ಮಂಗಳೂರು ಜುಲೈ 14 : ಕೊರೋನಾ ಸೋಂಕಿತರಿಗೆ ಜಿಲ್ಲೆಯ ಎಲ್ಲಾ ಮೆಡಿಕಲ್ ಕಾಲೇಜುಗಳ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಅವರು ನಗರದ ಕೆಎಂಸಿ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆ ಹಾಗೂ ಸಾಮಥ್ರ್ಯವನ್ನು ಪರಿಶೀಲಿಸಿ, ಬಳಿಕ ಮಾತನಾಡುತ್ತಾ, ಬಿಪಿಎಲ್, ಎಪಿಎಲ್ ಕುಟುಂಬಗಳು, ವಲಸೆ ಕಾರ್ಮಿಕರು, ರೇಶನ್ ಕಾರ್ಡ್ ಇಲ್ಲದವರು ಸೇರಿದಂತೆ ಎಲ್ಲರಿಗೂ ಜಿಲ್ಲೆಯ ವೈದ್ಯಕೀಯ ಕಾಲೇಜುಗಳ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು. ರೋಗಿಗಳು ಆಸ್ಪತ್ರೆಯಲ್ಲಿ ತಮ್ಮ ಆಧಾರ್ ಕಾರ್ಡ್ ತೋರಿಸಿ ಉಚಿತ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ಸಚಿವರು ಹೇಳಿದರು.
ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಕೋರೋನಾ ಶಂಕಿತರಿಗೆ ಹಾಗೂ ದೃಢಪಟ್ಟವರಿಗೆ ಉಚಿತ ಚಿಕಿತ್ಸೆ ಮುಂದುವರಿಯಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋರೋನಾದಿಂದ ಗುಣಮುಖರಾದವರ ಸಂಖ್ಯೆ ಅಧಿಕವಾಗಿದ್ದು, ಪ್ರತೀದಿನ ಬಿಡುಗಡೆಯಾಗುವವರ ಸಂಖ್ಯೆಯೂ ಹೆಚ್ಚಿದೆ. ಸಾರ್ವಜನಿಕರು ಯಾವುದೇ ಆತಂಕಕ್ಕೊಳಗಾಗುವ ಅಗತ್ಯವಿಲ್ಲ. ಜನತೆಯ ಆರೋಗ್ಯ ರಕ್ಷಣೆಗೆ ಸರಕಾರ ಕಟಿಬದ್ಧವಾಗಿದ್ದು, ಇದರಲ್ಲಿ ಯಾವುದೇ ರಾಜಿ ಇಲ್ಲ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟಪಡಿಸಿದರು.
ಸಭೆಯಲ್ಲಿ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲು, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಜಿಲ್ಲಾಧಿಕಾರಿ ಸಿಂಧೂ ರೂಪೇಶ್, ಪ್ರಭಾರ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರತ್ನಾಕರ್, ವೆನ್ಲಾಕ್ ಅಧೀಕ್ಷಕ ಡಾ. ಸದಾಶಿವ, ಕೆಎಂಸಿ ಆಸ್ಪತ್ರೆ ಅಧಿಕಾರಿಗಳು ಉಪಸ್ಥಿತರಿದ್ದರು.
Comments are closed.