ವಿಜಯಪುರ (ಜು. 11); ವಿಜಯಯಪುರ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಒಂದೇ ದಿನ 89 ಜನರಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, ಇಡೀ ಬಸವ ನಾಡಿನ ಜನ ಬೆಚ್ಚಿ ಬಿದ್ದಿದ್ದಾರೆ. ಈವರೆಗೆ ಜಿಲ್ಲೆಯಲ್ಲಿ ಒಟ್ಟು 710 ಜನರಲ್ಲಿ ಕೊರೋನಾ ಸೋಂಕು ಇರುವುದು ದೃಢಪಟ್ಟಿದ್ದು, ಎಲ್ಲೆಡೆ ಆತಂಕ ಮನೆ ಮಾಡಿದೆ. ಅಲ್ಲದೆ, ಸೋಂಕಿನಿಂದಾಗಿ ಪೊಲೀಸ್ ಠಾಣೆ, ಸರ್ಕಾರಿ ಕಚೇರಿಗಳು ಒಂದೊಂದೆ ಸೀಲ್ಡೌನ್ ಆಗುತ್ತಿರುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿಯೂ ಪರಿಣಮಿಸಿದೆ.
ಈವರೆಗೆ ಜಿಲ್ಲೆಯಲ್ಲಿ ಪೊಲೀಸರು, ಎನ್ಟಿಪಿಸಿ ನೌಕರರು, ಹೆಸ್ಕಾಂ ಸಿಬ್ಬಂದಿ, ಜಲಮಂಡಳಿ ಸಿಬ್ಬಂದಿ, ವೈದ್ಯರು, ನರ್ಸ್ಗಳಿಗೆ ತಗುಲಿದ್ದ ಸೋಂಕು ಈಗ ಬಡಪಾಯಿ ಪೌರ ಕಾರ್ಮಿಕರಿಗೂ ವಕ್ಕರಿಸಿದ್ದು ಮಹಾನಗರ ಪಾಲಿಕೆ ಮತ್ತು ಜಿಲ್ಲಾಡಳಿತಕ್ಕೆ ತಲೆನೋವು ತಂದಿದೆ. ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದು ಮತ್ತು ಇದು ಎಲ್ಲಾ ವರ್ಗಗಳನ್ನು ವ್ಯಾಪಿಸುತ್ತಿರುವುದು ಈ ಆತಂಕ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ.
ವಿಜಯಪುರ ನಗರದಲ್ಲಂತೂ ಬಹುತೇಕ ಬಡಾವಣೆಗಳಿಗೆ ಕೊರೋನಾ ವ್ಯಾಪಿಸಿದೆ. ಈವರೆಗೆ ದೃಢಪಟ್ಟ ಒಟ್ಟು 710 ಕೊರೋನಾ ಪಾಸಿಟಿವ್ ಪ್ರಕರಣಗಳಲ್ಲಿ ಸುಮಾರು 550 ಕ್ಕೂ ಹೆಚ್ಚು ಪ್ರಕರಣಗಳು ವಿಜಯಪುರ ನಗರದಲ್ಲಿಯೇ ಪತ್ತೆಯಾಗಿದ್ದು, ಗುಮ್ಮಟ ನಗರಿ ಇದೀಗ ಕೊರೊನಾ ಹಾಟ್ಸ್ಪಾಟ್ ಆಗುವತ್ತ ಸಾಗಿದೆ. ಅಲ್ಲದೆ, ಹಲವಾರು ಬಡಾವಣೆಗಳನ್ನು ಸೀಲ್ಡೌನ್ ಮಾಡಲಾಗುತ್ತಿದೆ.
ಈವರೆಗೆ ಪೊಲೀಸ್ ಕಾನ್ಸ್ಟೇಬಲ್ಗಳಿಗೆ ಕೊರೋನಾ ಸೋಂಕು ತಗುಲಿದ ಪರಿಣಾಮ ಜಿಲ್ಲೆಯಲ್ಲಿ ಒಟ್ಟು ನಾಲ್ಕು ಪೊಲೀಸ್ ಠಾಣೆಗಳನ್ನು ಸೀಲ್ಡೌನ್ ಮಾಡಲಾಗಿದೆ. ಇದೀಗ ಸೋಂಕು ವಿಜಯಪುರ ಎಸ್ಪಿ ಕಚೇರಿಗೂ ವಕ್ಕರಿಸಿದೆ. ಅಲ್ಲದೇ, ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ಗೂ ತಗುಲಿದೆ. ಪರಿಣಾಮ ವಿಜಯಪುರ ಎಸ್ಪಿ ಕಚೇರಿ ಮತ್ತು ಗ್ರಾಮೀಣ ಪೊಲೀಸ್ ಠಾಣೆಯನ್ನು ಸೀಲ್ಡೌನ್ ಮಾಡಲಾಗಿದೆ. ಅಲ್ಲದೆ, ಪೇದೆಯ ಪ್ರಾಥಮಿಕ ಸಂಪರ್ಕಕ್ಕೆ ಒಳಗಾದವರಲ್ಲೂ ಸೋಂಕು ವ್ಯಾಪಿಸಿದೆಯೇ? ಎಂದು ಪರೀಕ್ಷೆ ಮಾಡಲಾಗುತ್ತಿದೆ.
ಈ ಮಧ್ಯೆ ವಿಜಯಪುರ ಜಿಲ್ಲೆಯಲ್ಲಿ ನಿನ್ನೆ ಒಂದೇ ದಿನ ಇದೇ ಮೊದಲ ಬಾರಿಗೆ ಕೊರೊನಾ ಮಹಾಸ್ಪೋಟವಾಗಿದ್ದು, 89 ಜನರಲ್ಲಿ ಕೊರೋನಾ ಸೋಂಕು ತಗುಲಿದೆ. ಇದಕ್ಕಿಂತಲೂ ಹೆಚ್ಚು ಆತಂಕಕಾರಿ ವಿಷಯವೆಂದರೆ ಈ 89 ಜನರಲ್ಲಿ 71 ಜನರ ಸೋಂಕಿನ ಮೂಲವೇ ಪತ್ತೆಯಾಗಿಲ್ಲ. ಅಷ್ಟೇ ಅಲ್ಲ, ಈವರೆಗೆ ಜಿಲ್ಲೆಯಲ್ಲಿ 710 ಜನರಿಗೆ ಕೊರೋನಾ ಸೋಂಕು ತಗುಲಿರುವುದು ಜಿಲ್ಲೆಯ ಜನ ಬೆಚ್ಚಿ ಬೀಳುವಂತೆ ಮಾಡಿದ್ದು, ಜನ ಮನೆಯಿಂದ ಹೊರಬರಲೂ ಸಹ ಭೀತಿಗೆ ಒಳಗಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನಲಾಗುತ್ತಿದೆ.
Comments are closed.