ಕರ್ನಾಟಕ

ರಾಜ್ಯಾದ್ಯಂತ ಲಾಕ್‌ಡೌನ್ ಮಾಡಲು ದೇವೇಗೌಡ, ಈಶ್ವರ ಖಂಡ್ರೆ ಆಗ್ರಹ

Pinterest LinkedIn Tumblr


ಬೆಂಗಳೂರು: ಮಹಾಮಾರಿ ಕೊರೋನ ವೈರಸ್ ಹರಡುವುದನ್ನು ತಡೆಯಲು ರಾಜ್ಯ ಸರ್ಕಾರ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇದೇ 14ರಿಂದ ಲಾಕ್ ಡೌನ್ ಜೊತೆಗೆ ಇಡೀ ರಾಜ್ಯದಲ್ಲಿಯೂ ಲಾಕ್ ಡೌನ್ ಜಾರಿ ಮಾಡುವಂತೆ ಮಾಜಿ ಪ್ರಧಾನಿ, ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆಗ್ರಹಿಸಿದ್ದಾರೆ.

ಮಹಾಮಾರಿ ವೈರಸ್‌ ಅನ್ನು ತಡೆಗಟ್ಟಲು ರಾಜ್ಯ ಸರ್ಕಾರ ಅನೇಕ ಪ್ಯಾಕೇಜುಗಳನ್ನು ಘೋಷಿಸಿದ್ದು ಅದರಲ್ಲಿ ಅವ್ಯವಹಾರ ನಡೆದಿದೆ ಎಂದು ಅನೇಕ ನಾಯಕರು ಆಪಾದಿಸುತ್ತಿದ್ದಾರೆ. ಈ ಬಗ್ಗೆ ಮುಂಬರುವ ಅಧಿವೇಶನದಲ್ಲಿ ಚರ್ಚೆಮಾಡಬೇಕೇ ಹೊರತು ಈಗ ರಾಜಕೀಯ ಕೆಸರೆರಚಾಟ ಒಳ್ಳೆಯದಲ್ಲ. ಅರೋಪ ಪ್ರತ್ಯಾಪರೋಪಗಳನ್ನು ಬಿಟ್ಟು ಜನತೆಯ ಆರೋಗ್ಯದ ಕಡೆ ಗಮನ ಹರಿಸಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಸರ್ಕಾರದ ಜೊತೆ ಕೈಜೋಡಿಸಿ ಕೆಲಸ ಮಾಡಬೇಕು. ಜನತೆಯ ಆರೋಗ್ಯದ ಜೊತೆ ಚೆಲ್ಲಾಟವಾಡಬಾರದು ಎಂದು ದೇವೇಗೌಡರು ಪರೋಕ್ಷವಾಗಿ ಕಾಂಗ್ರೆಸ್‌ ನಾಯಕರ ಆಂದೋಲನ ಅವಶ್ಯಕತೆಯಿಲ್ಲ ಎಂದಿದ್ದಾರೆ.

ಇನ್ನು ಕೇವಲ‌‌ ಬೆಂಗಳೂರು ಅಷ್ಟೇ ಅಲ್ಲ ಇಡೀ ರಾಜ್ಯಾದ್ಯಂತ ಮತ್ತೊಮ್ಮೆ ಕನಿಷ್ಠ 15 ದಿನಗಳ ಕಾಲ ಕಠಿಣ ಲಾಕ್ ಡೌನ್ ವಿಧಿಸುವಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸರ್ಕಾರವನ್ನು ಆಗ್ರಹಿಸಿದ್ದಾರೆ.

ರಾಜ್ಯದ ಗಡಿಭಾಗಗಳಲ್ಲಿಯೂ ವಿಪರೀತ ಸೋಂಕು, ಸಾವು ಹೆಚ್ಚಾಗಿವೆ‌. ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳಲ್ಲಿ ಪರಿಸ್ಥಿತಿ ಕೈ ಮೀರುತ್ತಿದೆ. ಹೀಗಾಗಿ ಪರಿಸ್ಥಿತಿ ನಿಯಂತ್ರಣಕ್ಕೆ ರಾಜ್ಯಾದ್ಯಂತ ಲಾಕ್ ಡೌನ್ ವಿಧಿಸುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಸರ್ಕಾರ ಈ ಲಾಕ್ ಡೌನ್ ಅವಧಿಯಲ್ಲಾದರು ಹಿಂದಿನ ಲೋಪದೋಷ ಸರಿಪಡಿಸಿಕೊಂಡು ಮುಂದೆ ಸಮರ್ಥವಾಗಿ ಸೋಂಕು ಎದುರಿಸಲು ಎಲ್ಲಾ ರೀತಿಯ ತಯಾರಿ ನಡೆಸಲಿ ಎಂದು ಖಂಡ್ರೆ ಸಲಹೆ ನೀಡಿದ್ದಾರೆ.

Comments are closed.