ಬೆಂಗಳೂರು(ಜೂ.22): ರಾಜಧಾನಿ ಬೆಂಗಳೂರಿನಲ್ಲಿ ಮತ್ತಿಬ್ಬರು ಪೊಲೀಸ್ ಕಾನ್ಸ್ಟೇಬಲ್ಗಳಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಇಂದು ಬೆಳಿಗ್ಗೆ ಬಂದ ಕೋವಿಡ್-19 ವರದಿಯಲ್ಲಿ ಕುಮಾರಸ್ವಾಮಿ ಲೇಔಟ್ ಹೆಡ್ ಕಾನ್ಸ್ಟೇಬಲ್ ಹಾಗೂ ಸಿಸಿಬಿಯಲ್ಲಿ ಕೆಲಸ ಮಾಡುತ್ತಿದ್ದ ಮತ್ತೋರ್ವ ಪೊಲೀಸ್ಗೆ ಕೊರೋನಾ ಕಾಣಿಸಿಕೊಂಡಿದೆ. ಇದರೊಂದಿಗೆ ನಗರದಲ್ಲಿನ ಸೋಂಕಿತ ಪೊಲೀಸರ ಸಂಖ್ಯೆ 66ಕ್ಕೇರಿದೆ.
ಇನ್ನು, ಕುಮಾರಸ್ವಾಮಿ ಲೇಔಟ್ನ ಹೆಡ್ ಕಾನ್ಸ್ಟೇಬಲ್ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿದ್ದರಿಂದ ಹತ್ತು ದಿನಗಳ ಕಾಲ ರಜೆಯನ್ನು ನೀಡಲಾಗಿತ್ತು. ಜೊತೆಗೆ ಮೂರು ದಿನಗಳ ಹಿಂದೆ ಕೊರೋನಾ ಚೆಕಪ್ ಸಹ ಮಾಡಲಾಗಿತ್ತು. ಆದರೆ, ಇಂದು ಇವರಿಗೆ ಕೊರೋನಾ ಪಾಸಿಟಿವ್ ಇರುವುದು ಖಚಿತವಾಗಿದೆ. ಹೀಗಾಗಿ ಈ ಸೋಂಕಿತ ಪೊಲೀಸನನ್ನು ವಿಕ್ಟೋರಿಯಾದ ಐಸೋಲೇಷನ್ ವಾರ್ಡ್ಗೆ ಶಿಫ್ಟ್ ಮಾಡಲಾಗಿದೆ.
ಹಾಗೆಯೇ ಸಿಸಿಬಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಮೂವರು ಪೊಲೀಸರಿಗೆ ಈ ಹಿಂದೆಯೇ ಪಾಸಿಟಿವ್ ಕಾಣಿಸಿಕೊಂಡಿತ್ತು. ಅವರ ಸಂಪರ್ಕದಲ್ಲಿದ್ದ ಮತ್ತೊಬ್ಬ ಪೊಲೀಸ್ ಕಾನ್ಸ್ಟೇಬಲ್ಗೆ ಈಗ ಕೊರೋನಾ ಪತ್ತೆಯಾಗಿದೆ. ಓಲಾ ವಂಚನೆ ಪ್ರಕರಣ ಸಂಬಂಧ ಕೊರೋನಾ ಕಾಣಿಸಿಕೊಂಡ ಆರೋಪಿಯನ್ನು ಬಂಧಿಸಿದ್ದರಿಂದ 14 ಜನ ಪೊಲೀಸರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿತ್ತು. ಈ ಪೈಕಿ ಒಬ್ಬರು ಈ ಕಾನ್ಸ್ಟೇಬಲ್ ಎಂಬ ಶಂಕೆ ವ್ಯಕ್ತವಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೊಂಕಿತರ ಸಂಖ್ಯೆ ಹೆಚ್ಚಾಗುತ್ತಲೇ. ಈ ನಡುವೆ ಪೊಲೀಸರಿಗೆ ಸೋಂಕು ಬೆಂಬಿಡದೆ ಕಾಡುತ್ತಿದ್ದು, ಮಹಾಮಾರಿ ಕೊರೋನಾದಿಂದ ಮೂವರು ಪೊಲೀಸ್ ಸಿಬ್ಬಂದಿ ಮೃತಪಟ್ಟಿದ್ದಾರೆ. ಇದರಿಂದ ಎಚ್ಚೆತ್ತ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ನಗರದ ಎಲ್ಲಾ ಠಾಣೆಗಳಿಗೆ ಸೂಚನೆ ರವಾನಿಸಿದ್ದಾರೆ.
ಯಾವುದೇ ಕೇಸ್ನಲ್ಲೂ ಆರೋಪಿಗಳನ್ನು ಮುಟ್ಟಬಾರದು. ವಯಸ್ಸಾದ ಸಿಬ್ಬಂದಿ ಬದಲಿಗೆ ಯಂಗ್ ಇರುವ ಸಿಬ್ಬಂದಿಯನ್ನು ಹೆಚ್ಚುವರಿವಾಗಿ ನೇಮಿಸಬೇಕು. ಅಲ್ಲದೇ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕೆಲಸ ಮಾಡಬೇಕು. ಹೊಯ್ಸಳಾ ಪೊಲೀಸರು ಸುಖಾಸುಮ್ಮನೇ ತಿರುಗಾಡಬಾರದು. ಸ್ಟೇಷನ್ನಲ್ಲಿ ಎಲ್ಲದಕ್ಕೂ ಬಿಸಿ ನೀರು, ಸ್ಯಾನಿಟೈಸರ್ ಕಡ್ಡಾಯಬಾಗಿರಬೇಕು ಎಂದು ಖಡಕ್ ಆಗಿ ಆರ್ಡರ್ ಮಾಡಲಾಗಿದೆ.
Comments are closed.