ಕೊರೊನಾ ಸಂಕಷ್ಟದಿಂದ ಅನೇಕ ಸಮಸ್ಯೆಗಳು ಉಂಟಾಗಿವೆ. ಜನರಿಗೆ ಲಾಕ್‌ಡೌನ್, ಸೀಲ್‌ಡೌನ್, ಕ್ವಾರಂಟೈನ್‌ಗಳ ಪರಿಚಯವಾಗಿದೆ. ಅದರ ಜೊತೆಗೆ ಜನ ಜೀವನದಲ್ಲೂ ಸಾಕಷ್ಟು ಬದಲಾವಣೆ ಆಗಿದೆ. ಅಂದಹಾಗೆ, ಕಿರುತೆರೆ ನಟ, ನಿರ್ದೇಶಕ ಶ್ರೀನಾಥ್ ವಸಿಷ್ಠ ಈಗ ಅಪಾರ್ಟ್‌ಮೆಂಟ್ ಸೆಕ್ಯುರಿಟಿ ಗಾರ್ಡ್ ಆಗಿದ್ದಾರೆ. ಆದರೆ, ಅವರು ಸೆಕ್ಯುರಿಟಿ ಆಗಿದ್ದರ ಹಿಂದೆಯೂ ಒಂದು ವಿಶೇಷ ಕಾರಣವಿದೆ.
ಈಗ ಎಲ್ಲೆಡೆ ಕೊರೊನಾ ವೈರಸ್ ರಣಕೇಕೆ ಹಾಕುತ್ತಿದೆ. ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಅದೇ ರೀತಿ ಈಗ ಶ್ರೀನಾಥ್ ವಸಿಷ್ಠ ವಾಸ ಮಾಡುತ್ತಿರುವ ಅಪಾರ್ಟ್‌ಮೆಂಟ್‌ನ ಸೆಕ್ಯುರಿಟಿ ಸಿಬ್ಬಂದಿಗೂ ಸೋಂಕು ತಗುಲಿದೆ. ಅವರ ಜೊತೆಗೆ ಇನ್ನೂ ಮೂರು ಮಂದಿ ಕ್ವಾರಂಟೈನ್ ಆಗಿದ್ದಾರೆ. ಹಾಗಾಗಿ, ಅಪಾರ್ಟ್‌ಮೆಂಟ್‌ನ ಸೆಕ್ಯುರಿಟಿ ಕೆಲಸಕ್ಕೆ ಅದರ ನಿವಾಸಿಗಳೇ ಮುಂದಾಗಿದ್ದಾರೆ. ಅದೇ ರೀತಿ ಶ್ರೀನಾಥ್ ಕೂಡ ತಮ್ಮ ಪಾಲಿನ ಪಾಳಿಯಲ್ಲಿ ಸೆಕ್ಯುರಿಟಿ ಕೆಲಸ ಮಾಡಿದ್ದಾರೆ. ಆ ಕುರಿತ ತಮ್ಮ ಅನುಭವವನ್ನು ಅವರೇ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
‘ನಾನು ವಾಸ ಮಾಡುತ್ತಿರುವ ಅಪಾರ್ಟ್‌ಮೆಂಟ್‌ನ ಸೆಕ್ಯುರಿಟಿ ಗಾರ್ಡ್‌ಗೆ ಕೊರೊನಾ ಪಾಸಿಟಿವ್ ಆಗಿದೆ. ಅವರ ಜೊತೆಗಿದ್ದ ಮೂವರನ್ನು ಕ್ವಾರಂಟೈನ್ ಮಾಡಲಾಗಿದೆ. ಹಾಗಾಗಿ, ಅಪಾರ್ಟ್‌ಮೆಂಟ್‌ನ ಕಮಿಟಿಯವರು 10 ದಿನಗಳ ಕಾಲ ರಕ್ಷಕ್ (ಸೆಕ್ಯುರಿಟಿ) ಕೆಲಸವನ್ನು ಇಲ್ಲಿನ ನಿವಾಸಿಗಳೇ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು. ಹಾಗಾಗಿ, ನಾನು ಮಧ್ಯಾಹ್ನ 2ರಿಂದ 10 ಗಂಟೆವರೆಗೆ ನನ್ನ ಶಿಫ್ಟ್‌ನ ಕೆಲಸವನ್ನು ಗೇಟ್‌ನ ಬಳಿ ಕುಳಿತುಕೊಂಡು ಮಾಡುತ್ತಿದ್ದೇನೆ. ನಿನ್ನೆ ರಾತ್ರಿ ಶಿಫ್ಟ್ ಅನ್ನು ನನ್ನ ಮಗ ಋತ್ವಿಕ್ ವಸಿಷ್ಠ ಮಾಡಿದ್ದಾನೆ. ಇಂಥದ್ದೊಂದು ಸಮಾಜ ಸೇವೆ ಮಾಡಿದ್ದಕ್ಕಾಗಿ ಖುಷಿ ಎನಿಸುತ್ತಿದೆ. ಸರ್ವೇಜನ ಸುಖಿನೋ ಭವಂತು’ ಎಂದು ಬರೆದುಕೊಂಡಿದ್ದಾರೆ ಶ್ರೀನಾಥ್.
ಶ್ರೀನಾಥ್ ಅವರು ಫೇಸ್‌ಬುಕ್‌ನಲ್ಲಿ ಈ ವಿಚಾರವನ್ನು ಹಂಚಿಕೊಳ್ಳುತ್ತಿದ್ದಂತೆಯೇ, ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೀವು ಕೂಡ ಕೊರೊನಾ ವಾರಿಯರ್ ಎಂದು ಹೊಗಳಿದ್ದಾರೆ. ಅನೇಕರು ಶ್ರೀನಾಥ್ ಹಾಕಿರುವ ಪೋಸ್ಟ್ ಅನ್ನು ಶೇರ್ ಮಾಡುತ್ತಿದ್ದಾರೆ. ಅಂದಹಾಗೆ, ಶ್ರೀನಾಥ್ ವಸಿಷ್ಠ ಕನ್ನಡದ ಅನೇಕ ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ನಟಿಸಿದ್ದಾರೆ. ಜೊತೆಗೆ ಕೆಲ ಸಿನಿಮಾಗಳಿಗೆ ನಿರ್ದೇಶಕವನ್ನೂ ಮಾಡಿದ್ದಾರೆ. ಒಂದಷ್ಟು ಧಾರಾವಾಹಿಗಳಿಗೆ ಬರಹಗಾರರಾಗಿಯೂ ಶ್ರೀನಾಥ್ ಕೆಲಸ ಮಾಡಿದ್ದಾರೆ.
Comments are closed.