ನವದೆಹಲಿ: ಸಿಬಿಎಸ್ಇ 10 ಮತ್ತು 12ನೇ ತರಗತಿ ಪರೀಕ್ಷೆಗಳಲ್ಲಿ ದೆಹಲಿಯ ಸರ್ಕಾರಿ ಶಾಲೆಗಳು ಗಮನಾರ್ಹ ಫಲಿತಾಂಶದ ಸಾಧನೆ ತೋರಿವೆ. ಅದರಲ್ಲೂ 12ನೇ ತರಗತಿ ಪರೀಕ್ಷೆಯಲ್ಲಿ ಖಾಸಗಿ ಶಾಲೆಗಳನ್ನೇ ಮೀರಿಸುವಂತೆ ಸರ್ಕಾರಿ ಶಾಲೆಗಳು ರಿಸಲ್ಟ್ ಕೊಟ್ಟಿರುವುದು ಗಮನಕ್ಕೆ ಬಂದಿದೆ. ರಾಷ್ಟ್ರ ರಾಜಧಾನಿಯಲ್ಲಿರುವ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು 12ನೇ ತರಗತಿ ಪರೀಕ್ಷೆಯಲ್ಲಿ ಬರೋಬ್ಬರಿ 98% ಪಾಸ್ ಆಗಿದ್ಧಾರೆ. ಇದು ರಾಜ್ಯ ಸರ್ಕಾರಿ ಶಾಲೆಗಳ ಮಟ್ಟಿಗೆ ಹೊಸ ದಾಖಲೆಯಾಗಿದೆ.
ಇನ್ನು, ನಿನ್ನೆ ಪ್ರಕಟವಾದ ಸಿಬಿಎಸ್ಇ 10ನೇ ತರಗತಿ ಪರೀಕ್ಷೆಯಲ್ಲೂ ದಿಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಉತ್ತಮ ಬೆಳವಣಿಗೆ ಸಾಧಿಸಿದ್ದಾರೆ. ಹಿಂದಿನ ವರ್ಷದಲ್ಲಿ ಶೇ. 71.91 ಫಲಿತಾಂಶ ನೀಡಿದ್ದ ಸರ್ಕಾರಿ ಶಾಲೆಗಳು ಈ ಬಾರಿ ಹೈಜಂಪ್ ಮಾಡಿ ಶೇ 80.91ರಷ್ಟು ಫಲಿತಾಂಶ ನೀಡಿವೆ. ಇದು ರಾಷ್ಟ್ರದ ಸರಾಸರಿಯಾದ 91.46ಕ್ಕಿಂತ ಕಡಿಮೆ ಆದರೂ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಪ್ರಗತಿ ಗಮನಾರ್ಹವೆನಿಸಿದೆ. ಕೇಂದ್ರ ಸರ್ಕಾರ ಸ್ವಾಮ್ಯದ ಕೇಂದ್ರೀಯ ವಿದ್ಯಾಲಯ (ಕೆವಿ) ಮತ್ತು ನವೋದಯ ವಿದ್ಯಾಲಯಗಳ ಫಲಿತಾಂಶವನ್ನು ಪರಿಗಣಿಸದೇ ಕೇವಲ ರಾಜ್ಯ ಸರ್ಕಾರಿ ಶಾಲೆಗಳ ಫಲಿತಾಂಶ ಇದಾಗಿದೆ.
ದೆಹಲಿಯಲ್ಲಿ ಕಳೆದ 5 ವರ್ಷಗಳಿಂದಲೂ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ತೋರುತ್ತಿರುವ ಸಾಧನೆ ಉತ್ತಮಗೊಳ್ಳುತ್ತಲೇ ಇರುವುದು ಕಂಡುಬಂದಿದೆ. 2016ರಲ್ಲಿ ಸಿಬಿಎಸ್ಇ 12ನೇ ತರಗತಿ ಪರೀಕ್ಷೆಯಲ್ಲಿ ದಿಲ್ಲಿ ಸರ್ಕಾರಿ ಶಾಲೆಗಳ ಮಕ್ಕಳು ಶೇ. 85.9 ರಷ್ಟು ತೇರ್ಗಡೆಯಾಗಿದ್ದರು. ಪ್ರತೀ ವರ್ಷವೂ ಪಾಸಿಂಗ್ ಪರ್ಸೆಂಟೇಜ್ ಏರಿಕೆಯಾಗಿ ಈ ವರ್ಷ ಶೇ. 98ಕ್ಕೆ ಬಂದು ನಿಂತಿದೆ.
ಇದು ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಒತ್ತು ಕೊಟ್ಟಿರುವ ಪರಿಣಾಮ ಎಂದು ಅಲ್ಲಿನ ಶಿಕ್ಷಣ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸರ್ಕಾರಿ ಶಾಲೆಗಳ ಗುಣಮಟ್ಟ ಹೆಚ್ಚಲು ಹಲವು ಕಾರಣಗಳನ್ನ ಅವರು ಉಲ್ಲೇಖಿಸುತ್ತಾರೆ.
ಇಲ್ಲಿನ ಸರ್ಕಾರ ತನ್ನ ವಾರ್ಷಿಕ ಬಜೆಟ್ನಲ್ಲಿ ಶೇ. 20ಕ್ಕಿಂತ ಹೆಚ್ಚಿನ ಭಾಗವನ್ನು ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಡುತ್ತದೆ. ಸರ್ಕಾರಿ ಶಾಲೆಗಳ ಕೊಠಡಿ ಸಂಖ್ಯೆಗಳನ್ನ ಹೆಚ್ಚಿಸಲಾಗಿದೆ. ಪ್ರತಿಷ್ಠಿತ ಖಾಸಗಿ ಶಾಲೆಗಳ ರೀತಿಯಲ್ಲಿ ಸ್ವಿಮಿಂಗ್ ಪೂಲ್, ಆಡಿಟೋರಿಯಮ್, ಅತ್ಯಾಧುನಿಕ ಲ್ಯಾಬ್, ಲೈಬ್ರರಿ ಇತ್ಯಾದಿ ಪೂರಕ ಪರಿಸರ ವಾತಾವರಣವನ್ನು ಶಾಲೆಗಳಲ್ಲಿ ಕಲ್ಪಿಸಲಾಗಿದೆ. ಸರ್ಕಾರಿ ಶಾಲಾ ಶಿಕ್ಷಕರಿಗೆ ಸಿಂಗಾಪುರ, ಫಿನ್ಲೆಂಡ್, ಕೇಂಬ್ರಿಡ್ಜ್ ಇತ್ಯಾದಿ ವಿದೇಶಗಳಲ್ಲಿ ತರಬೇತಿ ಕೊಡಿಸಲಾಗುತ್ತದೆ. ಇವರು ತರಗತಿಗಳಲ್ಲಿ ಪ್ರೊಜೆಕ್ಟರ್, ಮೊಬೈಲ್ ಟ್ಯಾಬ್ ಇತ್ಯಾದಿಗಳನ್ನ ಬಳಕೆ ಮಾಡಿ ಪಾಠ ಮಾಡುತ್ತಾರೆ. ಪ್ರತಿಯೊಂದು ಸರ್ಕಾರಿ ಶಾಲೆಯ ಆಡಳಿತದ ಜವಾಬ್ದಾರಿಯನ್ನು ನಿವೃತ್ತ ಮಿಲಿಟರಿ ಅಧಿಕಾರಿಗಳಿಗೆ ವಹಿಸಲಾಗಿದೆ. ಹೀಗೆ ವಿವಿಧ ಆಯಾಮಗಳಲ್ಲಿ ಸರ್ಕಾರಿ ಶಾಲೆಗಳಿಗೆ ಪುಷ್ಟಿ ನೀಡಲಾಗಿದೆ. ಇದರಿಂದ ಒಟ್ಟಾರೆ ಗುಣಮಟ್ಟ ಹೆಚ್ಚಾದಿಗೆ ಎಂಬುದು ಶಿಕ್ಷಣ ತಜ್ಞರ ಅಭಿಪ್ರಾಯ.
ಇಲ್ಲಿನ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಸಚಿವೆ ಆತಿಶಿ ಅವರು ಸರ್ಕಾರಿ ಶಾಲಾ ವ್ಯವಸ್ಥೆ ಸುಧಾರಣೆಗೆ ವೈಯಕ್ತಿಕವಾಗಿಯೂ ಬಹಳ ಆಸಕ್ತಿ ತೋರಿದ್ದಾರೆ. ಹೀಗಾಗಿ, ಅದರ ಪರಿಣಾಮ ಪರೀಕ್ಷೆಗಳ ಫಲಿತಾಂಶದಲ್ಲಿ ಎದ್ದುತೋರುತ್ತಿದೆ ಎನ್ನುತ್ತಾರೆ ಮಕ್ಕಳ ಪೋಷಕರು.
Comments are closed.