ಕರಾವಳಿ

ಮಂಗಳೂರಿನಲ್ಲಿ ಲಾಕ್‌ಡೌನ್ ಸಂಪೂರ್ಣ ಯಶಸ್ವಿ : ವ್ಯವಹಾರ ಸಂಪೂರ್ಣ ಬಂದ್ -ನಗರ ಸಂಪೂರ್ಣ ಸ್ತಬ್ಧ

Pinterest LinkedIn Tumblr

ಮಂಗಳೂರು : ಕೊರೋನಾ ವೈರಸ್ ಸೋಂಕನ್ನು ಮಟ್ಟಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪ್ರತೀ ರವಿವಾರ ಜಾರಿಗೊಳಿಸಿದ ಲಾಕ್‌ಡೌನ್ ( ಜನತಾ ಕರ್ಫ್ಯು) ದ.ಕ.ಜಿಲ್ಲೆಯಲ್ಲಿ ಸಂಪೂರ್ಣ ಯಶಸ್ವಿಯಾಗಿದೆ.

ಪೊಲೀಸ್‌, ಆಸ್ಪತ್ರೆ ಮತ್ತು ಔಷಧಾಲಯ, ಆರೋಗ್ಯ ಇಲಾಖೆ, ಹಾಲು, ಮಾಧ್ಯಮ, ಅಗ್ನಿಶಾಮಕ ಸೇವೆಯ ವಾಹನ ಸಹಿತ ಆವಶ್ಯಕ ಸೇವೆಯ ಬೆರಳೆಣಿಕೆಯ ವಾಹನಗಳನ್ನು ಹೊರತು ಪಡಿಸಿ ಇತರ ಯಾವೂದೇ ವಾಹನಗಳು ರಸ್ತೆಗಿಳಿಯಲಿಲ್ಲ. ನಗರದ ರಸ್ತೆಗಳು ಬಿಕೋ ಎನ್ನುತ್ತಿದ್ದವು.

ಸಂಪೂರ್ಣ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಲಾಗಿತ್ತು. ಮಾರುಕಟ್ಟೆ ವ್ಯವಹಾರ ಸಂಪೂರ್ಣವಾಗಿ ಬಂದ್ ಆಗಿತ್ತು. ಮೀನಿನ ಮಾರ್ಕೆಟ್ ಮತ್ತು ತರಕಾರಿ ಮಾರ್ಕೆಟ್ ಸಹಿತ ಇತರ ಎಲ್ಲಾ ಅಂಗಡಿ – ಮುಂಗಟ್ಟುಗಳು ಮುಚ್ಚಿದ್ದವು. ಅಗತ್ಯ ಸಾಮಗ್ರಿಗಳ ಸಾಗಾಟದ ವಾಹನಗಳನ್ನು ಹೊರತುಪಡಿಸಿ ಇತರ ಯಾವೂದೇ ವಾಹನಗಳ ಓಡಾಟಕ್ಕೆ ಅವಕಾಶವಿಲ್ಲದೇ ಇದ್ದುದ್ದರಿಂದ ನಗರ ಸಂಪೂರ್ಣವಾಗಿ ಸ್ತಬ್ಧವಾಗಿತ್ತು.

ವಾಹನಗಳಿಂದ ಗಿಜಿಗುಡುತ್ತಿದ್ದ ನಗರದ ಪ್ರಮುಖ ರಸ್ತೆಗಳು ರವಿವಾರ ಮೌನವಾಗಿದ್ದವು. ನಾಗರಿಕರು ಲಾಕ್‌ಡೌನ್ ಅನ್ನು ಉಲ್ಲಂಘಿಸದಂತೆ ನೋಡಿಕೊಳ್ಳಲು ಪಂಪ್‌ವೆಲ್ ಮತ್ತು ಟೌನ್‌ಹಾಲ್ ಸಮೀಪ ಸೇರಿದಂತೆ ನಗರ ಹಲವು ಪ್ರಮುಖ ರಸ್ತೆಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ನಗರದ ವಿವಿಧ ಸ್ಥಳಗಳಾದ ಲಾಲ್‌ಬಾಗ್, ಪಂಪ್‌ವೆಲ್ ಮತ್ತು ಟೌನ್ ಹಾಲ್‌ನಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು.

ಪೊಲೀಸರು ಪ್ರಮುಖ ಜಂಕ್ಷನ್‌ಗಳು, ಆಯಕಟ್ಟಿನ ಜಾಗಗಳಲ್ಲಿ ಬ್ಯಾರಿಕೇಡ್‌ ಅಳವಡಿಸಿ ವಾಹನ ಸಂಚಾರ ನಿಯಂತ್ರಿಸಿದರು. ರಸ್ತೆಗಿಳಿದ ಬೆರಳೆಣಿಕೆಯ ವಾಹನಗಳನ್ನು ತಡೆದು ವಿಚಾರಿಸಿ, ಅನಿವಾರ್ಯ ಎಂದು ದೃಢಪಡಿಸಿಕೊಂಡು ಮುಂದುವರಿಯಲು ಅನುವು ಮಾಡಿದರು. ಅನಾವಶ್ಯಕವಾಗಿ ಸಂಚರಿಸುವವರನ್ನು ತಡೆದು ಎಚ್ಚರಿಕೆ ನೀಡಿ ವಾಪಸ್‌ ಕಳುಹಿಸಿದರು.

ಉಳ್ಳಾಲದಲ್ಲೂ ಲಾಕ್‍ಡೌನ್‌ಗೆ ಉತ್ತಮ ಪ್ರತಿಕ್ರಿಯೆ ;

ಉಳ್ಳಾಲದಾದ್ಯಂತ ಲಾಕ್‍ಡೌನ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಗತ್ಯ ವಾಹನಗಳು ಮಾತ್ರ ಸಂಚರಿಸುತ್ತಿದ್ದರೆ, ಬೇಕಾಬಿಟ್ಟಿ ತಿರುಗುವ ವಾಹನಗಳನ್ನು ಗಸ್ತು ನಿರತ ಪೊಲೀಸರು ವಾಪಸ್ಸು ಕಳುಹಿಸಿದರು.

ಉಳ್ಳಾಲ, ತೊಕ್ಕೊಟ್ಟ ತಲಪಾಡಿ, ಬೀರಿ, ಕುತ್ತಾರು, ದೇರಳಕಟ್ಟೆ , ಮುಡಿಪು, ಕೊಣಾಜೆ, ಅಸೈಗೋಳಿ ಭಾಗಗಳಲ್ಲಿ ಪೊಲೀಸರು ಚೆಕ್ ಪಾಯಿಂಟ್ ಇರಿಸಿದ್ದರು. ಆಸ್ಪತ್ರೆ, ಹಾಲು, ಪತ್ರಿಕಾ ವಾಹನಗಳನ್ನು ಹೊರತುಪಡಿಸಿ ಅಗತ್ಯ ಕಾರ್ಯದ ನಿಮಿತ್ತ ತೆರಳುವ ವಾಹನಗಳನ್ನು ಬಿಟ್ಟರೆ, ಸುಖಾಸುಮ್ಮನೆ ತಿರುಗುವ ಮಂದಿಯನ್ನು ತಡೆದು ವಾಪಸ್ಸು ಕಳುಹಿಸಿದರು.

ಬಿಜೈ ಕಾಪಿಕಾಡ್‌ನಲ್ಲಿ ಶ್ರೀಕಲಾ ಮೆಡಂ ತ್ವರಿತ ಕಾರ್ಯಾಚರಣೆ:

ಲಾಕ್‍ಡೌನ್‌ ಹಿನ್ನೆಲೆಯಲ್ಲಿ ಉರ್ವಾ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಶ್ರೀಕಲಾ ಅವರು ತಮ್ಮ ಠಾಣಾವ್ಯಾಪ್ತಿಯಲ್ಲಿ ತ್ವರಿತ ಕಾರ್ಯಾಚರಣೆ ನಡೆಸಿದರು. ಬಿಜೈ ಕಾಪಿಕಾಡ್ ಬಳಿ ಲಾಕ್‍ಡೌನ್‌ ಉಲ್ಲಂಘಿಸಿ ತೆರೆದಿದ್ದ ಅಂಗಡಿಯೊಂದನ್ನು ಮುಚ್ಚಿಸಿ, ಅಲ್ಲಿ ಸೇರಿದ್ದ ಜನರನ್ನು ಚದುರಿಸಿದರು.

ಇದೇ ವೇಳೆ ಲಾಕ್‍ಡೌನ್‌ ನಿಯಮಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿ ವಾಹನ ಚಲಾಯಿಸುತ್ತಿದ್ದ ಕಾರು, ಬೈಕ್ ಗಳನ್ನು ತಡೆದು ಬುದ್ಧಿ ಹೇಳಿ ವಾಪಸ್ಸು ಕಳುಹಿಸಿದರು. ಮಾತ್ರವಲ್ಲದೇ ಹೊಟೇಲ್ ಗಳಿಂದ ಆಹಾರಗಳ ಪಾರ್ಸೆಲ್ ಗಳನ್ನು ಸಾಗಿಸುತ್ತಿದ್ದ ಝೊಮೆಟೋ ವಾಹನಗಳ ತಪಾಷಣೆ ನಡೆಸಿ, ಸೂಕ್ತ ದಾಖಲೆಗಳಿದ್ದ ವಾಹನಗಳಿಗೆ ಮಾತ್ರ ಸಾಗಾಟಕ್ಕೆ ಅವಕಾಶ ನೀಡಿ, ದಾಖಲೆಗಳಿದ್ದ ವಾಹನ ಸವಾರರನ್ನು ತಡೆದು ವಾಪಸ್ಸು ಕಳುಹಿಸಿದರು. ಇವರ ಜೊತೆ ಇದ್ದ ಇತರ ಪೊಲೀಸ್ ಸಿಬ್ಬಂದಿಗಳು ಸಾಥ್ ನೀಡಿದರು.

ವರದಿ/ ಚಿತ್ರ : ಸತೀಶ್ ಕಾಪಿಕಾಡ್

Comments are closed.