶಾಂತ್ ಸಿಂಗ್ ರಜಪೂತ್ ಜೂನ್ 14 ರಂದು ಮುಂಬೈನಲ್ಲಿರುವ ತಮ್ಮ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆ ಅಭಿಮಾನಿಗಳಿಗೆ ದೊಡ್ಡ ಶಾಕ್ ನೀಡಿತ್ತು. ಬಾಲಿವುಡ್ನ ಒಳ್ಳೆಯ ನಟನನ್ನು ಕಳೆದುಕೊಂಡಿದ್ದಕ್ಕೆ ಅನೇಕರು ಬೇಸರ ಹೊರ ಹಾಕಿದ್ದರು. ಸುಶಾಂತ್ ಸಾವಿಗೆ ಬೇಸರಗೊಂಡು ಉತ್ತರ ಪ್ರದೇಶದ ಹತ್ತನೇ ತರಗತಿ ಓದುತ್ತಿದ್ದ ಅಭಿಮಾನಿಯೊಬ್ಬ ನೇಣು ಹಾಕಿಕೊಂಡಿದ್ದನು. ಇದೀಗ ಅಂತದ್ದೇ ಒಂದು ಘಟನೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಪೋರ್ಟ್ ಬ್ಲೇರ್ನಲ್ಲಿ ನಡೆದಿದೆ.
ಸುಶಾಂತ್ ಸಿಂಗ್ ಆತ್ಮಹತ್ಯೆಯಿಂದ ಖಿನ್ನತೆಗೆ ಒಳಗಾಗಿದ್ದ 15 ವರ್ಷದ ಬಾಲಕಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸುಶಾಂತ್ ಸಾವಿನ ಸುದ್ದಿ ಟಿವಿಯಲ್ಲಿ ನೋಡಿದ್ದ ಬಾಲಕಿ ಅದರ ಬಗ್ಗೆ ತನ್ನ ನೋಟ್ ಬುಕ್ನಲ್ಲಿ ಬರೆದುಕೊಂಡಿದ್ದಳು. ಇದನ್ನು ಗಮನಿಸಿದ ಆಕೆಯ ಅಜ್ಜ ಬೈದಿದ್ದಾರೆ. ಸ್ವಲ ಹೊತ್ತಿನಲ್ಲೇ ಆಕೆ ಬಾತ್ ರೂಮ್ಗೆ ತೆರಳಿ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾಳೆ.
ಈ ಬಗ್ಗೆ ಮಾತನಾಡಿದ್ದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಪೊಲೀಸ್ ಮಹಾ ನಿರ್ದೇಶಕ ದೇಪೆಂದ್ರ ಪಾಠಕ್ ‘ಸುಶಾಂತ್ ಆತ್ಮಹತ್ಯೆಯಿಂದ 15 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇಂತಹ ಆತುರ ತೀರ್ಮಾನ ತೆಗೆದುಕೊಳ್ಳುವ ಬದಲು ತಮ್ಮ ಗುರಿಯನ್ನು ತಲುಪಲು ಬದುಕಿನತ್ತ ಚಿಂತಿಸಿ ಎಂದು ಮನವಿ ಮಾಡುತ್ತೇನೆ’ ಎಂದಿದ್ದಾರೆ.
ನಂತರ ಮಾತು ಮುಂದುವರಿಸಿದ ಅವರು, ‘ನಿಮ್ಮ ಮಕ್ಕಳೊಂದಿಗೆ ಯಾವಾಗಲೂ ಮಾತನಾಡುತ್ತಾ ಇರಿ. ಅವರಲ್ಲಿ ಯಾವುದೇ ಮಾನಸಿಕ ಖಿನ್ನತೆ ಲಕ್ಷಣ ಕಂಡುಬಂದರೆ ಅದನ್ನು ಸರಿಪಡಿಸುವತ್ತ ಗಮನ ಹರಿಸಿ. ಇಂತಹ ಘಟನೆಗಳಿಗೆ ಅವಕಾಶ ಮಾಡಿ ಕೊಡಬೇಡಿ’ ಎಂದು ಹೇಳಿದರು.
Comments are closed.