ಚಾಮರಾಜನಗರ (ಜೂನ್ 27); ಜಿಲ್ಲೆಯ ಮೆಡಿಕಲ್ ಕಾಲೇಜಿನ ಮಹಿಳಾ ಲ್ಯಾಬ್ ಟೆಕ್ನಿಷಿಯನ್, ಪೊಲೀಸ್ ಇಲಾಖೆಯ ವೈರ್ಲೆಸ್ ಎಎಸ್ಐ ಹಾಗೂ ಭೂಮಾಪಕಿಯ ಸಹಾಯಕ ಸೇರಿದಂತೆ ಇಂದು 13 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ 33 ಕ್ಕೆ ಏರಿದೆ.
ಇಂದು ಮೆಡಿಕಲ್ ಕಾಲೇಜಿನ ಕೋವಿಡ್ ಪ್ರಯೋಗಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬದನಗುಪ್ಪೆ ಗ್ರಾಮದ ಮಹಿಳಾ ಲ್ಯಾಬ್ ಟೆಕ್ನಿಷಿಯನ್ ಹಾಗೂ ಆಕೆಯ ಪತಿಗೆ ಸೋಂಕು ತಗುಲಿದೆ. ಈ ಹಿನ್ನಲೆಯಲ್ಲಿ ಇವರು ವಾಸಿಸುತ್ತಿದ್ದ ಚಾಮರಾಜನಗರ ತಾಲೂಕು ಬದನಗುಪ್ಪೆ ಗ್ರಾಮದ ಬೀದಿಯೊಂದನ್ನು ಸೀಲ್ಡೌನ್ ಮಾಡಲಾಗಿದೆ.
ಚಾಮರಾಜನಗರ ಪೊಲೀಸ್ ಇಲಾಖೆಯಲ್ಲಿ ವೈರ್ಲೆಸ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಎಸ್ಐ ಒಬ್ಬರಿಗೂ ಕೊರೋನಾ ಸೋಂಕು ತಗುಲಿದ್ದು ಇವರು ವಾಸಿಸುತ್ತಿದ್ದ ಚಾಮರಾಜನಗರ ತಾಲೂಕು ಚಂದಕವಾಡಿ ಗ್ರಾಮದ ಬೀದಿಯನ್ನು ಸಹ ಸೀಲ್ಡೌನ್ ಮಾಡಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗಿದೆ.
ಈಗಾಗಲೇ ಕೊರೋನಾ ದೃಢಪಟ್ಟಿದ್ದ ಚಾಮರಾಜನಗರದ ಭೂಮಾಪಕಿಯ ಸಹಾಯಕನಿಗೂ ಸೋಂಕು ತಗುಲಿದೆ. ಹಾಗಾಗಿ ಈತ ವಾಸ ಮಾಡುತ್ತಿದ್ದ ಚಾಮರಾಜನಗರ ತಾಲೂಕು ಭುಜಗನಪುರ ಗ್ರಾಮದ ಬೀದಿಯನ್ನು ಸೀಲ್ಡೌನ್ ಮಾಡಿ ಇಡೀ ಗ್ರಾಮಕ್ಕೆ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗಿದೆ. ಇಷ್ಟೇ ಅಲ್ಲದೆ ಬಂದೀಗೌಡನಹಳ್ಳಿಯ ಇಬ್ಬರಿಗೆ ಗುಂಡ್ಲುಪೇಟೆಯ ಮೂವರಿಗೆ ಹಾಗೂ ಕೊಳ್ಳೇಗಾಲದ ಇಬ್ಬರಿಗೆ ಕೊರೊನಾ ದೃಢಪಟ್ಟಿದೆ.
ಇದರೊಂದಿಗೆ ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ 33ಕ್ಕೆ ಏರಿಕೆಯಾಗಿದ್ದು, ಜಿಲ್ಲೆಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಅಲ್ಲದೆ, ಗಡಿಭಾಗದ ಪ್ರದೇಶಗಳಲ್ಲಿ ಯಾರೂ ಒಳ ನುಸುಳದಂತೆ ಜಿಲ್ಲಾಡಳಿತ ಕ್ರಮವಹಿಸಿದೆ ಎನ್ನಲಾಗುತ್ತಿದೆ.
ಜುಲೈ 4 ರವರಗೆ ಚಾಮರಾಜನಗರ ಎಪಿಎಂಸಿ ತರಕಾರಿ ಮಂಡಿಗೆ ರಜೆ;
ಚಾಮರಾಜನಗರ ಜಿಲ್ಲೆಯಲ್ಲಿ ದಿನೇ ದಿನೇ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಚಾಮರಾಜನಗರ ಎಪಿಎಂಸಿ ತರಕಾರಿ ಮಂಡಿಯನ್ನು ಆರು ದಿನಗಳ ಕಾಲ ಬಂದ್ ಮಾಡಲು ನಿರ್ಧರಿಸಲಾಗಿದೆ. ಜೂನ್ 29 ರಿಂದ ಜುಲೈ 4 ರವರೆಗೆ ತರಕಾರಿ ಮಂಡಿಗೆ ರಜೆ ಮಾಡಲು ತರಕಾರಿ ವ್ಯಾಪಾರಿಗಳು, ದಲ್ಲಾಳಿಗಳು ತೀರ್ಮಾನಿಸಿದ್ದಾರೆ.
Comments are closed.