ಒಡಿಶಾ: ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಅಬಾರ್ಷನ್ ಮಾಡಿದ ಆರೋಪದಲ್ಲಿ ಪೊಲೀಸ್ ಇನ್ಸ್ಪೆಕ್ಟರೊಬ್ಬನನ್ನು ಕೆಲಸದಿಂದ ಅಮಾನತು ಮಾಡಲಾಗಿದೆ.
ಒಡಿಶಾದ ಬುಡಕಟ್ಟು ಸಮುದಾಯದ ಜನರು ಪ್ರಾಬಲ್ಯವಿರುವ ಸುಂದರ್ಘರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಬಿರಾಮಿತ್ರಪುರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆನಂದ್ ಚಂದ್ರ ಮಾಝಿ ಮತ್ತು ಇತರ ಐವರು ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾರೆ.
ಕಳೆದ ಮಾರ್ಚ್ 25ರಂದು ಬಿರಾಮಿತ್ರಪುರದಲ್ಲಿ ಪ್ರತೀ ವರ್ಷ ನಡೆಯುವ ಜಾತ್ರೆಯನ್ನು ಕಣ್ತುಂಬಿಕೊಳ್ಳಲು ಬಾಲಕಿ ಬಂದಿದ್ದಳು. ಆದರೆ ಲಾಕ್ಡೌನ್ ಇದ್ದಿದ್ದರಿಂದ ಜಾತ್ರೆಯನ್ನು ರದ್ದು ಮಾಡಲಾಗಿತ್ತು. ಈ ವೇಳೆ ಮನೆಗೆ ಹಿಂತಿರುಗಲು ಬಾಲಕಿ ವಿಫಲವಾಗಿ ಅಲ್ಲೇ ಬಸ್ಸ್ಟ್ಯಾಂಡ್ನಲ್ಲಿ ತಿರುಗಾಡುತ್ತಿದ್ದಳು. ಇದನ್ನು ಗಮನಿಸಿದ ರಾತ್ರಿ ಗಸ್ತಿನಲ್ಲಿದ್ದ ಪೊಲೀಸರ ತಂಡ ಆಕೆಯನ್ನು ಪೊಲೀಸ್ ಸ್ಟೇಷನ್ಗೆ ಕರೆತಂದಿದ್ದಾರೆ.
ಅಪ್ರಾಪ್ತ ಬಾಲಕಿಯನ್ನು ಪೊಲೀಸ್ ಠಾಣೆಗೆ ಕರೆತಂದ ಬಳಿಕ ಇನ್ಸ್ಪೆಕ್ಟರ್ ಸೇರಿದಂತೆ ಠಾಣೆಯಲ್ಲಿದ್ದ ಇತರೆ ಪೊಲೀಸ್ ಸಿಬ್ಬಂದಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಮರುದಿನ ಆಕೆಯ ಮನೆಗೆ ತಲುಪಿಸಿದ್ದಾರೆ. ನಂತರ ಆಕೆ ಗರ್ಭಿಣಿಯಾಗಿರೋದನ್ನು ಅರಿತ ಪೊಲೀಸರು ವೈದ್ಯರ ಮೂಲಕ ಗರ್ಭಪಾತ ಮಾಡಿಸಿದ್ದಾರೆ.
ಘಟನೆಯ ಸುದ್ದಿ ತಿಳಿದ ಜಿಲ್ಲಾ ಮಕ್ಕಳ ಸಂರಕ್ಷಣಾ ಅಧಿಕಾರಿ ಎಸ್ ಜೇನಾ ಅವರು, ಪೊಲೀಸ್ ಇನ್ಸ್ಪೆಕ್ಟರ್, ಗರ್ಭಪಾತ ಮಾಡಿದ ವೈದ್ಯ, ಬಾಲಕಿಯ ಮಲತಂದೆ ಮತ್ತು ಇನ್ನಿಬ್ಬರ ವಿರುದ್ಧ ದೂರು ದಾಖಲಿಸಿದ್ದರು. ಇದೀಗ ಘಟನೆ ನಡೆದ ಮರುದಿನವೇ ಇನ್ಸ್ಪೆಕ್ಟರ್ನನ್ನು ಕೆಲಸದಿಂದ ಅಮಾನತು ಮಾಡಲಾಗಿದೆ. ಕೆಲವು ಆರೋಪಿಗಳು ತಲೆಮರೆಸಿಕೊಂಡಿದ್ದು ಅವರ ಪತ್ತೆಗಾಗಿ ಬಲೆ ಬೀಸಲಾಗಿದೆ.
Comments are closed.