ಮಂಗಳೂರು, ಜೂನ್. 29: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 32 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 705ಕ್ಕೆ ಏರಿಕೆಯಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು ಸಂಜೆ ಬಿಡುಗಡೆಗೊಳಿಸಿದ ಬುಲೆಟಿನ್ ನಲ್ಲಿ ದ.ಕ. ಜಿಲ್ಲೆಯಲ್ಲಿ ಸೋಮವಾರ 32 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿರುವುದಾಗಿ ವರದಿಯಾಗಿದೆ.
ಸೋಂಕಿತರ ಪೈಕಿ ಒಂಬತ್ತು ಮಂದಿಗೆ ಶೀತಜ್ವರದ ಲಕ್ಷಣದೊಂದಿಗೆ (ಐಎಲ್ಐ) ಸೋಂಕು ಕಾಣಿಸಿಕೊಂಡಿದೆ. ಉಸಿರಾಟ ಸಮಸ್ಯೆಯಿಂದಾಗಿ (ಎಸ್ಎಆರ್ಐ) ಆರು ಮಂದಿ, ಪ್ರಾಥಮಿಕ ಸಂಪರ್ಕದಲ್ಲಿದ್ದ 11 ಮಂದಿ, ಹೊರರಾಜ್ಯದಿಂದ ಬಂದ ಓರ್ವರಲ್ಲಿ ಸೋಂಕು ದೃಢಪಟ್ಟಿದೆ. ಐವರು ಸೋಂಕಿತರ ಮೂಲ ಇನ್ನೂ ನಿಗೂಢವಾಗಿಯೇ ಉಳಿದುಕೊಂಡಿದೆ. ಸೋಮವಾರ ಒಟ್ಟು 458 ಪರೀಕ್ಷಾ ವರದಿಗಳು ಬಂದಿದ್ದು, ಈ ಪೈಕಿ 32 ಪಾಸಿಟಿವ್ ಮತ್ತು 426 ನೆಗೆಟಿವ್ ಆಗಿವೆ ಎಂದು ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದ.ಕ. ಜಿಲ್ಲೆಯಲ್ಲಿ ಕೊರೋನ ಸೋಂಕು ಹೆಚ್ಚಳದಿಂದ ಪರಿಸ್ಥಿತಿಗೆ ಮತ್ತಷ್ಟು ಬಿಗಡಾಯಿಸಿದ್ದು, ಸೋಮವಾರ ಓರ್ವರು ಮೃತಪಟ್ಟಿದ್ದಾರೆ. ನಗರದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಉಳ್ಳಾಲದ 60 ವರ್ಷದ ವೃದ್ಧೆ ಚಿಕಿತ್ಸೆ ಫಲಿಸದೆ ಇಂದು ಮುಂಜಾನೆ ಮೃತಪಟ್ಟಿದ್ದಾರೆ. ಈ ಮೂಲಕ ಕೊರೋನಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 14ಕ್ಕೇರಿದೆ.
ಮಂಗಳೂರಿನ ಉಳ್ಳಾಲ ನಿವಾಸಿ 60 ವರ್ಷದ ವೃದ್ದೆ ಕೆಲವು ದಿನಗಳ ಹಿಂದೆ ಸೋಂಕಿಗೆ ತುತ್ತಾಗಿದ್ದು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವರು ಲಿವರ್, ಡಯಾಬಿಟಿಸ್ ಮತ್ತು ಹೃದಯ ಖಾಯಿಲೆಯಿಂದಲೂ ಬಳಲುತ್ತಿದ್ದರು ಎಂದು ಹೇಳಲಾಗಿದ್ದು, ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
Comments are closed.