ಕೊಚ್ಚಿ(ಜು.13): ಒಂದರ ಬೆನ್ನಲ್ಲೇ ಮತ್ತೊಂದು ಎನ್ನುವಂತೆ ಸಾಲುಸಾಲು ಲೈಂಗಿಕ ದೌರ್ಜನ್ಯ ಆರೋಪಗಳನ್ನು ಎದುರಿಸುತ್ತಿರುವ ಜಲಂಧರ್ನ ಮಾಜಿ ಬಿಷಪ್ ಫ್ರಾಂಕೊ ಮುಲಾಕ್ಕಲ್ ಜಾಮೀನು ಅರ್ಜಿಯನ್ನು ಕೊಟ್ಟಾಯಂ ನ್ಯಾಯಲಯ ತಿರಸ್ಕರಿಸಿದೆ. ಜತೆಗೆ ಬಿಷಪ್ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿದೆ.
ಇಂದು ಪ್ರಕರಣ ವಿಚಾರಣೆ ನಡೆಸಿದ ಕೊಟ್ಟಾಯಂ ಸ್ಥಳೀಯ ನ್ಯಾಯಲಯ ಬಿಷಪ್ ಪರ ವಕೀಲರ ವಾದ ಆಲಿಸಿತು. ಕೊರೋನಾ ತೀವ್ರಗೊಂಡ ಕಾರಣದಿಂದ ಪಂಜಾಬ್ನಲ್ಲೇ ಫ್ರಾಂಕೋ ಮುಲಾಕ್ಕಲ್ ಸಿಲುಕಿಕೊಂಡಿದ್ದಾರೆ. ಹೀಗಾಗಿ ಇವರು ಕೋರ್ಟ್ಗೆ ಬರಲು ಆಗುತ್ತಿಲ್ಲ ಎಂದು ಮುಲಾಕ್ಕಲ್ ಪರ ವಕೀಲ ವಾದ ಮಂಡಿಸಿದರು. ಇದಕ್ಕೆ ಪ್ರತಿಯಾಗಿ ಮುಲಾಕ್ಕಲ್ ಇರುವ ಜಲಂಧರ್ ಪ್ರದೇಶ ಕಂಟೈನ್ಮೆಂಟ್ ಜೋನ್ ಅಲ್ಲ ಎಂದು ಪ್ರತಿವಾದಿ ವಾದಿಸಿದ್ದರು.
ಕೊನೆಗೂ ವಾದ-ಪ್ರತಿವಾದ ಆಲಿಸಿದ ನ್ಯಾಯಲಯ ಬಿಷಪ್ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿದೆ. ಜುಲೈ 1ರಿಂದ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಆದರೆ, ಇದುವರೆಗೂ ಒಮ್ಮೆಯೂ ಮುಲಾಕ್ಕಲ್ ಕೋರ್ಟ್ಗೆ ಹಾಜರಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಕೋರ್ಟ್ ಹೀಗೆ ತೀರ್ಪು ನೀಡಿದೆ.
ಅತ್ಯಾಚಾರದ ಆರೋಪದ ಮೇಲೆ ಫ್ರಾಂಕೋ ಕಳೆದ ವರ್ಷ ಸೆಪ್ಟೆಂಬರ್ 21ರಂದು ಬಂಧನಕ್ಕೆ ಒಳಗಾಗಿದ್ದರು. ಬಳಿಕ 2019 ಅಕ್ಟೋಬರ್ 16ರಂದು ಜಾಮೀನು ಪಡೆದಿದ್ದರು.
ಫ್ರಾಂಕೋ ವಿರುದ್ಧ ಕೇರಳ ಪೊಲೀಸರು 1400 ಪುಟಗಳ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. 2020 ಜನವರಿ 6ರಿಂದ ವಿಚಾರಣೆ ಆರಂಭವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸೈರೋಮಲಾಬಾರ್ ಕ್ಯಾಥೋಲಿಕ್ ಚರ್ಚ್ನ ಪ್ರಮುಖ ಮೂವರು ಬಿಷಪ್ಗಳು, 11 ಪಾದ್ರಿಗಳು ಹಾಗೂ ಹಲವು ಸನ್ಯಾಸಿನಿಯರು ಸೇರಿದಂತೆ ಒಟ್ಟು 83 ಸಾಕ್ಷಿಗಳನ್ನು ದೋಷಾರೋಪ ಪಟ್ಟಿಯಲ್ಲಿ ಹೆಸರಿಸಲಾಗಿದೆ. ಪ್ರಕರಣ ಬೆಳಕಿಗೆ ಬಂದ ಬಳಿಕ ಫ್ರಾಂಕೊ ಅವರನ್ನು ಬಿಷಪ್ ಸ್ಥಾನದಿಂದ ಕೆಳಗೆ ಇಳಿಸಲಾಗಿತ್ತು.
ಇದಾದ ಬೆನ್ನಲೇ ಫ್ರಾಂಕೊ ಮುಲಾಕ್ಕಲ್ ವಿರುದ್ಧ ಮತ್ತೋರ್ವ ಕೇರಳದ ಸನ್ಯಾಸಿನಿ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. 2014 ಮತ್ತು 2016 ರ ನಡುವೆ ಸನ್ಯಾಸಿನಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮುಲಾಕ್ಕಲ್ ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ ಮತ್ತೊಂದು ಆರೋಪ ಮಾಡಿರುವ ಸನ್ಯಾಸಿನಿ 14 ನೇ ಸಾಕ್ಷಿಯಾಗಿದ್ದರು.
“2015 ಮತ್ತು 2017 ರ ನಡುವೆ ಬಿಷಪ್ ಮುಲಾಕ್ಕಲ್ ಹಲವಾರು ಬಾರಿ ನನ್ನ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಈ ವೇಳೆ ಅವರು ಲೈಂಗಿಕತೆ ಕುರಿತು ಅಸಭ್ಯ ಭಾಷೆ ಬಳಸಿ ಮಾತನಾಡಿದ್ದರು. ಅಲ್ಲದೆ, ಕೆಲವೊಮ್ಮೆ ವಿಡಿಯೋ ಕಾಲ್ ಮಾಡಿ ಲೈಂಗಿಕತೆಗೆ ಪ್ರಚೋದನೆ ನೀಡುತ್ತಿದ್ದರು. ಆದರೆ, ಅವರ ಮೇಲೆ ಭಯವಿದ್ದ ಕಾರಣ ಈವರೆಗೆ ಈ ವಿಚಾರವನ್ನು ಯಾರಿಗೂ ಹೇಳಿರಲಿಲ್ಲ” ಎಂದು ಸನ್ಯಾಸಿನಿ ಪೊಲೀಸರಿಗೆ ತಿಳಿಸಿದ್ದರು.
Comments are closed.