ಬೆಂಗಳೂರು: ರಾಜ್ಯದಲ್ಲಿ ಐಎಲ್‌ಐ (ಶೀತ ಜ್ವರ) ಸೋಂಕು ಹೊಂದಿರುವವರು ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿಗೊಳಗಾಗುತ್ತಿದ್ದಾರೆ. ಈ ಬಗೆಯ ಸಮಸ್ಯೆ ಇರುವ ಸುಮಾರು 21 ಸಾವಿರ ಜನರನ್ನು ಆರೋಗ್ಯ ಇಲಾಖೆ ಗುರುತಿಸಿದೆ.
ಸೋಂಕಿತರ ಸಂಖ್ಯೆ ಏರುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯಿಂದ ಮನೆ ಮನೆ ಆರೋಗ್ಯ ಸಮೀಕ್ಷೆ ನಡೆಸುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ.
ಈವರೆಗೆ ಶೇ.91 ರಷ್ಟು ಸಮೀಕ್ಷೆ ಪೂರ್ಣಗೊಂಡಿದ್ದು, 63.85 ಲಕ್ಷ ಜನರು ಸೋಂಕು ತಗಲುವ ಅಪಾಯದ ಸ್ಥಿತಿಯಲ್ಲಿದ್ದಾರೆ. ಈ ವ್ಯಕ್ತಿಗಳು 60 ವರ್ಷದ ಮೇಲ್ಪಟ್ಟವರು, ಮಧುಮೇಹ, ಐಎಲ್‌ಐ, ಉಸಿರಾಟದ ತೊಂದರೆ, ಮೂತ್ರಪಿಂಡದ ತೊಂದರೆ ಮೊದಲಾದ ಸಮಸ್ಯೆಗಳನ್ನು ಉಳ್ಳವರಾಗಿದ್ದಾರೆ. ಈ ಪೈಕಿ 21 ಸಾವಿರ ಜನರು ಐಎಲ್ ಐ ಸೋಂಕಿನಿಂದ ಬಳಲುತ್ತಿರುವುದು ಕಂಡುಬಂದಿದೆ. ಆದ್ದರಿಂದ ಇವರಿಗೆ ಕೂಡಲೇ ಆಸ್ಪತ್ರೆಗೆ ಹೋಗಿ ಕೋವಿಡ್ ಪರೀಕ್ಷೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.
ಹಾಸನ, ಉತ್ತರ ಕನ್ನಡ, ವಿಜಯಪುರ, ಚಿಕ್ಕಬಳ್ಳಾಪುರ, ಗದಗ, ಕೊಪ್ಪಳ, ಧಾರವಾಡ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿಸಮೀಕ್ಷೆ ಪೂರ್ಣಗೊಂಡಿದೆ. ಉಳಿದ ಜಿಲ್ಲೆಗಳ ಸಮೀಕ್ಷೆ ಅಂತಿಮ ಹಂತದಲ್ಲಿದೆ. ಅಂಗನವಾಡಿ, ಆಶಾ,ಆರೋಗ್ಯ ಕಾರ್ಯಕರ್ತೆಯರು ಹಾಗೂ ಶಿಕ್ಷಕರನ್ನು ಸಮೀಕ್ಷೆಗೆ ಬಳಸಿಕೊಳ್ಳಲಾಗಿದೆ. ಒಂದು ಲಕ್ಷದಷ್ಟು ಜನರು ಕೆಮ್ಮು, ಶೀತ, ಜ್ವರ ಮೊದಲಾದ ತೊಂದರೆಗಳಿಂದ ಬಳಲುತ್ತಿರುವುದು ಕಂಡುಬಂದಿದೆ. ಹೆಚ್ಚಿನವರು ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಿಕೊಂಡಿಲ್ಲ. ಅವರಿಗೆ ತಪಾಸಣೆ ಮಾಡಿಸಿಕೊಳ್ಳಲು ಸೂಚನೆ ನೀಡಲಾಗಿದೆ.
ರಾಜ್ಯದಲ್ಲಿ ಜೂ.26 ರವರೆಗೆ 11,005 ಜನರು ಸೋಂಕಿಗೊಳಗಾಗಿದ್ದಾರೆ. ಈ ಪೈಕಿ 6916 ಮಂದಿ ಗುಣಮುಖರಾಗಿದ್ದಾರೆ. ಒಟ್ಟು ಸೋಂಕಿತರಲ್ಲಿ ಉಸಿರಾಟದ ತೊಂದರೆ (ಸಾರಿ) ಮತ್ತು ಐಎಲ್‌ಐ ತೊಂದರೆಯಿಂದ ಬಳಲುತ್ತಿರುವವರು ಪ್ರಮಾಣ ಶೇ.10 ರಷ್ಟಿದೆ. ಒಟ್ಟು ಸೋಂಕಿತರಲ್ಲಿ 917 ಐಎಲ್ ಐ ಹಾಗೂ 231 ಸಾರಿ ಪ್ರಕರಣಗಳಾಗಿವೆ. ಇವರೆಡು ತೊಂದರೆ ಇರುವ ರೋಗಿಗಳೇ ಅತ್ಯಧಿಕ ಸಂಖ್ಯೆಯಲ್ಲಿ ಕೊರೊನಾ ರೋಗಿಗಳಾಗಿದ್ದಾರೆ.
ರಾಜಧಾನಿಯಲ್ಲಿ 7 ಲಕ್ಷ
ಬೆಂಗಳೂರು ನಗರದಲ್ಲಿ 7.46 ಲಕ್ಷ ಜನರು ಸೋಂಕಿಗೊಳಗಾಗುವ ಅಪಾಯದ ಮಟ್ಟದಲ್ಲಿದ್ದಾರೆ. 3 ಸಾವಿರ ಜನರು ಐಎಲ್ ಐ ನಿಂದ ಬಳಲುತ್ತಿದ್ದಾರೆ.
ರಿವರ್ಸ್ ಕ್ವಾರಂಟೈನ್ ಇಲ್ಲ
ಆರೋಗ್ಯ ಸಮೀಕ್ಷೆ ನಡೆಸುವ ಆರಂಭದಲ್ಲಿ ಅಪಾಯದ ಮಟ್ಟದಲ್ಲಿ ಇರುವವರನ್ನು ರಿವರ್ಸ್ ಕ್ವಾರಂಟೈನ್ ಮಾಡುವ ಚಿಂತನೆ ಇತ್ತು. ಆದರೆ ಈ ಕ್ರಮವನ್ನು ಜಾರಿ ಮಾಡುವ ಬಗ್ಗೆ ತೀರ್ಮಾನ ಕೈಗೊಂಡಿಲ್ಲ. ಸೋಂಕಿಗೊಳಗಾಗುವ ಸಾಧ್ಯತೆ ಇರುವವರನ್ನು ಸಮೀಕ್ಷೆಯಿಂದ ಗುರುತಿಸಿದ್ದು, ಅವರ ಆರೋಗ್ಯದ ಮೇಲೆ ಆಯಾ ಜಿಲ್ಲೆಯ ಆರೋಗ್ಯ ಕಾರ್ಯಕರ್ತರು ನಿಗಾ ಇರಿಸಲಿದ್ದಾರೆ. ರಿವರ್ಸ್ ಕ್ವಾರಂಟೈನ್ ಮಾಡುವ ಯೋಚನೆ ಇಲ್ಲ,” ಎಂದು ಆರೋಗ್ಯ ಇಲಾಖೆಯ ನಿರ್ದೇಶಕ ಡಾ.ಓಂ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
Comments are closed.