ಕರಾವಳಿ

ಯಕ್ಷಗಾನ ಪ್ರದರ್ಶನ ಯು. ಟ್ಯೂಬ್ ಮೂಲಕ ನೇರಪ್ರಸಾರ : ಯಕ್ಷಧ್ರುವ ಪಟ್ಲ ಫೌಂಡೇಶನ್ ಕಾರ್ಯಕ್ಕೆ ಶ್ಲಾಘನೆ

Pinterest LinkedIn Tumblr

ಯಕ್ಷಗಾನ, ಕಲೆ ಕಲಾವಿದರಿಗಷ್ಟೇ ಸೀಮಿತವಾಗದೆ ವಿಶ್ವವ್ಯಾಪಿಯಾಗಿ ಪಸರಿಸಬೇಕು : ಕಲ್ಕೂರ

ಮಂಗಳೂರು : ನಮ್ಮ ನಾಡಿನ ಶ್ರೇಷ್ಠ ಕಲೆಯಾದ ಯಕ್ಷಗಾನವು ಕೇವಲ ಕಲಾವಿದರಿಗಷ್ಟೇ ಸೀಮಿತವಾಗಬಾರದು, ಬದಲಾಗಿ ಈ ಕಲೆ ವಿಶ್ವವ್ಯಾಪಿಯಾಗಿ ಪಸರಿಸಬೇಕು. ಈ ನೆಲೆಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್, ಯಕ್ಷಗಾನ ಪ್ರದರ್ಶನವನ್ನು ವಿದ್ಯುನ್ಮಾನ ಮಾಧ್ಯಮವಾದ ಯು. ಟ್ಯೂಬ್ ಮೂಲಕ ನೇರಪ್ರಸಾರ ಮಾಡುವ ಮೂಲಕ ಶ್ಲಾಘನೀಯ ಕಾರ್ಯವನ್ನೇ ಮಾಡಿದೆ ಎಂದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಹೇಳಿದರು.

ಅವರು ಪಾವಂಜೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಪಟ್ಲ ಫೌಂಡೇಶನ್ ಮತ್ತು ಹೋಟೇಲ್ ಕಾಶಿ ಪ್ಯಾಲೇಸ್ ಉಜಿರೆ ಇದರ ಸಹಯೋಗದೊಂದಿಗೆ ಜರಗಿದ ಯಕ್ಷಗಾನ ಸರಣಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ದಲ್ಲಿ ಮಾತನಾಡುತ್ತಿದ್ದರು.

ಶಾಸ್ತ್ರಿ ಸುಳ್ಳಾಗಬಹುದು ಆದರೆ ಶಾಸ್ತ್ರ ಸುಳ್ಳಲ್ಲ ಎಂಬ ನಾಣ್ಣುಡಿಯಂತೆ ನಮ್ಮ ದೇಶದ ಜನರ ಜೀವ ಪದ್ಧತಿ, ನಂಬಿಕೆ, ಆಹಾರ, ಕಲಾರಾಧನೆ, ದೇವತಾರಾಧನೆ ಇವೆಲ್ಲವೂ ‘ಕೊರೋನಾ’ದ ಈ ಸಂಕಷ್ಟ ಪರಿಸ್ಥಿಯನ್ನು ಎದುರಿಸುವುದಕ್ಕೆ ಶಕ್ತವಾಗಿದೆ, ಇಂತಹ ಕ್ಲಿಷ್ಟಕರ ಪರಿಸ್ಥಿಯಲ್ಲೂ ಮನೆಯಲ್ಲೇ ಕುಳಿತಿರುವ ಕಲಾಭಿಮಾನಿ ಗಳಿಗೆ ಯಕ್ಷಗಾನದ ಪ್ರದರ್ಶನವನ್ನು ಯು. ಟ್ಯೂಬ್ ಮೂಲಕ ನೇರಪ್ರಸಾರ ಮಾಡಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಅತ್ಯುತ್ತಮ ಕೆಲಸವನ್ನೇ ಮಾಡಿದೆ ಎಂದು ಶ್ಲಾಘಿಸಿದರು ಇದರಿಂದ ಕಲಾವಿದರಲ್ಲೂ ಆತ್ಮವಿಶ್ವಾಸ ಹೆಚ್ಚಬಹುದು ಎಂದರು.

ವೇದಿಕೆಯಲ್ಲಿ ಪಾವಂಜೆ ಸುಬ್ರಹ್ಮಣ್ಯ ಕ್ಷೇತ್ರದ ಆಡಳಿತ ಮೊಕ್ತೇಸರ ಶಶಿಧರರಾವ್, ಯಕ್ಷಸಂಘಟಕ ಭುಜಬಲಿ ಧರ್ಮಸ್ಥಳ, ಪಟ್ಲ ಫೌಂಡೇಶನ್ ಮುಂಬೈ ಘಟಕದ ಪ್ರಮುಖ ಕರ್ನಿರೆ ವಿಶ್ವನಾಥ ಶೆಟ್ಟಿ, ಅಮೇರಿಕಾ ಘಟಕದ ಕಿರಣ್ ರಾವ್ ಫಿನಿಕ್ಸ್, ಅರ್ಥದಾರಿ ಸೇರಾಜೆ ಸತ್ಯನಾರಾಯಣ ಭಟ್, ಯಕ್ಷ ಸಂಘಟಕ ಜೋಕಿಂ ಕೊರೆಯಾ, ಗಂಗಾಧರ ಶೆಟ್ಟಿ ನಿಡ್ಡೋಡಿ, ರತ್ನಾಕರ ಶೆಟ್ಟಿ, ಸುಮಂಗಲಾ ರತ್ನಾಕರ್, ಸುರೇಶ್ ಕುಮಾರ್ ರೈ ಮೊದಲಾದವರು ಉಪಸ್ಥಿತರಿದ್ದರು. ಯಕ್ಷಧ್ರುವ ಪಟ್ಲ ಫೌಂಡೇಶನ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಸ್ವಾಗತಿಸಿದರು, ಪುರುಷೋತ್ತಮ ಭಂಡಾರಿ ನಿರ್ವಹಿಸಿದರು.

Comments are closed.