ಕರ್ನಾಟಕ

ಪತ್ನಿಗೆ ವಿಡಿಯೋ ಕಾಲ್ ಮಾಡಿ ರೈಲಿಗೆ ಅಡ್ಡಹೋಗಿ ಆತ್ಮಹತ್ಯೆ

Pinterest LinkedIn Tumblr


ದೊಡ್ಡಬಳ್ಳಾಪುರ: ಹೆಂಡತಿ ಜೊತೆ ವಿಡಿಯೋ ಕಾಲ್​ನಲ್ಲಿ ಮಾತನಾಡುತ್ತಿರುವಾಗಲೇ ಚಲಿಸುತ್ತಿದ್ದ ರೈಲಿಗೆ ತಲೆ ಕೊಟ್ಟು ಕೆಎಸ್​ಆರ್​ಟಿಸಿ ಚಾಲಕ ಕಮ್ ನಿರ್ವಾಹಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ದೊಡ್ಡಬಳ್ಳಾಪುರ ನಗರದ ಡಿ ಕ್ರಾಸ್ ಮೇಲ್ಸೇತುವೆ ಬಳಿ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಅಮರೇಶ್ ಹಿರೇಮಠ್ (40) ಎಂದು ಗುರುತಿಸಲಾಗಿದೆ.

ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಮೂಲದ ಅಮರೇಶ್ ಅವರು ಕೆಎಸ್​ಆರ್​ಟಿಸಿ ಸಂಸ್ಥೆಯ ದೊಡ್ಡಬಳ್ಳಾಪುರ ಘಟಕದಲ್ಲಿ ಚಾಲಕ ಕಮ್ ನಿರ್ವಾಹಕನಾಗಿ 9 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದ. ನಗರದ ರೋಜಿಪುರದಲ್ಲಿ ಮೃತ ವ್ಯಕ್ತಿಯ ಕುಟುಂಬ ವಾಸವಾಗಿತ್ತು.

ಗಂಡ ಹೆಂಡತಿ ನಡುವೆ ಜಗಳವಿದ್ದು, ಕೌಟುಂಬಿಕ ಕಲಹದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಂದು ಸಹ ಬೆಳಗಿನ ತಿಂಡಿ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿದೆ. ಅನಂತರ ರೈಲ್ವೆ ಟ್ರ್ಯಾಕ್ ಬಳಿಗೆ ಬಂದ ಆತ ಹೆಂಡತಿಗೆ ವಿಡಿಯೋ ಕಾಲ್ ಮಾಡಿ ತಾನು ಸಾಯುತ್ತಿರುವುದ್ದಾಗಿ ಹೇಳುತ್ತಲೇ ಚಲಿಸುತ್ತಿದ್ದ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಯಶವಂತಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಡಿಯೋ ಕಾಲ್ ಮಾಡುತ್ತಲೇ ಹೆಂಡತಿಗೆ ನಾನು ಮನೆಗೆ ಬರೊಲ್ಲ, ಇನ್ಮುಂದೆ ನನ್ನಿಂದ ತೊಂದರೆ ಇರೊಲ್ಲ ಅಂತಲೇ ರೈಲ್ವೆ ಹಳಿ ಮೇಲೆ ನಡೆದು ಹೋಗಿದ್ದ. ತಮಾಷೆ ಇರಬಹುದು ಎನ್ನುತ್ತಲೇ ಮಾತನಾಡುತ್ತಿದ್ದ ಹೆಂಡತಿಗೆ ಶಾಕ್ ಕಾದಿತ್ತು. ಎಲ್ಲೋ ಶಬ್ದ ಬರುತ್ತಿದ್ದಂತೆ ಬೇಡ ಬೇಡ ಎಂದಿದ್ದಾರೆ. ರೈಲು ಹತ್ತಿರ ಬಂದಮೇಲೆ ಹೊರ ಬರಬಹುದು, ಹೆದರಿಸೋಕೆ ಹೀಗೆ ಮಾಡ್ತಿರಬಹುದು ಎಂದು ಹೆಂದತಿ ಎಂದುಕೊಂಡಿದ್ದರು. ಅದಾಗಲೇ ಸಾಕಷ್ಟು ರೋಸಿ ಹೋಗಿದ್ದ ಅಮರೇಶ್ ಹಿರೇಮಠ, ತಾನು ತಮಾಷೆ ಮಾಡುತ್ತಿಲ್ಲ ಎನ್ನುತ್ತಿರುವಾಗಲೇ ವೇಗವಾಗಿ ಚಲಿಸುತ್ತಾ ಬಂದ ರೈಲು ಗುದ್ದಿದೆ. ಗಂಡನ ಸಾವನ್ನ ಕಣ್ಣೆದುರೇ ಕಂಡ ಹೆಂಡತಿಗೆ ಆಘಾತ ಆಗಿದ್ದು ಕುಸಿದು ಬಿದ್ದಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಹೆಂಡತಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅದೇನೇ ಇರಲಿ ಗಂಡ ಹೆಂಡಿರ ಜಗಳ ಉಂಡು ಮಲಗೋವರೆಗೂ ಅನ್ನೋ ಗಾದೆ ಮಾತಿಗೆ ವಿರುದ್ದವಾಗಿ ಯುವ ಪೀಳಿಗೆಯ ಜೀವನ ಸಾಗುತ್ತಿದೆ. ಬಾಳಿ ಬದುಕಬೇಕಿದ್ದ ಅದೆಷ್ಟೋ ಜೀವಗಳು ತುಂಡು ಹಗ್ಗ, ರೈಲ್ವೇ ಹಳಿ, ಕಾರ್ಕೋಟಕ ವಿಷದೊಂದಿಗೆ ಜೀವನ ಅಂತ್ಯ ಮಾಡಿಕೊಳ್ಳುತ್ತಿವೆ. ಅದೆಷ್ಟೋ ಯುವ ಸಂಸಾರಗಳನ್ನ ನೋಡಿದರೆ ಮಾನವೀಯ ಮೌಲ್ಯಗಳು, ಸಾಂಸಾರಿಕ ಬದ್ಧತೆ, ಸಾಮರಸ್ಯತೆಯ ಗುಣಗಳು ಮರೆಯಾಗುತ್ತಿವೆ. ಏನೋ ಮಾಡಲು ಹೋಗಿ ಮತ್ತೇನೊ ಮಾಡಿಕೊಳ್ಳಬೇಡಿ ಎಂಬುದು ನ್ಯೂಸ್18 ಕಳಕಳಿ. ತಾಳ್ಮೆ‌ ಇಲ್ಲದ ಯುವ ಸಂಸಾರಗಳು ಸ್ವಲ್ಪ ತಾಳ್ಮೆ ವಹಿಸಿದರೆ ಜೀವನ ಸುಂದರವಾಗಿರುತ್ತೆ ಅನ್ನೋದು ನಮ್ಮ ಆಶಯ.

Comments are closed.