ಹೊಸದಿಲ್ಲಿ: ಒಪ್ಪೊ, ವಿವೊ, ರಿಯಲ್ ಮಿ, ಕ್ಸಿಯೊಮಿ ಮುಂತಾದ ಚೀನಾ ಮೂಲದ ಸ್ಮಾರ್ಟ್ಫೋನ್ ಉತ್ಪಾದಕ ಕಂಪನಿಗಳಿಗೆ ಭಾರತದಲ್ಲಿ ಉತ್ಪಾದನೆಗೆ ತೀವ್ರ ಹೊಡೆತ ಬಿದ್ದಿದೆ. ಈ ಕಂಪನಿಗಳು ಚೀನಾದಿಂದ ಬಿಡಿ ಭಾಗಗಳನ್ನು ಆಮದು ಮಾಡುತ್ತಿವೆ. ಆದರೆ, ಬಂದರುಗಳಲ್ಲಿ ತೀವ್ರ ತಪಾಸಣೆ, ಕೋವಿಡ್-19 ಪರಿಣಾಮ ಕಾರ್ಮಿಕರ ಕೊರತೆ ಇತ್ಯಾದಿ ಕಾರಣಗಳಿಂದ ಕೋವಿಡ್ ಪೂರ್ವ ಮಟ್ಟವನ್ನು ಹೋಲಿಸಿದರೆ ಉತ್ಪಾದನೆಯ ಪ್ರಮಾಣದಲ್ಲಿ ಶೇ. 30-40ರಷ್ಟು ಕಡಿಮೆಯಾಗಿದೆ.
ಚೀನಾ ಮೂಲದ ಸ್ಮಾರ್ಟ್ ಫೋನ್ ಉತ್ಪಾದಕ ಕಂಪನಿಗಳು ಬಿಡಿ ಭಾಗಗಳ ಆಮದಿಗೆ ಸಂಬಂಧಿಸಿ ತೊಡಕುಗಳನ್ನು ಬಗೆ ಹರಿಸಲು ಯತ್ನಿಸುತ್ತಿದ್ದಾರೆ. ಕಾರ್ಖಾನೆ ನಡೆಸುವುದಕ್ಕಿಂತಲೂ ಹೆಚ್ಚಿನ ಸಮಯವನ್ನು ಇಂಥ ಪೂರೈಕೆ ವಿಭಾಗದ ತೊಡಕುಗಳನ್ನು ಬಗೆಹರಿಸುವುದಕ್ಕೆ ಬೇಕಾಗುತ್ತಿದೆ ಎಂದು ಕಂಪನಿಗಳ ವಕ್ತಾರರು ಹೇಳುತ್ತಾರೆ.
ಭವಿಷ್ಯದ ದಿನಗಳಲ್ಲಿ ಬಿಡಿ ಭಾಗಗಳ ಪೂರೈಕೆ ಹೇಗಿರಲಿದೆ ಎಂಬ ಅತಂತ್ರ, ಆತಂಕ ಸೃಷ್ಟಿಯಾಗಿದೆ ಎನ್ನುವ ಆತಂಕ ಚೀನಾ ಕಂಪನಿಗಳ ಅಧಿಕಾರಿಗಳದ್ದಾಗಿದೆ. ದೇಶದಲ್ಲಿ ಹೆಚ್ಚುತ್ತಿರುವ ಚೀನಾ ವಿರೋಧಿ ಅಲೆಯ ಆತಂಕವೂ ಜತೆಗಿದೆ.
ಹೀಗಿದ್ದರೂ, ಇಂಡಿಯನ್ ಸೆಲ್ಯುಲಾರ್ ಆ್ಯಂಡ್ ಎಲೆಕ್ಟ್ರೋನಿಕ್ಸ್ ಅಸೋಸಿಯೇಶನ್ (ಐಸಿಇಎ) ಅಧ್ಯಕ್ಷ ಪಂಕಜ್ ಮೊಹಿಂದ್ರೊ ಪ್ರಕಾರ, ಈ ತಿಂಗಳಿನ ಅಂತ್ಯದ ವೇಳೆಗೆ ಪರಿಸ್ಥಿತಿ ಶೇ. 80ರಷ್ಟು ಸುಧಾರಿಸಲಿದೆ.
Comments are closed.