ಮಂಗಳೂರು / ಬೆಂಗಳೂರು, ಜುಲೈ.21: ರಾಜ್ಯದಲ್ಲಿ ಇನ್ಮುಂದೆ ಲಾಕ್ ಡೌನ್ ಇರುವುದಿಲ್ಲ. ಕೊರೊನಾ ವೈರಸ್ ಕಟ್ಟಿಹಾಕಲು ಲಾಕ್ಡೌನ್ ಒಂದೇ ಪರಿಹಾರವಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ವೈ ಯಡಿಯೂರಪ್ಪ ಅವರು ತಿಳಿಸಿದ್ದಾರೆ.
ಮಂಗಳವಾರ ಸಂಜೆ 5 ಗಂಟೆಗೆ ಫೇಸ್ ಬುಕ್ ಲೈವ್ ನಲ್ಲಿ ರಾಜ್ಯದ ಜನತೆಯೊಂದಿಗೆ ಮಾತನಾಡಿದ ಅವರು, ಮಹಾಮಾರಿ ಕೊರೊನಾ ವೈರಸ್ ಕಟ್ಟಿಹಾಕಲು ಲಾಕ್ಡೌನ್ ಒಂದೇ ಪರಿಹಾರವಲ್ಲ. ಜನತೆಯ ಸಹಕಾರ ಕೊರೋನ ವಿರುದ್ಧದ ಹೋರಾಟದಲ್ಲಿ ಅಗತ್ಯವಿದೆ. ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು ಎಂದು ರಾಜ್ಯದ ಜನತೆಯಲ್ಲಿ ಮನವಿ ಮಾಡಿದರು.
ನಾಳೆಯಿಂದ ಬೆಂಗಳೂರಿನಲ್ಲಿ ಲಾಕ್ಡೌನ್ ಇಲ್ಲ. ಅಲ್ಲದೇ, ರಾಜ್ಯದಲ್ಲಿ ಲಾಕ್ಡೌನ್ ವಿಸ್ತರಣೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಸರ್ಕಾರದ ಆರ್ಥಿಕ ಸಂಪನ್ಮೂಲ ಕ್ರೋಢೀಕರಣದ ಜವಾಬ್ದಾರಿ ಇದೆ. ಜನ ಸರ್ಕಾರದ ಜತೆ ಸಹಕಾರ ನೀಡಬೇಕು. ಮಾಸ್ಕ್ ಧರಿಸದವರ ವಿರುದ್ಧ ಅನಿವಾರ್ಯವಾಗಿ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ.ಆಂಬುಲೆನ್ಸ್ ಗಳ ಕೊರತೆ ನೀಗಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಕಂಟೈನ್ಮೆಂಟ್ ವಲಯಗಳಲ್ಲಿ ಮತ್ತಷ್ಟು ಬಿಗಿ ವ್ಯವಸ್ಥೆ ಮಾಡಲಾಗುವುದು.
ಕೊರೋನ ನಿಯಂತ್ರಣಕ್ಕೆ ಸರ್ಕಾರ, ವೈದ್ಯಕೀಯ, ಪೊಲೀಸ್ ಸಿಬ್ಬಂದಿ ಹಗಲಿರುಳು ದುಡಿಯುತ್ತಿದ್ದಾರೆ. ಜನ ಇದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಹಿರಿಯ ನಾಗರಿಕರು ಹಾಗೂ ಮಕ್ಕಳು ಮನೆಯಲ್ಲಿರಬೇಕು. ಕೊರೋನ ಸೋಂಕಿತರ ಬಗ್ಗೆ ಕೀಳರಿಮೆ ಮಾಡಬಾರದು. ಎಲ್ಲರೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ನೀವು ಎಷ್ಟರಮಟ್ಟಿಗೆ ಕಟ್ಟುನಿಟ್ಟಾಗಿ ಪಾಲನೇ ಮಾಡ್ತಿರೋ ಅಷ್ಟರಮಟ್ಟಿಗೆ ಕೋವಿಡ್ ತಡೆಯಲು ನಮ್ಮಿಂದ ಸಾಧ್ಯ ಎಂದು ಯಡಿಯೂರಪ್ಪ ತಿಳಿಸಿದರು.
ದೇಶದೆಲ್ಲೆಡೆ ಕೊರೊನಾ ವೈರಸ್ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ. ಕೋವಿಡ್ ನಿಯಂತ್ರಣ ಮಾಡುವುದರಲ್ಲಿ ಪ್ರಾರಂಭದಲ್ಲಿ ನಾವು ಯಶಸ್ವಿಯಾಗಿದ್ದೆವು. ಆದರೆ, ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಹಾಗೂ ರಾಜ್ಯದಲ್ಲಿ ಪ್ರಕರಣಗಳು ಹೆಚ್ಚಾಗುತ್ತಿವೆ. ಜನರಲ್ಲಿ ನಾನು ಪ್ರಾರ್ಥನೆ ಮಾಡಿಕೊಳ್ಳುವುದೇನೆಂದರೆ, ಇದನ್ನು ತೊಲಗಿಸಲು ಲಾಕ್ಡೌನ್ ಒಂದೇ ಪರಿಹಾರವಲ್ಲ. ಜನರು ಕೋವಿಡ್ ತೊಲಗಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕು.ಮಾಸ್ಕ್ಗಳನ್ನು ಪ್ರತಿಯೊಬ್ಬರು ಧರಿಸಬೇಕು ಎಂದು ಮನವಿ ಮಾಡಿದರು.
ರಾಜ್ಯ ಸರ್ಕಾರ ಕೊರೋನ ಸೋಂಕು ನಿಯಂತ್ರಣಕ್ಕೆ Trace, Track, Test, Treat and Technology ಎಂಬ 5T ಸೂತ್ರ ಅಳವಡಿಸಿಕೊಂಡಿದೆ. ಕೋವಿಡ್ ನಿಯಂತ್ರಣಕ್ಕೆ ತಜ್ಞರು ಕೊಟ್ಟಿರುವ 5ಟಿ ತಂತ್ರಗಳು ಬಹಳ ಮುಖ್ಯವಾಗಿವೆ. ಅವುಗಳೆಂದರೆ ಟ್ರೇಸ್ (ಪತ್ತೆ), ಟ್ರ್ಯಾಕ್ (ಹುಡುಕು), ಟೆಸ್ಟ್ (ಪರೀಕ್ಷೆ), ಟ್ರೀಟ್ (ಚಿಕಿತ್ಸೆ) ಹಾಗೂ ಟೆಕ್ನಾಲಜಿ (ತಂತ್ರಜ್ಞಾನ) ತಂತ್ರಗಳನ್ನು ಅಳವಡಿಸಿಕೊಳ್ಳುವುದರಲ್ಲಿ ರಾಜ್ಯ ಈಗಾಗಲೇ ಮುಂಚೂಣಿಯಲ್ಲಿದೆ. ಇದರಿಂದ ಕೋವಿಡ್ ತಡೆಯಲು ಸಾಧ್ಯ ಎಂಬುದು ನನ್ನ ನಂಬಿಕೆಯಾಗಿದೆ ಎಂದು ಹೇಳಿದರು.
ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕೊರೋನ ಸೋಂಕು ಹೆಚ್ಚಾಗಿದೆ. ಅಂತಹ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದೇನೆ. ಲಾಕ್ಡೌನ್ ಜಾರಿ ಮಾಡದೆ ಪರ್ಯಾಯವಾಗಿ ಸೋಂಕು ನಿಯಂತ್ರಣ ಮಾಡುವ ಕಡೆ ಒತ್ತು ನೀಡುವ ಜತೆಗೆ ಜನತೆಯಲ್ಲಿ ಅರಿವು ಮೂಡಿಸಲು ಸೂಚನೆ ನೀಡಲಾಗಿದೆ.
ರಾಜ್ಯದಲ್ಲಿ ಪತ್ತೆಯಾಗಿರುವ ಶೋಂಕಿತರಲ್ಲಿ ಶೇ.80ಕ್ಕೂ ಹೆಚ್ಚು ಸೋಂಕಿತರಲ್ಲಿ ಯಾವುದೇ ರೋಗ ಲಕ್ಷಣಗಳು ಇಲ್ಲ. ಇಂತಹ ಲಘು ರೋಗ ಲಕ್ಷಣ ಇರುವವರಿಗೆ ಆಸ್ಪತ್ರೆಯ ಅವಶ್ಯಕತೆ ಇಲ್ಲ ಎಂಬುದನ್ನು ರಾಜ್ಯದ ಜನ ಮನವರಿಕೆ ಮಾಡಿಕೊಳ್ಳಬೇಕು. ಅಂತಹವರನ್ನು ಮನೆಯಲ್ಲಿ ಅಥವಾ ಕೋವಿಡ್ ಕೇರ್ ಕೇಂದ್ರದಲ್ಲಿ ಪ್ರತ್ಯೇಕವಾಗಿ ಇರಿಸಲಾಗುವುದು.
ಸೋಂಕಿತರಲ್ಲಿ ಶೇ. 5 ರಷ್ಟು ಮಂದಿಗೆ ಮಾತ್ರ ಐಸಿಯು ಅಥವಾ ವೆಂಟಿಲೇಟರ್ ಅಗತ್ಯವಿದೆ ಎಂಬುದು ಈಗಾಗಲೇ ಅನುಭವಕ್ಕೆ ಬಂದಿರುವ ಮಾತು. ಬೆಂಗಳೂರಿನಲ್ಲಿ ಕೋವಿಡ್ ಚಿಕಿತ್ಸೆಗೆ ಈಗಾಗಲೇ 11230 ಹಾಸಿಗೆಗಳನ್ನು ಮೀಸಲಿಟ್ಟಿದ್ದೇವೆ ಎಂದು ಸಿಎಂ ಹೇಳಿದರು.
ಬೆಂಗಳೂರಿನ ಎಂಟು ದಿಕ್ಕುಗಳಿಗೆ ಎಂಟು ಜನರಿಗೆ ಜವಾಬ್ದಾರಿ ಮತ್ತು ಬಿಬಿಎಂಪಿ ಅಧಿಕಾರಿ ನೇಮಕ ಮಾಡಲಾಗಿದೆ. ಅಲ್ಲದೆ, ಕೆಲ ಜಿಲ್ಲೆಗಳಲ್ಲಿ ಕೊರೊನ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಡಿಸಿಗಳಿಗೆ ಸೂಚನೆ ನೀಡಿದ್ದೇನೆ. ಬೆಂಗಳೂರು ಸೇರಿದಂತೆ ಎಲ್ಲ ಕಡೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಈ ಹೋರಾಟದಲ್ಲಿ ಜನರು ಸಹ ಸಹಕಾರ ನೀಡಬೇಕೆಂದು ಮನವಿ ಮಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇನ್ಮುಂದೆ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಲಾಕ್ಡೌನ್ ವಿಸ್ತರಣೆ ಇಲ್ಲ ಎಂದರು.
Comments are closed.