ಕರ್ನಾಟಕ

ಬೆಂಗಳೂರಿನಲ್ಲಿ ಒಂದೇ ವಾರ ಮಾತ್ರ ಲಾಕ್ ಡೌನ್, ಮತ್ತೆ ವಿಸ್ತರಣೆ ಇಲ್ಲ: ಯಡಿಯೂರಪ್ಪ

Pinterest LinkedIn Tumblr


ಬೆಂಗಳೂರು: ಕೊರೋನಾ ಸೋಂಕು ತೀವ್ರವಾಗಿ ವ್ಯಾಪಿಸುತ್ತಿರುವ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ಒಂದು ವಾರ ಮಾತ್ರ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ಆದರೆ ಯಾವುದೇ ಕಾರಣಕ್ಕೂ ವಾರದ ಬಳಿಕ ಲಾಕ್ ಡೌನ್ ವಿಸ್ತರಿಸುವುದಿಲ್ಲ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಸೋಮವಾರ ಸ್ಪಷ್ಟನೆ ನೀಡಿದ್ದಾರೆ.

ಮುಖ್ಯಮಂತ್ರಿ ನಿವಾಸ ಕಾವೇರಿಯಲ್ಲಿ ನಡೆದ ಟಾಸ್ಕ್ ಪೋರ್ಸ್ ಸಭೆಯ ಬಳಿಕ ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ, ಎರಡೂ ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ನಿಯಂತ್ರಣಕ್ಕಾಗಿ ಲಾಕ್ ಡೌನ್ ವಿಧಿಸಲಾಗಿದ್ದು, ಒಂದು ವಾರದೊಳಗೆ ವ್ಯವಸ್ಥೆಗಳನ್ನು ಸರಿಪಡಿಸಿಕೊಂಡು, ಎಲ್ಲ ಅಗತ್ಯ ಸಿದ್ದತೆ ಗಳನ್ನು ಮಾಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ವಾರದ ಬಳಿಕ ನಗರದಲ್ಲಿ ಲಾಕ್ ಡೌನ್ ಅನ್ನು ವಿಸ್ತರಿಸುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ಜನರು ಯಾವುದೇ ಕಾರಣಕ್ಕೆ ಆತಂಕಪಡದೆ, ವದಂತಿಗಳಿಗೆ ಕಿವಿಗೊಡದೆ, ಸರ್ಕಾರದೊಂದಿಗೆ ಸಹಕರಿಸಬೇಕೆಂದು ಮುಖ್ಯಮಂತ್ರಿಗಳು ಜನರಲ್ಲಿ ಕೋರಿದ್ದಾರೆ.

ಇಂದಿನ ಸಭೆಯಲ್ಲಿ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಬೆಡ್ ಗಳನ್ನು ಬಾಡಿಗೆ ತಂದಿರುವುದು, ಉಪಕರಣಗಳು ಹಾಗೂ ಅಗತ್ಯ ಸೌಲಭ್ಯಗಳನ್ನು ಬಾಡಿಗೆ ಪಡೆದಿರುವುದಕ್ಕೆ ಮುಖ್ಯಮಂತ್ರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಗಮನಕ್ಕೆ ತರದೆ ಇಷ್ಟೊ ದೊಡ್ಡ ತೀರ್ಮಾನ ಕೈಗೊಂಡಿದ್ದು ಯಾರೂ ಎಂದು ಮುಖ್ಯಮಂತ್ರಿ ಅಧಿಕಾರಿಗಳನ್ನು ಹಾಗೂ ಸಚಿವರನ್ನು ಪ್ರಶ್ನಿಸಿದ್ದಾರೆ.

ಎರಡು ತಿಂಗಳ ಕಾಲ ಬೆಡ್ ಗಳು ಹಾಗೂ ಬಾಡಿಗೆ ಎಷ್ಟಾಗುತ್ತದೆ. ಬೆಡ್ ಗಳನ್ನು ಖರೀದಿಸದೆ ಏಕೆ ಬಾಡಿಗೆ ಪಡೆಯಲಾಗಿದೆ. ಈಗಾಗಲೇ ವಿಪಕ್ಷಗಳು ಆರೋಗ್ಯ ಇಲಾಖೆಯಲ್ಲಿ ಅಕ್ರಮ ನಡೆದಿದೆ. ಉಪಕರಣ ಖರೀದಿ, ಔಷಧಿ ಖರೀದಿಯಲ್ಲಿ ಆಕ್ರಮವಾಗಿದೆ ಎಂದು ಹೋರಾಟಕ್ಕಿಳಿದಿವೆ. ಇಂತಹ ಸಂದರ್ಭದಲ್ಲಿ ಈ ತೀರ್ಮಾನ ಕೈಗೊಂಡಿದ್ದು ಯಾರು, ಏತಕ್ಕಾಗಿ ಇಂತಹ ತೀರ್ಮಾನ ಕೈಗೊಳ್ಳುವ ಮೂಲಕ ಜನರಲ್ಲಿ ತಪ್ಪು ಭಾವನೆ ಮೂಡಿಸುವ ಪ್ರಯತ್ನ ನಡೆಸಿದ್ದೀರಿ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಜೊತೆಗೆ ಆ್ಯಂಬೆಲೆನ್ಸ್ ಗಳನ್ನು ಖರೀದಿಸುವಂತೆ ಸೂಚಿಸಿ 15 ದಿನಗಳ ಕಳೆದಿವೆ. ಆದರೆ ಇದುವರೆಗೂ ಆ್ಯಂಬುಲೆನ್ಸ್ ಖರೀದಿ ಮಾಡಿಲ್ಲವೇಕೆ?. ಖಾಸಗಿ ಆಸ್ಪತ್ರೆಗಳು ಬೆಡ್ ಗಳನ್ನು ಸರ್ಕಾರಕ್ಕೆ ಯಾಕೆ ನೀಡಿಲ್ಲ. ತಕ್ಷಣದ ಎಲ್ಲವನ್ನು ಒಂದೆರಡು ದಿನಗಳಲ್ಲಿ ಕ್ರಮ ಕೈಗೊಳ್ಳಿ ಇಲ್ಲದಿದ್ದಲ್ಲಿ ಯಾರು ನನ್ನ ಬಳಿ ಬರಬೇಡಿ. ಮುಖ್ಯಮಂತ್ರಿ ಆದೇಶವನ್ನು ಸರಿಯಾಗಿ ಯಾರೂ ಪಾಲಿಸುತ್ತಿಲ್ಲ ಏಕೆ ಎಂದು ಯಡಿಯೂರಪ್ಪ ಸಚಿವರಿಗೆ ಹಾಗೂ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡಿದ್ದಾರೆ.

Comments are closed.