ಬೆಂಗಳೂರು (ಜು. 17): ಭಾರತದಲ್ಲಿ ಕಳೆದ 10 ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಇದರಿಂದಾಗಿ ರೈತರ ಮುಖದಲ್ಲಿ ಸಂತಸ ಮೂಡಿದೆ. ಉತ್ತಮ ಮಳೆಯಿಂದಾಗಿ ಭಾರತದ ಜೀವನಾಡಿಯಾಗಿರುವ ಕೃಷಿ ಚಟುವಟಿಕೆಗಳು ಬಿರುಸು ಪಡೆದುಕೊಂಡಿವೆ. ನೈಋತ್ಯ ಮಾನ್ಸೂನ್ನಿಂದಾಗಿ ಈ ವರ್ಷ ಉತ್ತಮ ಬೆಳೆ ಸಿಗುವ ನಿರೀಕ್ಷೆ ರೈತರಲ್ಲಿ ಮೂಡಿದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಭಾರತದ ನಾಲ್ಕು ರಾಜ್ಯಗಳನ್ನು ಹೊರತುಪಡಿಸಿದರೆ ಉಳಿದೆಲ್ಲ ರಾಜ್ಯಗಳಲ್ಲಿ ಈ ವರ್ಷ ಇದುವರೆಗೂ ಶೇ. 18ರಷ್ಟು ಅಧಿಕ ಮಳೆಯಾಗಿದೆ.
ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಪ್ರತಿವರ್ಷ ಅತ್ಯಧಿಕ ಮಳೆಯಾಗುವ ಕೇರಳದಲ್ಲಿ ಈ ಬಾರಿ ಕಡಿಮೆ ಮಳೆಯಾಗಿದೆ. ಕೇರಳದ ಜೊತೆಗೆ ಹಿಮಾಚಲ ಪ್ರದೇಶ, ತ್ರಿಪುರ, ಮಿಜೋರಾಂ ರಾಜ್ಯಗಳಲ್ಲಿ ಈ ವರ್ಷ ಮುಂಗಾರಿನ ಆರ್ಭಟ ಕಡಿಮೆಯಾಗಿದೆ. ಕರ್ನಾಟಕದ ನಾಲ್ಕು ಎತ್ತರದ ಜಿಲ್ಲೆಗಳನ್ನು ಹೊರತುಪಡಿಸಿದರೆ ಉಳಿದೆ ಜಿಲ್ಲೆಗಳಲ್ಲಿ ಇದುವರೆಗೂ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದೆ. ಕೃಷಿಗೆ ಮುಂಗಾರಿನ 45 ದಿನದ ಮಳೆ ಬಹಳ ಮುಖ್ಯ. ಈ ವರ್ಷ ಉತ್ತಮ ಮಳೆಯಾಗುತ್ತಿರುವುದರಿಂದ ಶೇ. 88ರಷ್ಟು ಬಿತ್ತನೆ ಕಾರ್ಯ ಮುಗಿದಿದೆ. ಹಾಗೇ, ಕೊರೋನಾದಿಂದಾಗಿ ಲಾಕ್ಡೌನ್ ಇರುವುದರಿಂದ ಭಾರತದ ಗ್ರಾಮೀಣ ಭಾಗದಲ್ಲಿ ಕೃಷಿ ಚಟುವಟಿಕೆಗಳಿಗೆ ಕೆಲಸಗಾರರು ಕೂಡ ಸುಲಭವಾಗಿ ಸಿಗುತ್ತಿದ್ದಾರೆ. ಕಡಿಮೆ ವೇತನಕ್ಕೆ ಕೆಲಸಗಾರರು ಸಿಗುತ್ತಿರುವುದರಿಂದ ವ್ಯವಸಾಯದ ಕಾರ್ಯ ಕೂಡ ವೇಗ ಪಡೆದಿದೆ.
ಕೃಷಿತಜ್ಞರ ಪ್ರಕಾರ, ಸಮಯಕ್ಕೆ ಸರಿಯಾದ ಮಳೆ, ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಹೆಚ್ಚಳ ಹಾಗೂ ಲಾಕ್ಡೌನ್ನಿಂದಾಗಿ ಲಕ್ಷಾಂತರ ಜನರು ನಗರಗಳಿಂದ ಗ್ರಾಮದತ್ತ ವಾಪಾಸಾಗುತ್ತಿರುವುದರಿಂದ ಭಾರತದ ಕೃಷಿ ಕ್ಷೇತ್ರಕ್ಕೆ ಹೊಸ ಚೈತನ್ಯ ಬಂದಂತಾಗಿದೆ. ದೇಶದಲ್ಲಿ ಅಕ್ಕಿ ಉತ್ಪಾದನೆ 20 ಲಕ್ಷ ಹೆಕ್ಟೇರ್ನಷ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಭಾರತ ಅತಿಹೆಚ್ಚು ಅಕ್ಕಿಯನ್ನು ರಫ್ತು ಮಾಡುವ ದೇಶವಾಗಿ ಹೊರಹೊಮ್ಮಲಿದೆ.
ದೇಶದಲ್ಲಿ ಕೃಷಿ ಚಟುವಟಿಕೆಗಳು ಹೆಚ್ಚಾಗುತ್ತಿರುವುದರಿಂದ ರಾಸಾಯನಿಕ ಗೊಬ್ಬರಗಳಿಗೂ ಬೇಡಿಕೆ ಹೆಚ್ಚಾಗಿದೆ. ಸದ್ಯದ ಅಂಕಿ-ಅಂಶಗಳ ಪ್ರಕಾರ, 2019-20ರಲ್ಲಿ 82.81 ಲಕ್ಷ ಟನ್ ರಸಗೊಬ್ಬರ ಮಾರಾಟವಾಗಿತ್ತು. ಆದರೆ, ಈ ವರ್ಷ 111.61 ಲಕ್ಷ ಟನ್ ರಸಗೊಬ್ಬರ ಮಾರಾಟವಾಗಿದೆ.
ಈ ವರ್ಷ ಭತ್ತದ ಬಿತ್ತನೆ ಕಾರ್ಯ ಕೂಡ ಕಳೆದ ವರ್ಷಕ್ಕಿಂತ ಹೆಚ್ಚಾಗಿದೆ. ಉತ್ತಮ ಮಳೆಯಿಂದ ಭತ್ತದ ಬೆಳೆಯುವ ರೈತರ ಸಂತಸ ಹೆಚ್ಚಾಗಿದೆ. ಈ ವರ್ಷ 36.82 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದೆ. ಕಳೆದ ವರ್ಷ 9.46 ಲಕ್ಷ ಹೆಕ್ಟೇರ್ ಜಾಗದಲ್ಲಿ ಭತ್ತ ಬೆಳೆಯಲಾಗಿತ್ತು. ಈ ವರ್ಷ ಸಿರಿಧಾನ್ಯಗಳ ಬೆಳೆಗಾರರ ಪ್ರಮಾಣದಲ್ಲೂ ಹೆಚ್ಚಳವಾಗಿದೆ. ಕಳೆದ ವರ್ಷ ಭಾರತದಲ್ಲಿ 35.20 ಲಕ್ಷ ಹೆಕ್ಟೇರ್ ಜಾಗದಲ್ಲಿ ಸಿರಿಧಾನ್ಯ ಬೆಳೆಯಲಾಗಿತ್ತು. ಆದರೆ, ಈ ವರ್ಷ 70.69 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸಿರಿಧಾನ್ಯ ಬೆಳೆಯಲಾಗಿದೆ. ಕಳೆದ ವರ್ಷ 49.86 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿತ್ತು. ಆದರೆ, ಈ ವರ್ಷ 50.62 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದೆ. ಕಳೆದ ವರ್ಷ 16.43 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸೋಯಾಬಿನ್ ಬೆಳೆಯಲಾಗಿತ್ತು. ಈ ವರ್ಷ 81.81 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸೋಯಾಬಿನ್ ಬೆಳೆಯಲಾಗಿದೆ. ಒಟ್ಟಾರೆ ಎಲ್ಲ ಬೆಳೆಗಳೂ ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಾಗಿದೆ.
ಒಟ್ಟಾರೆಯಾಗಿ ಭಾರತದ 432.97 ಲಕ್ಷ ಹೆಕ್ಟೇರ್ ಕೃಷಿ ಭೂಮಿಯಲ್ಲಿ ಈ ವರ್ಷ ಬಿತ್ತನೆ ಕಾರ್ಯ ಮಾಡಲಾಗಿದೆ. ಕಳೆದ ವರ್ಷ 202 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆ ಮಾಡಲಾಗಿತ್ತು. ಇದೇ ಮೊದಲ ಬಾರಿಗೆ ದಾಖಲೆ ಪ್ರಮಾಣದಲ್ಲಿ ಭಾರತದಲ್ಲಿ ವ್ಯವಸಾಯ ಕಾರ್ಯ ಹೆಚ್ಚಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಲಡಾಖ್ ಸೇರಿದಂತೆ ಜಮ್ಮು ಮತ್ತು ಕಾಶ್ಮೀರ, ಗುಜರಾತ್, ತೆಲಂಗಾಣ, ಬಿಹಾರ, ಅಸ್ಸಾಂ, ಮೇಘಾಲಯ, ತಮಿಳುನಾಡಿನಲ್ಲಿ ಅತಿಹೆಚ್ಚು ಅಂದರೆ ಶೇ. 1ರಿಂದ ಶೇ. 60ರಷ್ಟು ಮಳೆಯಾಗಿದೆ. ಪಂಜಾಬ್, ಹರಿಯಾಣ, ಉತ್ತರಾಖಂಡ, ಉತ್ತರ ಪ್ರದೇಶ, ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಶಾ, ತ್ರಿಪುರ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಧ್ಯಪ್ರದೇಶ, ಛತ್ತೀಸ್ಗಢ, ರಾಜಸ್ಥಾನ, ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಸಾಧಾರಣ ಮಳೆಯಾಗಿದೆ. ಆಂಧ್ರ ಪ್ರದೇಶದಲ್ಲಿ ಈ ವರ್ಷ ದಾಖಲೆಯ ಮಳೆಯಾಗಿದೆ. ಆಂಧ್ರದಲ್ಲಿ ಶೇ. 60ರಷ್ಟು ಮಳೆ ಹೆಚ್ಚಳವಾಗಿದೆ.
ಭಾರತದಲ್ಲಿ ಲಾಕ್ಡೌನ್ ಘೋಷಣೆಯಾಗಿರುವುದರಿಂದ ಲಕ್ಷಾಂತರ ಜನರು ನಗರಗಳಿಂದ ಗ್ರಾಮಗಳತ್ತ ವಲಸೆ ಬಂದಿದ್ದಾರೆ. ಇದರಿಂದಾಗಿ ಕೃಷಿ ವಲಯಕ್ಕೆ ಮರುಜೀವ ಬಂದಂತಾಗಿದ್ದು, ಕೂಲಿಕಾರ್ಮಿಕರು ಕೂಡ ಸುಲಭವಾಗಿ ಸಿಗುತ್ತಿದ್ದಾರೆ. ಒಂದುವೇಳೆ ರೈತರು ತಮ್ಮ ಬೆಳೆಗಳನ್ನು ರೋಗಗಳಿಂದ ರಕ್ಷಿಸಿದರೆ ಹಾಗೂ ಇನ್ನೂ 2 ತಿಂಗಳು ಇದೇ ರೀತಿಯ ಉತ್ತಮ ಮಳೆ ಮುಂದುವರೆದರೆ ಈ ವರ್ಷ ಭಾರತದಲ್ಲಿ ದಾಖಲೆ ಪ್ರಮಾಣದ ಬೆಳೆ ಕೈಸೇರಲಿದೆ.
Comments are closed.