ಉಡುಪಿ: ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ, ಜುಲೈ 15 ರಿಂದ 29 ರ ವರೆಗೆ 14 ದಿನಗಳ ವರೆಗೆ ಜಿಲ್ಲೆಯ ಗಡಿಗಳನ್ನು ಸೀಲ್ ಡೌನ್ ಮಾಡಲಾಗುವುದು , ಆದರೆ ಜಿಲ್ಲೆಯೊಳಗಿನ ಆರ್ಥಿಕ ಚಟುವಟಿಕೆಗಳನ್ನು ಎಂದಿನಂತೆ ನಡೆಯಲಿವೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ. ಅವರು ಮಂಗಳವಾರ , ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಕೋವಿಡ್ 19 ಸೋಂಕು ಹರಡುವುದನ್ನು ತಡೆಯುವ ಕುರಿತಂತೆ ಸೋಮವಾರ ಮುಖ್ಯಮಂತ್ರಿಗಳೊಂದಿಗೆ ನಡೆದ ವೀಡಿಯೋ ಕಾನ್ಪರೆನ್ಸ್ ನಲ್ಲಿ , ಸಂಬಂದಪಟ್ಟ ಜಿಲ್ಲಾಧಿಕಾರಿ ಮ್ತು ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿ ಲಾಕ್ ಡೌನ್ ಮಾಡುವ ಕುರಿತಂತೆ ನಿರ್ದಾರ ಮಾಡುವಂತೆ ತಿಳಿಸಿದ್ದು, ಅದರಂತೆ ಜಿಲ್ಲೆಯ ಸೋಮವಾರ ಸಂಜೆ ಜಿಲ್ಲೆಯ ಜಿಲ್ಲಾ ವೈದ್ಯಕೀಯ ತಜ್ಞರ ಸಮಿತಿ ಚರ್ಚಿಸಿದಂತೆ , ಹಾಗೂ ಮಂಗಳವಾರ ಜಿಲ್ಲೆಯ ಎಲ್ಲಾ ಶಾಸಕರೊಂದಿಗೆ ನಡೆದ ಚರ್ಚೆಯಂತೆ, ಜುಲೈ 15 ರ ರಾತ್ರಿ 8 ಗಂಟೆಯಿಂದ ಜಿಲ್ಲೆಯ ಗಡಿಗಳನ್ನು ಸೀಲ್ ಡೌನ್ ಮಾಡಲಾಗುವುದು ಆದರೆ ಅಂತರರಾಜ್ಯ/ಅಂತರ ಜಿಲ್ಲಾ ಸರಕು ಸಾಗಾಣಿಕೆ/ವಸ್ತುಗಳ ಸಾಗಾಣಿಕೆಗೆ ಯಾವುದೇ ನಿರ್ಭಂದಗಳಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಉಡುಪಿ ಜಿಲ್ಲೆಯಿಂದ ಹೊರ ಜಿಲ್ಲೆ, ರಾಜ್ಯಕ್ಕೆ ಹೋಗುವವರು ಮತ್ತು ಜಿಲ್ಲೆಯೊಳಗೆ ಬರುವವರು ಜುಲೈ 15 ರ ರಾತ್ರಿ 8 ಗಂಟೆಯ ಒಳಗೆ ಬರಲು / ಹೋಗಲು ಅವಕಾಶ ನೀಡಲಾಗಿದೆ. ಸೀಲ್ಡೌನ್ ಅವಧಿಯಲ್ಲಿ ಜಿಲ್ಲೆಯಲ್ಲಿ ಯಾವುದೇ ಬಸ್ ಸಂಚಾರ ಇರುವುದಿಲ್ಲ, ಯಾವುದೇ ಸಂತೆ ಇರುವುದಿಲ್ಲ, ಯಾವುದೇ ರಾಜಕೀಯ ಧಾರ್ಮಿಕ, ಸಾಮಾಜಿಕ ಸಭೆ ಸಮಾರಂಭಗಳನ್ನು ನಡೆಸುವಂತಿಲ್ಲ, ಸಾರ್ವಜನಿಕವಾಗಿ ಹಬ್ಬ ಆಚರಣೆಗಳು ಇರುವುದಿಲ್ಲ, ಪೂರ್ವ ನಿರ್ಧರಿತ ಮದುವೆ ಸಮರಂಭಗಳನ್ನು ಸಂಬಂದಿತ ತಹಸೀಲ್ದಾರ್ ಅವರಿಂಧ ಕಡ್ಡಾಯವಾಗಿ ಅನುಮತಿ ಪಡೆದು 50 ಜನಕ್ಕೆ ಮೀರದಂತೆ ನಡೆಸಬಹುದಾಗಿದೆ, ಅಂತ್ಯ ಸಂಸ್ಕಾರದಲ್ಲಿ 20 ಜನ ಮಾತ್ರ ಭಾಗವಹಿಸಬಹುದು, ದೇವಸ್ಥಾನ ಚರ್ಚ್ ಮಸೀದಿಗಳನ್ನು ಸಾರ್ವಜನಿಕ ದರ್ಶನಕ್ಕೆ ಮಾತ್ರ ಸೀಮತಿಗೊಳಿಸಿದ್ದು, ಈ ಸಮಯದಲ್ಲಿ ಒಮ್ಮೆಗೆ ಅರ್ಚಕರು, ಮೌಲ್ವಿಗಳು, ಧರ್ಮಗುರುಗಳು, ಭಕ್ತಾದಿಗಳು ಸೇರಿ 20 ಕ್ಕಿಂತ ಜಾಸ್ತಿ ಜನ ಇರುವಂತಿಲ್ಲ , ಯಾವುದೇ ವಿಶೇಷ ಪೂಜೆಗಳು, ದಾರ್ಮಿಕ ಆಚರಣೆಗಳು ಇರುವುದಿಲ್ಲ. ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲು ಮಾಲೀಕರೇ ನಿರ್ಧರಿಸಿದ್ದಲ್ಲಿ ಜಿಲ್ಲಾಡಳಿತದ ಅಭ್ಯಂತರ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸರಕಾರದ ನಿರ್ದೇಶನದಂತೆ ಭಾನುವಾರಗಳಂದು ಸಂಪೂರ್ಣ ಲಾಕ್ಡೌನ್ ಇರಲಿದ್ದು, ಕೇವಲ ಮೆಡಿಕಲ್, ಕ್ಲಿನಿಕಲ್ ಲ್ಯಾಬ್, ಆಸ್ಪತ್ರೆ, ಹಾಲು, ದಿನಪತ್ರಿಕೆ ಮಾರಾಟಕ್ಕೆ ನಿರ್ಭಂದವಿಲ್ಲ, ಹೋಟೆಲ್ ಗಳಿಂದ ಪಾರ್ಸೆಲ್ ಗಳಿಗೆ , ಫುಡ್ ಡೆಲಿವರಿಗೆ ಅವಕಾಶವಿದೆ, ಅಗತ್ಯ ಸರಕು ಸರಂಜಾಮುಗಳ ಸಾಗಾಣಿಕೆಗೆ ಯಾವುದೇ ನಿರ್ಬಂಧವಿಲ್ಲ ಎಂದು ಡಿಸಿ ಜಿ. ಜಗದೀಶ್ ಹೇಳಿದರು.ತುರ್ತು ಸಂದರ್ಭದಲ್ಲಿ ಜಿಲ್ಲೆಯಿಂದ ಹೊರ ಹೋಗಲು ಮತ್ತು ಪ್ರತಿನಿತ್ಯದ ಕೆಲಸಗಳಿಗೆ ಜಿಲ್ಲೆಗೆ ಆಗಮಿಸುವವರಿಗೆ ಪಾಸ್ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸೀಲ್ ಡೌನ್ ಏಕೆ :
ಜಿಲ್ಲೆಯಲ್ಲಿ ಹೊರಗಿನಿಂದ ಬಂದವರಿಂದಲೇ ಹೆಚ್ಚಿನ ಸೋಂಕು ಪ್ರಕರಣಗಳು ಕಂಡುಬರುತ್ತಿದ್ದು, ಕೋವಿಡ್ ಪಾಸಿಟಿವ್ ಸೋಂಕಿತರ ಪೈಕಿ ಪ್ರಯಾಣ ಹಿನ್ನಲೆಯವರು 8.86% ಹಾಗೂ ಅವರ ಪ್ರಾಥಮಿಕ ಸಂಪರ್ಕಿತರು 14.2% ಹಾಗೂ ಸ್ಥಳೀಯ ಸೋಂಕಿತತು 2% ಮಾತ್ರ ಇದ್ದು, ಜಿಲ್ಲೆಯ ಗಡಿಯನ್ನು ಬಂದ್ ಮಾಡುವುದರಿಂದ , ಕೋವಿಡ್-19 ಸೋಂಕಿತರ ಜಿಲ್ಲೆಯ ಒಳ ಮತ್ತು ಹೊರ ಪ್ರವೇಶವನ್ನು ತಡೆಯಬಹುದು ಹಾಗೂ ಸೋಂಕಿನ ಹರಡುವಿಕೆಯನ್ನು ದೊಡ್ಡ ಪ್ರಮಾಣದಲ್ಲಿ ನಿಯಂತ್ರಿಸಲು ಸಾಧ್ಯ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಉಡುಪಿ ಜಿಲ್ಲೆಯಲ್ಲಿ ಪ್ರತೀ ಮಿಲಿಯನ್ ಜನರಿಗೆ 5166 ಮಂದಿಯ ಕೋವಿಡ್-19 ಪರೀಕ್ಷೆ ಮಾಡಿದ್ದು, ಇದು ರಾಜ್ಯದ ಒಟ್ಟು ಸರಾಸರಿ ಸೇರಿದಂತೆ ಯಾವುದೇ ಜಿಲ್ಲೆಗಳಿಗಿಂತ ಅತ್ಯಧಿಕ, ಜಿಲ್ಲೆಯಲ್ಲಿ ಕೋವಿಡ್ 19 ಪ್ರಕರಣಗಳ ದುಪ್ಪಟ್ಟು ಪ್ರಮಾಣ 39 ದಿನಗಳಿದ್ದರೆ , ದ.ಕನ್ನಡ ಜಿಲ್ಲೆ ಮತ್ತು ರಾಜ್ಯದಲ್ಲಿ 10 ಇದೆ, ಸಾವಿನ ಪ್ರಮಾಣ ರಾಜ್ಯದಲ್ಲಿ 1.80%, ದ.ಕನ್ನಡ ಜಿಲ್ಲೆಯಲ್ಲಿ 1.70% ಆದರೆ ಜಿಲ್ಲೆಯಲ್ಲಿ ಕೇವಲ 0.20% ಇದೆ , ಜಿಲ್ಲೆಯಲ್ಲಿ 390 ಸಕ್ರಿಯ ಪ್ರಕರಣಗಳಿದ್ದು, ಅದರಲ್ಲಿ ಇಂದು 80 ಮಂದಿ ಬಿಡುಗಡೆ ಹೊಂದಲಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಲಾಕ್ ಡೌನ್ ನಿಂದ ಕೋವಿಡ್-19 ನಿಯಂತ್ರಣ ಸಾಧ್ಯವಿಲ್ಲ, ನಮಲ್ಲಿ ಅಗತ್ಯ ವೈದ್ಯಕೀಯ ಸೌಲಭ್ಯಗಳು ಇಲ್ಲದಿದಲ್ಲಿ ಮಾತ್ರ ಲಾಕ್ ಡೌನ್ ಅಂತಿಮ ನಿರ್ಧಾರವಾಗಬೇಕು ಎಂದು ತಜ್ಞರ ಸಮಿತಿ ತಿಳಿಸಿದ್ದು, ಜಿಲ್ಲೆಯಲ್ಲಿ ಪ್ರಸ್ತುತ 1100 ಬೆಡ್ ಗಳು ಚಿಕಿತ್ಸಗೆ ಲಭ್ಯವಿದ್ದು, ಅಲ್ಲದೆ ಕೋವಿಡ್ ಕೇರ್ ಕೇಂಧ್ರಗಳಿಗಾಗಿ 1800 ಬೆಡ್ ಗಳನ್ನು ಗುರುತಿಸಿ ಅದನ್ನು ಸಕ್ರಿಯಗೊಳಿಸಲು ಸೌಲಭ್ಯ ಹೊಂದಿದ್ದೇವೆ. ಅಲ್ಲದೇ ಜಿಲ್ಲೆಯ 21 ಖಾಸಗಿ ಆಸ್ಪತ್ರೆಗಳಲ್ಲಿನ ಶೇ.50 ಹಾಸಿಗೆಗಳನ್ನು ಚಿಕಿತ್ಸೆಗೆ ಮೀಸಲಿಡಲಾಗಿದೆ. ಪ್ರಸ್ತುತ ಸರ್ಕಾರಿ ವ್ಯವಸ್ಥೆಯಲ್ಲಿನ ಆಸ್ಪತ್ರೆಗಳಲ್ಲಿ ಶೇ.70 ರಷ್ಟು ಬಳಕೆಯಾದರೆ ಮಾತ್ರ ಖಾಸಗಿ ಆಸ್ಪತ್ರೆಯ ಬೆಡ್ ಗಳನ್ನು ಬಳಸಿಕೊಳ್ಳಲಾಗುವುದು ಎಂದು ಡಿಸಿ ತಿಳಿಸಿದರು.
ಜಿಲ್ಲೆಯಲ್ಲಿ ಕೋವಿಡ್-19 ಗೆ ಸರ್ಕಾರಿ ವ್ಯವಸ್ಥೆಯಲ್ಲಿ ಎಪಿಲ್ ಬಿಪಿಎಲ್ ಭೇದವಿಲ್ಲದೇ ಎಲ್ಲರಿಗೂ ಚಿಕಿತ್ಸೆ ಉಚಿತವಾಗಿದ್ದು, ಜಿಲ್ಲಾಡಳಿತದಿಂದ ರೆಫರ್ ಆಗಿ ಖಾಸಗಿ ಆಸ್ಪತ್ರೆಗಳಿಗೆ ತೆರಳಿದಲ್ಲಿ ಸಹ ಚಿಕಿತ್ಸೆ ಉಚಿತವಾಗಿದೆ. ಜಿಲ್ಲಾಡಳಿತದ ರೆಫರ್ ಇಲ್ಲದೇ ನೇರವಾಗಿ ತಮಗೆ ಇಷ್ಟಬಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರು , ಸರ್ಕಾರ ನಿಗಧಿಪಡಿಸಿದ ಶುಲ್ಕವನ್ನು ಖಾಸಗಿ ಆಸ್ಪತ್ರೆಗಳಿಗೆ ನೀಡಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.
ಜಿಲ್ಲೆಯಲ್ಲಿ ಹೋಂ ಐಸೋಲೇಷನ್ ನಲ್ಲಿ ಪ್ರಸ್ತುತ 20 ಮಂದಿ ಇದ್ದು, 10 ವರ್ಷದಿಂದ 50 ವರ್ಷ ವಯೋಮಿತಿಯವರಿಗೆ ಈ ಸೌಲಭ್ಯವಿದೆ, ವೈದ್ಯರ ತಂಡ ಸೋಂಕಿತರ ಮನೆಯನ್ನು ಪರಿಶೀಲಿಸಿ, ಅಗತ್ಯ ಸೌಲಭ್ಯಗಳಿದ್ದಲ್ಲಿ ಮಾತ್ರ ಹೋಂ ಐಸೋಲೇಷನ್ ಗೆ ಅನುಮತಿ ನೀಡಲಿದ್ದು, ಪ್ರತಿನಿತ್ಯ ಸೋಂಕಿತರ ಆರೋಗ್ಯ ದ ಕುರಿತು ವರದಿ ಪಡೆಯಲಿದ್ದು, ಅರೋಗ್ಯದಲ್ಲಿ ಏರು ಪೇರಾದರೆ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗುವುದು ಎಂದು ಡಿಸಿ ತಿಳಿಸಿದರು.
ಬೆಂಗಳೂರಿನಲ್ಲಿ ಹೆಚ್ಚಿನ ಕೋವಿಡ್ ಪ್ರಕರಣಗಳು ಕಂಡು ಬರುತ್ತಿರುವುದರಿಂದ ಬೆಂಗಳೂರಿನಿಂದ ಜಿಲ್ಲೆಗೆ ಬಂದವರು ಸ್ವಯಂ ಕ್ವಾರಂಟೈನ್ ಗೆ ಒಳಗಾಗುವುದು , ಮನೆಯವರ ಆರೋಗ್ಯದ ದೃಷ್ಠಿಯಿಂದ ಒಳ್ಳೆಯದು ಎಂದು ಡಿಸಿ ಹೇಳಿದರು.
ಜಿಲ್ಲಾ ಪಂಚಾಯತ್ ಸಿಇಓ ಪ್ರೀತಿ ಗಹ್ಲೋತ್, ಎಸ್ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು ಉಪಸ್ಥಿತರಿದ್ದರು.
Comments are closed.