ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಮತ್ತು ಮಗ ಅಭಿಷೇಕ್ ಬಚ್ಚನ್ ಅವರಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟ ಬೆನ್ನಲ್ಲೇ ಇಡೀ ಕುಟುಂಬಕ್ಕೆ ಕೊರೋನಾ ವೈರಸ್ ಹರಡಿರುವ ಶಂಕೆ ವ್ಯಕ್ತವಾಗಿತ್ತು. ಹಾಗಾಗಿ ಕುಟುಂಬದವರೆಲ್ಲರು ಕೊರೋನಾ ಟೆಸ್ಟ್ಗೆ ಒಳಗಾಗಿದ್ದರು. ಆದರೀಗ ನಟಿ ಐಶ್ವರ್ಯಾ ರೈ ಬಚ್ಚನ್ ಮತ್ತು ಮಗಳು ಆರಾಧ್ಯಾ ರೈ ಅವರಿಗೆ ಕೊರೋನಾ ಪಾಸಿಟಿವ್ ಬಂದಿದೆ.
“ನನಗೆ ಕೊರೋನಾ ಪಾಸಿಟಿವ್ ಬಂದಿದೆ. ನನ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಟುಂಬದ ಸದಸ್ಯರು ಮತ್ತು ಸಿಬ್ಬಂದಿವರ್ಗದವರ ಪರೀಕ್ಷೆ ನಡೆಯುತ್ತಿದೆ. ಅದರ ಫಲಿತಾಂಶ ಬರಬೇಕಿದೆ. ಕಳೆದ 10 ದಿನಗಳಿಂದ ನನ್ನ ಸಂಪರ್ಕಕ್ಕೆ ಬಂದವರು ಪರೀಕ್ಷೆ ಮಾಡಿಸಿಕೊಳ್ಳಿ,” ಎಂದು ಅಮಿತಾಬ್ ಬಚ್ಚನ್ ಟ್ವೀಟ್ ಮಾಡಿದ್ದರು. ಈ ಬೆನ್ನಲ್ಲೇ ಟ್ವೀಟ್ ಮಾಡಿದ್ದ ಅಭಿಷೇಕ್ ಬಚ್ಚನ್ ತಮಗೂ ಕೊರೋನಾ ವೈರಸ್ ಇರುವ ವಿಚಾರವನ್ನು ಒಪ್ಪಿಕೊಂಡಿದ್ದರು. ಉಳಿದವರ ಕೊರೋನಾ ಪರೀಕ್ಷೆಯ ವರದಿ ಬರಬೇಕಿದೆ ಎಂದು ಹೇಳಿದ್ದರು.
ನಿನ್ನೆ ಮಾಡಿದ ರಾಪಿಡ್ ಟೆಸ್ಟ್ ನಲ್ಲಿ ಎಲ್ಲರಿಗೂ ನೆಗಟಿವ್ ರಿಪೋರ್ಟ್ ಬಂದಿತ್ತು. ಆದರೆ ಇಂದು ಸ್ವಾಬ್ ಟೆಸ್ಟ್ ರಿಪೋರ್ಟ್ ಬಂದಿದ್ದು, ಐಶ್ವರ್ಯಾ ರೈ ಮತ್ತು ಮಗಳು ಆರಾಧ್ಯಾ ಬಚ್ಚನ್ಗೆ ಪಾಸಿಟಿವ್ ಬಂದಿದೆ. ಅಭಿಷೇಕ್ ಬಚ್ಚನ್ ಉಳಿದಂತೆ ಜಯಾ ಬಚ್ಚನ್, ಪುತ್ರಿ ಶ್ವೇತಾ ನಂದಾ, ಮೊಮ್ಮಕ್ಕಳಾದ ಅಗಸ್ತ್ಯ ಹಾಗೂ ನವ್ಯ ನವೇಲಿ ರಿಪೋರ್ಟ್ ನೆಗಟಿವ್ ಬಂದಿದೆ.
ಸದ್ಯ ಅಮಿತಾಭ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ ಮತ್ತು ಆರಾಧ್ಯಾ ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಚ್ಚನ್ ಕುಟುಂಬಕ್ಕೆ ಕೊರೋನಾ ಕಂಟಕವಾಗಿರುವುದು ಅವರ ಅಭಿಮಾನಿ ಬಳಗಕ್ಕೆ ಆತಂಕ ತಂದೊಡ್ಡಿದೆ. ಕೊರೋನಾದಿಂದ ಬಚ್ಚನ್ ಕುಟುಂಬ ಮುಕ್ತಿ ಪಡೆಯಲಿ ಎಂದು ಅನೇಕರು ಟ್ವೀಟ್ ಮಾಡುತ್ತಿದ್ದಾರೆ.
ಅಮಿತಾಭ್ ಬಚ್ಚನ್ ಅವರ ಕೈಯಲ್ಲಿ ಹಲವು ಪ್ರಾಜೆಕ್ಟ್ಗಳಿವೆ. ಶೂಜಿತ್ ಸಿರ್ಕಾರ್ ಅವರ ‘ಗುಲಾಬೊ ಸಿಬಾಬೊ’ ಹಾಸ್ಯ ಚಿತ್ರದಲ್ಲಿ ಅಭಿನಯಿಸಿದ್ದು ಇತ್ತೀಚೆಗಷ್ಟೇ ಪ್ರೈಮ್ನಲ್ಲಿ ರಿಲೀಸ್ ಆಗಿದೆ. ‘ಚೆಹರೆ’, ‘ಬ್ರಹ್ಮಾಸ್ತ್ರ’, ‘ಝಂಡ್’ ಅವರ ಮುಂಬರುವ ಸಿನಿಮಾಗಳಾಗಿವೆ. ಇದರ ಜೊತೆಗೆ ಬಿಗ್ ಬಿ ಅವರು ಕೌನ್ ಬನೇಗ ಕರೋಡ್ಪತಿ ರಿಯಾಲಿಟಿ ಶೋನ 12ನೇ ಸೀಸನ್ನಲ್ಲೂ ನಿರೂಪಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಭಿಷೇಕ್ ಬಚ್ಚನ್ ನಟೆನೆಯ ‘ಬ್ರೆತ್: ಇನ್ ಟು ದಿ ಶ್ಯಾಡೊ’ ವೆಬ್ ಸಿರೀಸ್ ಜುಲೈ 10ರಂದು ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿದೆ.
Comments are closed.