ನವದೆಹಲಿ: ಭಾರತದಲ್ಲಿ ಕೊರೋನಾ ವೈರಸ್ ಆರ್ಭಟ ಮುಂದುವರೆದಿದ್ದು, ಒಂದೇ ದಿನ 22,252 ಮಂದಿಯಲ್ಲಿ ವೈರಸ್ ಪತ್ತೆಯಾಗಿದೆ. ಇದರೊಂದಿಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 7 ಲಕ್ಷ ಗಡಿದಾಟಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಂಗಳವಾರ ಮಾಹಿತಿ ನೀಡಿದೆ.
ಕಳೆದ 24 ಗಂಟೆಗಳಲ್ಲಿ 467 ಮಂದಿ ಮಹಾಮಾರಿ ವೈರಸ್’ಗೆ ಬಲಿಯಾಗಿದ್ದು, ಇದರೊಂದಿಗೆ ಒಟ್ಟು ಸಾವನ್ನಪ್ಪಿದವರ ಸಂಖ್ಯೆ 20,160ಕ್ಕೆ ಏರಿಕೆಯಾಗಿದೆ.
ನಿನ್ನೆ ಒಂದೇ ದಿನ ಬರೋಬ್ಬರಿ 22,252 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಸೋಂಕಿತರ ಸಂಖ್ಯೆ 7,19,665ಕ್ಕೆ ತಲುಪಿದೆ.
ಈ ನಡುವೆ 7,19,665 ಮಂದಿ ಸೋಂಕಿತರ ಪೈಕಿ 4,39,948 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಇನ್ನೂ 2,59,557 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆಂದು ತಿಳಿದುಬಂದಿದೆ.
ಆತಂಕಕಾರಿ ಸಂಗತಿಯೆಂದರೆ, ಸೋಂಕಿನ ಪ್ರಮಾಣ ಕೇವಲ 4 ದಿನಗಳಲ್ಲಿ 6 ಲಕ್ಷದಿಂದ 7 ಲಕ್ಷಕ್ಕೆ ಏರಿಕೆಯಾಗಿದೆ. ಕೊರೋನಾದಿಂದ ಅತೀ ಹೆಚ್ಚು ಬಾಧಿತವಾದ ದೇಶಗಳ ಪೈಕಿ ಅಮೆರಿಕಾ ಮತ್ತು ಬ್ರೆಜಿಲ್ ಬಳಿಕ ಭಾರತ ಮೂರನೇ ಸ್ಥಾನದಲ್ಲಿದೆ. ಆರಂಭಿಕ ಹಂತದಲ್ಲಿ ಕಟ್ಟುನಿಟ್ಟಿನ ಲಾಕ್’ಡೌನ್ ಹೇರಿಕೆ ಮಾಡಿದ್ದರಿಂದ ಕೊರೋನಾ ಪ್ರಕರಣಗಳು 1 ಲಕ್ಷದ ಗಡಿಗೆ ತಲುಪಲು 110 ದಿನಗಳು ಬೇಕಾಗಿದ್ದವು. ಬಳಿಕ 48 ದಿನಗಳ ಅಂತರದಲ್ಲಿ ಸೋಂಕಿತರ ಸಂಖ್ಯೆ 7 ಲಕ್ಷ ಗಡಿ ದಾಟಿದೆ.
ಕೊರೋನಾಗೆ ರಾಷ್ಟ್ರ ರಾಜಧಾನಿ ದೆಹಲಿ ಅಕ್ಷರಶಃ ನಲುಗಿ ಹೋಗಿದ್ದು, ಸೋಂಕಿತರ ಸಂಖ್ಯೆ 1 ಲಕ್ಷ ಗಡಿ ದಾಟಿದೆ. ದೆಹಲಿಯಲ್ಲಿ ಹೊಸದಾಗಿ 1,379 ಕೊರೋನಾ ವೈರಸ್ ಪ್ರಕರಣಗಳು ದಾಖಲಾಗಿದ್ದು, ಸೋಂಕಿತರ ಸಂಖ್ಯೆ 100823ಕ್ಕೆ ಏರಿಕೆಯಾಗಿದೆ. ಇನ್ನು ಮಹಾರಾಷ್ಟ್ರದಲ್ಲಿ ಸೋಂಕಿತರು 211987ಕ್ಕೆ ಏರಿಕೆಯಾಗಿದೆ.
ಭಾರತದಲ್ಲಿ ಕೊರೋನಾ ಸಾವಿನ ಪ್ರಮಾಣ 20 ಸಾವಿರ ಗಡಿ ದಾಟುವುದರೊಂದಿಗೆ ಭಾರತ ಸಾವಿನ ಸಂಖ್ಯೆಯಲ್ಲಿ 8ನೇ ಸ್ಥಾನಕ್ಕೆ ಏರಿಕೆಯಾಗಿದೆ.
Comments are closed.