ಕರ್ನಾಟಕ

ಬೆಂಗಳೂರು ಪೊಲೀಸರನ್ನು ಬೆಂಬಿಡದೆ ಕಾಡುತ್ತಿರುವ ಕೊರೋನಾ ವೈರಸ್ ; ಐದು ಮಂದಿ ಪೊಲೀಸರಲ್ಲಿ ಸೋಂಕು ದೃಢ

Pinterest LinkedIn Tumblr

ಬೆಂಗಳೂರು: ಮಾರಕ ಕೊರೋನಾ ವೈರಸ್ ಬೆಂಗಳೂರು ಪೊಲೀಸರನ್ನು ಬೆಂಬಿಡದೆ ಕಾಡುತ್ತಿದ್ದು, ಇಂದೂ ಕೂಡ ಐದು ಮಂದಿ ಪೊಲೀಸರಲ್ಲಿ ಸೋಂಕು ದೃಢವಾಗಿದೆ.

ನಗರದ ಮಾರತ್ ಹಳ್ಳಿಯ ಪೊಲೀಸ್ ಠಾಣೆಯ ನಾಲ್ವರು ಹಾಗೂ ವಿವಿಪುರಂ ಠಾಣೆಯ ಓರ್ವ ಪೇದೆ ಸೇರಿ‌ ಐವರು ಪೊಲೀಸರಿಗೆ ಸೋಂಕು ದೃಢಪಟ್ಟಿದೆ. ಮಾರತ್ ಹಳ್ಳಿ ಪೊಲೀಸ್ ಠಾಣೆಯ ನಾಲ್ವರು ಸಿಬ್ಬಂದಿಗೆ ಕೊರೊನಾ ಸೋಂಕು ಧೃಡ ಪಟ್ಟಿರುವ ಹಿನ್ನೆಲೆಯಲ್ಲಿ ಅವರ ಜೊತೆಗೆ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ ಸಿಬ್ಬಂದಿಯನ್ನು ಕ್ವಾರಂಟೈನ್‌ ಮಾಡಲಾಗಿದೆ.

ಇದಲ್ಲದೆ ಸೋಂಕು ಧೃಡಪಟ್ಟಿರುವ ನಾಲ್ವರು ಕುಟುಂಬದವರನ್ನು ಕ್ವಾರಂಟೈನ್‌ ಮಾಡಲಾಗಿದೆ. ಮಾರತ್ ಹಳ್ಳಿ ಪೊಲೀಸ್ ಠಾಣೆಯನ್ನು ಸ್ಯಾನಿಟೈಸ್ ಮಾಡಿ ಸೀಲ್ ಡೌನ್ ಮಾಡಲಾಗಿದೆ. ಇದರ ಜೊತೆಗೆ ವಿವಿ ಪುರಂ ಪೊಲೀಸ್ ಠಾಣೆಯ ಪೇದೆಯೊಬ್ಬರಿಗೆ ಸೋಂಕು ತಗುಲಿದೆ. ಕಳೆದ 25 ದಿನಗಳಿಂದ ರಜೆಯಲ್ಲಿದ್ದ ಪೇದೆಯು ಚಾಮರಾಜನಗರಕ್ಕೆ ಹೋಗಿದ್ದು ವಾಪಸ್ ಬಂದ ನಂತರ ನಡೆಸಿದ ಪರೀಕ್ಷೆಯಲ್ಲಿ ಸೋಂಕು ತಗುಲಿರುವುದು ಧೃಡ ಪಟ್ಟಿದೆ.

ಅವರ ಜೊತೆಗೆ ಠಾಣೆಯ ಯಾರೂ ಸಂಪರ್ಕದಲ್ಲಿರದಿದ್ದರಿಂದ ಯಾರನ್ನು ಕ್ವಾರಂಟೈನ್‌ ಮಾಡಿಲ್ಲ ಆದರೆ ಠಾಣೆಯನ್ನು ಸ್ಯಾನಿಟೈಸ್ ಮಾಡಲಾಗಿದೆ. ಐವರು ಹೊಸ ಸೋಂಕಿತರ ಪತ್ತೆಯಿಂದ ನಗರ ಪೊಲೀಸ್ ಕಮೀಷನರೇಟ್ ನಲ್ಲಿ ಕೊರೊನಾ ಸೋಂಕು ತಗುಲಿದವರ ಪೊಲೀಸ್ ಸಂಖ್ಯೆ 75ಕ್ಕೆ ಏರಿದೆ.

ನಿನ್ನೆಯಷ್ಟೇ ತಿಲಕ್‌ನಗರ ಮತ್ತು ಹಲಸೂರು ಗೇಟ್‌ ಪೊಲೀಸ್‌ ಠಾಣೆಗಳು ಲಾಕ್‌ಡೌನ್‌ ವ್ಯಾಪ್ತಿಗೆ ಸೇರ್ಪಡೆಯಾಗಿದ್ದವು. ಸರಗಳ್ಳತನ ಪ್ರಕರಣದಲ್ಲಿ ಪಾದರಾಯನಪುರದ ಆರೋಪಿಯೊಬ್ಬನನ್ನು ಬಂಧಿಸಿದ್ದ ತಿಲಕ್‌ನಗರ ಪೊಲೀಸರು, ಆರೋಪಿಗೆ ಕೊರೊನಾ ಪರೀಕ್ಷೆ ಮಾಡಿಸಿದ್ದರು. ಆರೋಪಿಯನ್ನು ಠಾಣೆಯಲ್ಲೇ ಇರಿಸಿಕೊಳ್ಳಲಾಗಿತ್ತು. ಸೋಮವಾರ ಬೆಳಗ್ಗೆ ಆರೋಪಿಗೆ ಪಾಸಿಟಿವ್‌ ಬಂದಿದೆ. ಹೀಗಾಗಿ, ಬಂಧನ ಪ್ರಕ್ರಿಯೆ ನಡೆಸಿ ಪ್ರಾಥಮಿಕ ಸಂಪರ್ಕಕ್ಕೆ ಬಂದ ಸುಮಾರು ಐವರನ್ನು ಕ್ವಾರಂಟೈನ್‌ ಮಾಡಲಾಗಿತ್ತು.

ಇದೇ ವೇಳೆ ಕ್ವಾರಂಟೈನ್‌ನಲ್ಲಿದ್ದ ಸಿಸಿಬಿಯ ಮತ್ತಿಬ್ಬರು ಪೊಲೀಸರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಸಿಸಿಬಿಯ 6 ಮಂದಿ ಪೊಲೀಸರು ಸೋಂಕಿಗೆ ತುತ್ತಾದಂತಾಗಿದೆ. ಮತ್ತೊಂದೆಡೆ, ಹಲಸೂರು ಗೇಟ್‌ ಪೊಲೀಸ್‌ ಠಾಣೆಯ ಹೆಡ್‌ ಕಾನ್ಸ್‌ಟೆಬಲ್‌ಗೆ ಕೋವಿಡ್‌-19 ತಗಲಿದೆ. ಕರ್ತವ್ಯ ನಿರ್ವಹಿಸುತ್ತಿದ್ದ ಕುಮಾರಸ್ವಾಮಿ ಸಂಚಾರ ಠಾಣೆಯ ಕಾನ್ಸ್‌ಟೆಬಲ್‌ಗೂ ಕೊರೊನಾ ಸೋಂಕು ತಗಲಿದೆ. ಈಗಾಗಲೇ ಲಾಕ್‌ಡೌನ್‌ ಆಗಿರುವ ಕಬ್ಬನ್‌ಪಾರ್ಕ್ ಪೊಲೀಸ್‌ ಠಾಣೆಯ ಮತ್ತೊಬ್ಬ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

Comments are closed.