ನವದೆಹಲಿ (ಜು. 20): ಗ್ಯಾಂಗ್ಸ್ಟರ್ ವಿಕಾಸ್ ದುಬೆ ಮೇಲೆ 60ಕ್ಕೂ ಹೆಚ್ಚು ಕ್ರಿಮಿನಲ್ ಕೇಸ್ಗಳಿದ್ದರೂ ಆತನಿಗೆ ಹೇಗೆ ಜಾಮೀನು ಸಿಕ್ಕಿತು? ಇದು ಬಹಳ ಆತಂಕ ಮತ್ತು ಅಚ್ಚರಿಪಡಬೇಕಾದ ಸಂಗತಿ. ಇದು ಸರ್ಕಾರದ ಮತ್ತು ಈ ವ್ಯವಸ್ಥೆಯ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ. ಈ ಬಗ್ಗೆ ಸಂಪೂರ್ಣವಾದ ವರದಿಯನ್ನು ಕೋರ್ಟ್ ಮುಂದೆ ಹಾಜರುಪಡಿಸಿ ಎಂದು ಇಂದು ಸುಪ್ರೀಂ ಕೋರ್ಟ್ ಉತ್ತರಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ವಿಕಾಸ್ ದುಬೆ ಮೇಲೆ 63 ಕ್ರಿಮಿನಲ್ ಕೇಸ್ಗಳಿದ್ದರೂ ಆತನಿಗೆ ಹೇಗೆ ಜಾಮೀನು ನೀಡಲಾಯಿತು. ಜಾಮೀನಿನ ಮೇಲೆ ಹೊರಬಂದ ಆತ 8 ಪೊಲೀಸರನ್ನು ಹತ್ಯೆ ಮಾಡಿ, ತಲೆಮರೆಸಿಕೊಂಡಿದ್ದ ಎಂದರೆ ಈ ವ್ಯವಸ್ಥೆಯ ಮೇಲೆ ಜನರು ನಂಬಿಕೆ ಇರಿಸಿಕೊಳ್ಳಲು ಹೇಗೆ ಸಾಧ್ಯ? ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಷ್ಟು ಕ್ರಿಮಿನಲ್ ಕೇಸ್ಗಳಿದ್ದರೂ ಓರ್ವ ಆರೋಪಿಗೆ ಜಾಮೀನು ಸಿಗುತ್ತದೆ ಎಂದರೆ ನಮಗೆ ಆತಂಕವಾಗುತ್ತಿದೆ. ಆತನಿಗೆ ಜಾಮೀನು ಸಿಕ್ಕಿದ ನಂತರ 8 ಪೊಲೀಸರನ್ನು ಹತ್ಯೆ ಮಾಡಿದ್ದಾನೆ. ಇದು ನಮ್ಮ ಸರ್ಕಾರದ ವ್ಯವಸ್ಥೆಯ ವೈಫಲ್ಯವನ್ನು ತೋರಿಸುತ್ತಿದೆ. ಈ ಬಗ್ಗೆ ಸಂಪೂರ್ಣವಾದ ಮತ್ತು ನಿಖರವಾದ ವರದಿಯನ್ನು ಕೋರ್ಟ್ಗೆ ನೀಡಬೇಕು. ಹಾಗೇ, ಈ ಕೇಸ್ಗೆ ಸಂಬಂಧಪಟ್ಟಂತೆ ನೀಡಲಾಗಿರುವ ಎಲ್ಲ ಆದೇಶಗಳ ಮಾಹಿತಿಯನ್ನೂ ನೀಡಬೇಕು ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ಉತ್ತರ ಪ್ರದೇಶ ಸರ್ಕಾರದ ಪರವಾಗಿ ವಕಾಲತು ವಹಿಸಿರುವ ಸಾಲಿಟರ್ ಜನರಲ್ ತುಷಾರ್ ಮೆಹ್ರಾ ಅವರಿಗೆ ಸೂಚನೆ ನೀಡಿದೆ.
ಒಂದು ಸರ್ಕಾರವಾಗಿ ನೀವು ಎಲ್ಲ ಕಾನೂನು ಮತ್ತು ನಿಯಮಗಳನ್ನು ಪಾಲಿಸಲೇಬೇಕು. ಕಾನೂನು ಎಲ್ಲರಿಗೂ ಒಂದೇ ಆಗಿರುತ್ತದೆ. ಅದನ್ನು ಉಲ್ಲಂಘಿಸುವುದು ತಪ್ಪು. ನೀವು ಇದಕ್ಕೆ ಏನು ಸಮರ್ಥನೆ ನೀಡುತ್ತೀರಿ ಎಂಬುದು ಕೂಡ ನನಗೆ ತಿಳಿದಿದೆ. ಆದರೆ, ಸರ್ಕಾರ ಕಾನೂನು ಮತ್ತು ನಿಯಮಾವಳಿಯನ್ನು ಮೀರಿ ಯಾವ ನಿರ್ಧಾರವನ್ನೂ ತೆಗೆದುಕೊಳ್ಳುವಂತಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ ಹೇಳಿದ್ದಾರೆ. ಸುಪ್ರೀಂ ಕೋರ್ಟ್ ಈ ಪ್ರಕರಣದ ವಿಚಾರಣೆಯನ್ನು ಬುಧವಾರ ನಡೆಸಲಿದೆ.
ಉತ್ತರ ಪ್ರದೇಶದ ಕಾನ್ಪುರದಲ್ಲಿ 8 ಪೊಲೀಸ್ ಸಿಬ್ಬಂದಿಯನ್ನು ಗುಂಡಿಕ್ಕಿ ಕೊಂದಿದ್ದ ಗ್ಯಾಂಗ್ಸ್ಟರ್ ವಿಕಾಸ್ ದುಬೆಯನ್ನು ಜು. 9ಂದು ಬಂಧಿಸಿ ಜು. 10ರಂದು ಕಾನ್ಪುರಕ್ಕೆ ಕರೆದೊಯ್ಯುವಾಗ ಪೊಲೀಸ್ ವಾಹನ ಪಲ್ಟಿ ಹೊಡೆದಿತ್ತು. ಈ ವೇಳೆ ಪೊಲೀಸರ ಬಳಿಯಿದ್ದ ಗನ್ ಎತ್ತಿಕೊಂಡು ಪರಾರಿಯಾಗಲು ಪ್ರಯತ್ನಿಸಿದ್ದ ವಿಕಾಸ್ ದುಬೆಯನ್ನು ಎನ್ಕೌಂಟರ್ನಲ್ಲಿ ಹತ್ಯೆ ಮಾಡಲಾಗಿತ್ತು.
ವಿಕಾಸ್ ದುಬೆಯನ್ನು ಕರೆದೊಯ್ಯುತ್ತಿದ್ದ ಪೊಲೀಸ್ ವಾಹನಕ್ಕೆ ಎಮ್ಮೆಗಳು ಅಡ್ಡಬಂದ ಕಾರಣ ಕಾರು ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ರಸ್ತೆಯಲ್ಲಿ ಸಾಗುತ್ತಿದ್ದ ವಾಹನಗಳ ಎದುರು ಇದ್ದಕ್ಕಿದ್ದಂತೆ ಎಮ್ಮೆಗಳು ಬಂದಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ ಎಂದು ಉತ್ತರ ಪ್ರದೇಶ ಸ್ಪೆಷಲ್ ಟಾಸ್ಕ್ ಫೋರ್ಸ್ (ಎಸ್ಟಿಎಫ್) ಅಧಿಕಾರಿಗಳು ಸ್ಪಷ್ಟನೆ ನೀಡಿದ್ದರು. ನಮ್ಮ ಸಿಬ್ಬಂದಿಯ ಬಳಿಯಿದ್ದ ಗನ್ ಕಿತ್ತುಕೊಂಡು ವಿಕಾಸ್ ದುಬೆ ಪರಾರಿಯಾಗಲು ಪ್ರಯತ್ನಿಸಿದ. ಆಗ ಪೊಲೀಸರು ಆತನನ್ನು ಸುತ್ತುವರೆದು ಶರಣಾಗುವಂತೆ ಎಚ್ಚರಿಸಿದರಾದರೂ ಆತ ಪೊಲೀಸರ ಮೇಲೆ ಗುಂಡು ಹಾರಿಸಲು ಯತ್ನಿಸಿದ. ಈ ವೇಳೆ ದುಬೆಯನ್ನು ಎನ್ಕೌಂಟರ್ ಮಾಡಬೇಕಾಗಿ ಬಂತು ಎಂದು ಪೊಲೀಸರು ಹೇಳಿದ್ದರು.
Comments are closed.