ನವದೆಹಲಿ(ಜು.17): ಮಹಾರಾಷ್ಟ್ರದ ಯುವಕನೊಬ್ಬ ಪಾಕಿಸ್ತಾನದಲ್ಲಿರುವ ತನ್ನ ಪ್ರೇಯಸಿಯನ್ನು ಭೇಟಿ ಮಾಡಲು ಹೋಗಿ ಗಡಿ ಭದ್ರತಾ ಸಿಬ್ಬಂದಿ ಕೈಗೆ ಸಿಕ್ಕಿ ಬಿದ್ದಿದ್ದಾನೆ.
20 ವರ್ಷದ ಸಿದ್ದಿಕಿ ಮೊಹಮ್ಮದ್ ಜಿಶಾನ್ ಪಾಕಿಸ್ತಾನದ ಯುವತಿಯನ್ನು ಪ್ರೀತಿಸುತ್ತಿದ್ದ ಎಂದು ತಿಳಿದು ಬಂದಿದೆ. ಹೀಗಾಗಿ ಆತ ತನ್ನ ಪ್ರೇಯಸಿಯನ್ನು ಭೇಟಿ ಮಾಡಲು ಗೂಗಲ್ ಮ್ಯಾಪ್ ಮೂಲಕ ಭಾರತ-ಪಾಕಿಸ್ತಾನ ಅಂತರಾಷ್ಟ್ರೀಯ ಗಡಿಯನ್ನು ದಾಟಲು ಯತ್ನಿಸಿದ್ದಾನೆ. ಈ ವೇಳೆ ಗಡಿ ಭದ್ರತಾ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಜಿಶಾನ್ನ್ನು ವಿಚಾರಿಸಿದಾಗ, ಆತ ಕುಚ್ನ ರನ್ನ್ ಮೂಲಕ ಪಾಕಿಸ್ತಾನಕ್ಕೆ ತೆರಳುತ್ತಿದ್ದ ಎನ್ನಲಾಗಿದೆ. ಆತ ಪಾಕಿಸ್ತಾನದ ಸಮ್ರಾ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ. ಯುವತಿಯು ಪಾಕಿಸ್ತಾನದ ಕರಾಚಿಯ ಶಾಹ್ ಫೈಸನಲ್ ನಗರದ ನಿವಾಸಿ. ಸಮ್ರಾ ಸಾಮಾಜಿಕ ಜಾಲತಾಣದ ಮೂಲಕ ಜಿಶಾನ್ಗೆ ಪರಿಚಯವಾಗಿದ್ದಳು. ಇಬ್ಬರೂ ಸಹ ಫೇಸ್ಬುಕ್ ಮತ್ತು ವಾಟ್ಸ್ಯಾಪ್ನಲ್ಲಿ ಸಂಪರ್ಕದಲ್ಲಿದ್ದರು.
ಜಿಶಾನ್ ತನ್ನ ಪ್ರೇಯಸಿ ಜೊತೆ ಇರಲು ಪಾಕಿಸ್ತಾನಕ್ಕೆ ಹೋಗಬೇಕೆಂದು ಇಚ್ಛಿಸಿದ್ದ. ಜೊತೆಗೆ ಗೂಗಲ್ ಮ್ಯಾಪ್ ಬಳಸಿಕೊಂಡು ಪಾಕಿಸ್ತಾನಕ್ಕೆ ತೆರಳಲು ಯತ್ನಿಸಿದ್ದ. ಆಗ ಗಡಿ ಭದ್ರತಾ ಸಿಬ್ಬಂದಿ ಆತನನ್ನು ಬಂಧಿಸಿದ್ದಾರೆ.
ಜಿಶಾನ್ ಪೋಷಕರು ತಮ್ಮ ಮಗ ಕಾಣೆಯಾಗಿದ್ದಾನೆ ಎಂದು ದೂರು ನೀಡಿದ ಬಳಿಕ ಮಹಾರಾಷ್ಟ್ರ ಪೊಲೀಸರು ಆತನ ವಿವರಗಳನ್ನು ಗುಜರಾತ್ ಪೊಲೀಸರೊಂದಿಗೆ ಹಂಚಿಕೊಂಡಿದ್ದಾರೆ. ನಂತರ ಜಿಶಾನ್ನ್ನು ಗಡಿ ದಾಟದಂತೆ ತಡೆಯಲಾಯಿತು.
ಗುಜರಾತ್ನ ಕಚ್ ಜಿಲ್ಲೆಯ ಬಾಲಸರ್ ಪೊಲೀಸ್ ಠಾಣೆಯ ಅಧಿಕಾರಿಗಳು ಗಡಿ ಭದ್ರತಾ ಸಿಬ್ಬಂದಿಯೊಂದಿಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
Comments are closed.