ಶಿವಮೊಗ್ಗ (ಜೂ. 25): ಕ್ಯಾನ್ಸರ್ ಸೇರಿದಂತೆ ಅನೇಕ ಮಾರಣಾಂತಿಕ ರೋಗಗಳಿಗೆ ನಾಟಿ ಔಷಧಿಯ ಮೂಲಕ ಚಿಕಿತ್ಸೆ ನೀಡಿ ವಿಶ್ವಾದ್ಯಂತ ಹೆಸರು ಮಾಡಿದ್ದ ಶಿವಮೊಗ್ಗದ ಸಾಗರ ತಾಲೂಕಿನ ನರಸೀಪುರದ 80 ವರ್ಷದ ನಾಟಿ ವೈದ್ಯ ನಾರಾಯಣಮೂರ್ತಿ ಬುಧವಾರ ರಾತ್ರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಕ್ಯಾನ್ಸರ್ಗೆ ಚಿಕಿತ್ಸೆ ನೀಡಲು ದೊಡ್ಡ ಆಸ್ಪತ್ರೆಗಳು ಲಕ್ಷಾಂತರ ರೂ. ಪಡೆಯುವಾಗ ಅತಿ ಕಡಿಮೆ ದರದಲ್ಲಿ ಕ್ಯಾನ್ಸರ್ಗೆ ನಾಟಿ ಔಷಧಿ ನೀಡುತ್ತಿದ್ದ ನಾರಾಯಣ ಮೂರ್ತಿ ಅವರ ಬಳಿ ವಿದೇಶಗಳಿಂದಲೂ ರೋಗಿಗಳು ಚಿಕಿತ್ಸೆಗಾಗಿ ಬರುತ್ತಿದ್ದರು. ಸುಮಾರು 40 ವರ್ಷಗಳಿಂದ ನರಸೀಪುರದಲ್ಲಿ ನಾಟಿ ಔಷಧಿ ನೀಡುತ್ತಿದ್ದ ಇವರು ಆರಂಭದಲ್ಲಿ ಉಚಿತವಾಗಿಯೇ ಚಿಕಿತ್ಸೆ ನೀಡುತ್ತಿದ್ದರು. ನಂತರ ಕೇವಲ 100 ರೂ. ಪಡೆದು ಚಿಕಿತ್ಸೆ ನೀಡಲಾರಂಭಿಸಿದರು. ಕಿಡ್ನಿಯಲ್ಲಿ ಕಲ್ಲು, ಮಧುಮೇಹ, ಹೃದಯಸಂಬಂಧಿ ಸಮಸ್ಯೆ, ಗ್ಯಾಂಗ್ರಿನ್, ಗರ್ಭಕೋಶದ ಕ್ಯಾನ್ಸರ್, ಅನ್ನನಾಳದ ಕ್ಯಾನ್ಸರ್ ಮುಂತಾದ ಮಾರಣಾಂತಿಕ ರೋಗಗಳಿಗೆ ಇವರು ನೀಡುತ್ತಿದ್ದ ಔಷಧಿ ಬಹಳ ಪ್ರಸಿದ್ಧಿ ತಂದುಕೊಟ್ಟಿತ್ತು.
7ನೇ ತರಗತಿಯವರೆಗೆ ಮಾತ್ರ ಓದಿದ್ದ ನಾರಾಯಣಮೂರ್ತಿ ತಮ್ಮ ಮನೆಯ ಸುತ್ತಮುತ್ತ ಸಿಗುವ ಗಿಡಮೂಲಿಕೆಗಳಿಂದಲೇ ಔಷಧಿ ತಯಾರಿಸುತ್ತಿದ್ದರು. ಅವರು ಬುಧವಾರ ರಾತ್ರಿ 10 ಗಂಟೆಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಗಿಡಮೂಲಿಕೆಗಳಿಂದಲೇ ಲಕ್ಷಾಂತರ ರೋಗಿಗಳ ಕಾಯಿಲೆ ವಾಸಿ ಮಾಡಿರುವ ಇವರ ನಾಟಿ ಚಿಕಿತ್ಸೆಯ ಬಗ್ಗೆ ‘ನ್ಯಾಷನಲ್ ಜಿಯೋಗ್ರಾಫಿಕ್ ಚಾನೆಲ್’ ಕೂಡ ವಿಶೇಷ ವರದಿ ಪ್ರಸಾರ ಮಾಡಿತ್ತು. ಇವರು ಹೆಂಡತಿ, ಮಗ ಮತ್ತು ನಾಲ್ವರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ.
Comments are closed.