ಉಡುಪಿ: ಲಕ್ಷ್ಮೀನಗರದಲ್ಲಿ ನಡೆದ ಯುವಕ ಯೋಗಿಶ್ ಪೂಜಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಪೆ ಪೊಲೀಸರು ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ. ಬೈಲಕೆರೆ ನಿವಾಸಿ ಅನುಪ್ (38) ಬಂಧಿತ ಆರೋಪಿ.
ಜುಲೈ 6 ರಾತ್ರಿ ಹೋಟೇಲೊಂದರಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಯೋಗಿಶ್ ಮತ್ತು ಆರೋಪಿಗಳೊಂದಿಗೆ ಮಾತಿನ ಚಕಮಕಿ ನಡೆದಿದ್ದು, ಗಲಾಟೆ ತಾರಕಕ್ಕೇರಿ ಆರೋಪಿಗಳು ಯೋಗೀಶ್ ಮನೆಯೆದುರೇ ಆತನನ್ನು ಹತ್ಯೆಗೈದು ಪರಾರಿಯಾಗಿದ್ದರು. ಘಟನೆಯ ಬಗ್ಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬುಧವಾರ 4 ಮಂದಿ ಆರೋಪಿಗಳನ್ನು ಬಂಧಿಸಿದ್ದರು. ಈ ಹಿಂದೆ ಕಲ್ಯಾಣಪುರದ ಸುಜಿತ್ ಪಿಂಟೋ ಮತ್ತು ಆತನ ಸಹೋದರ ರೋಹಿತ್ ಪಿಂಟೋ, ಕೊಡಂಕೂರಿನ ಪ್ರದೀಪ್ ಯಾನೆ ಅಣ್ಣು, ಅಂಬಾಗಿಲು ಪುತ್ತೂರಿನ ವಿನಯ ಬಂಧನವಾಗಿತ್ತು. ಈಗ ಅನುಪ್ ಬಂಧನದೊಂದಿಗೆ ಒಟ್ಟು ಬಂಧಿತರ ಸಂಖ್ಯೆ 5 ಕ್ಕೇ ಏರಿಕೆಯಾಗಿದೆ. ಬಂಧಿತನಿಂದ ಬೈಕ್ ವಶಪಡಿಸಿಕೊಳ್ಳಲಾಗಿದೆ.
ಜಿಲ್ಲಾ ಎಸ್ ಪಿ ಎನ್ ವಿಷ್ಣುವರ್ಧನ್, ಹೆಚ್ಚುವರಿ ಎಸ್ಪಿ ಕುಮಾರಚಂದ್ರ ಉಡುಪಿ ಡಿವೈಎಸ್ಪಿ ಟಿ. ಜೈಶಂಕರ್ ಅವರ ಮಾರ್ಗದರ್ಶನದಲ್ಲಿ ಉಡುಪಿ ಸಿಪಿಐ ಮಂಜುನಾಥ್, ಮಲ್ಪೆ ಪಿಎಸ್ಐ ತಿಮ್ಮೇಶ್ ಮತ್ತು ಉಡುಪಿ ಪಿಎಸ್ಐ ಸಕ್ತಿವೇಲು ಹಾಗೂ ತಂಡ ಆರೋಪಿಯನ್ನು ಬಂಧಿಸಿದ್ದಾರೆ.
Comments are closed.