ಗುರುಗ್ರಾಮ: ಉತ್ತರ ಪ್ರದೇಶದ ಗುರುಗ್ರಾಮದಲ್ಲಿ ಪೊಲೀಸರು ತಪಾಸಣೆಗೆ ಹೋದ ಸಮಯದಲ್ಲಿ ಬೈಕ್ ಕಳ್ಳರೆಂದು ಶಂಕಿಸಲಾದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು, ಅವರಿಂದ ಅಪಾರ ಬೈಕ್‌ಗಳನ್ನೂ ವಶಕ್ಕೆ ಪಡೆದುಕೊಳ್ಳಲಾಗಿತ್ತು.
ಈ ಇಬ್ಬರು ಆರೋಪಿಗಳ ಹಿನ್ನೆಲೆ ಬೆನ್ನಟ್ಟಿ ಹೋದ ಪೊಲೀಸರೇ ಬೆರಗಾಗುವಂಥ ಘಟನೆ ನಡೆದಿದೆ. ಅದೇನೆಂದರೆ ಈ ಬೈಕ್ ಕಳ್ಳರದ್ದೇ ಬೃಹತ್ ಜಾಲವೊಂದಿದ್ದು, ಅವರೇ ಕ್ಲಬ್ ಒಂದನ್ನು ಶುರು ಮಾಡಿದ್ದಾರೆ. ಇದರಲ್ಲಿ ಕೇವಲ ಬೈಕ್ ಕಳ್ಳರಿಗೆ ಮಾತ್ರ ಪ್ರವೇಶವಿದೆ. ಈ ಕ್ಲಬ್ ಹೆಸರು ‘ಬೈಕರ್ಸ್ ಗ್ಯಾಂಗ್-ಹಮ್ ಸಿಕಂದರ್’
ಬೈಕ್ ಕಳ್ಳತನ ಮಾಡಿದ ತಕ್ಷಣ ಅವುಗಳ ಎಲ್ಲಾ ಭಾಗಗಳನ್ನು ಬೇರ್ಪಡಿಸಿ ಮಾರಾಟ ಮಾಡುವುದು ಒಂದೆಡೆಯಾದರೆ, ಅದೇ ಬೈಕ್‌ಗಳನ್ನು ಸ್ವಲ್ಪ ಆಲ್ಟರ್ ಮಾಡಿ ಸೆಕೆಂಡ್ ಹ್ಯಾಂಡ್‌ಗೆ ಮಾರಾಟ ಮಾಡುವ ದೊಡ್ಡ ಜಾಲವೊಂದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಜತೆಗೆ, ಯಾವುದಾದರೂ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಳ್ಳಬೇಕಾದರೆ ಈ ಬೈಕ್ ನೆರವು ಪಡೆಯುವುದು ಈ ಗ್ಯಾಂಗ್‌ನ ದೊಡ್ಡ ಜಾಲಗಳಲ್ಲಿ ಒಂದು. ಅಪರಾಧ ನಡೆದ ಸಂದರ್ಭದಲ್ಲಿ ಸಿಸಿಟಿವಿ ಮೂಲಕವೋ ಅಥವಾ ಪ್ರತ್ಯಕ್ಷ ಸಾಕ್ಷಿಯೋ ಬೈಕ್ ನಂಬರ್ ಪತ್ತೆಯಾದರೆ, ಅದರ ಮಾಲೀಕರೇ ಬೇರೆಯವರು ಇರುವ ಕಾರಣ, ಇವರು ತಪ್ಪಿಸಿಕೊಳ್ಳಬಹುದು ಎನ್ನುವ ಕಾರಣಕ್ಕೆ ಅಪರಾಧ ಕೃತ್ಯಗಳಲ್ಲಿ ಇಂಥ ಬೈಕ್‌ಗಳ ಬಳಕೆ ಮಾಡುತ್ತಿರುವುದು ತಿಳಿದಿದೆ.
ಈ ಕ್ಲಬ್‌ನಲ್ಲಿ ಅಪಾರ ಸಂಖ್ಯೆಯ ಸದಸ್ಯರಿದ್ದು, ಎಲ್ಲರದ್ದೂ ಬೈಕ್ ಕಳ್ಳತನದ ಕೆಲಸವೇ. ಕಳೆದ ಆರು ವರ್ಷಗಳಲ್ಲಿ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಸುಮಾರು 500 ಮೋಟಾರ್‌ಸೈಕಲ್ ಕಳ್ಳತನಗಳ ಹಿಂದೆ ಈ ಕ್ಲಬ್‌ನ ಸದಸ್ಯರು ಇದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಪೊಲೀಸರು ಬಂಧಿಸಿದ್ದ 18 ಮತ್ತು 22 ವರ್ಷದ ಯುವಕರಿಂದ ಇದರ ಸಂಪೂರ್ಣ ಮಾಹಿತಿ ಬಯಲಾಗಿದೆ. ಈ ಕ್ಲಬ್ 2014ರಲ್ಲಿ ರಚನೆ ಮಾಡಲಾಗಿದೆ. ಅಚ್ಚರಿಯ ಸಂಗತಿ ಎಂದರೆ ಇಲ್ಲಿ ಸದಸ್ಯರಾಗಿರುವವರಲ್ಲಿ ಹೆಚ್ಚಿನವರು ಅಪರಾಧ ಹಿನ್ನೆಲೆಯವರೂ ಅಲ್ಲ, ಅಥವಾ ಬೈಕ್ ಕಳ್ಳತನದ ಬಗ್ಗೆ ಹೆಚ್ಚಿನ ಅರಿವು ಇರವವರೂ ಅಲ್ಲ. ಅನೇಕ ಮಂದಿ ವಿದ್ಯಾವಂತರೇ ಇದರ ಸದಸ್ಯರಾಗಿದ್ದಾರೆ. ಅದ್ದೂರಿ ಜೀವನ ನಡೆಸಲು ಬಯಸುವವರು ಇಲ್ಲಿ ಸೇರಿಕೊಳ್ಳುತ್ತಾರೆ. ನಂತರ ಅವರು ಬೈಕ್ ಕಳ್ಳತನವನ್ನು ಕಲಿಯುತ್ತಾರೆ. ಬೈಕ್ ಕಳ್ಳತನದಲ್ಲಿ ಪಳಗಿದ ಮೇಲೆ ಈ ಕ್ಲಬ್‌ನ ಶಾಶ್ವತ ಸದಸ್ಯರಾಗುತ್ತಾರೆ.
ಲಾಕ್‌ಡೌನ್ ತೆರವುಗೊಂಡ ನಂತರ ಈ ಕದ್ದಿರುವ ಬೈಕ್‌ಗಳನ್ನು ಮಾರಾಟ ಮಾಡಲು ಜಮ್ಮು ಮತ್ತು ಕಾಶ್ಮೀರಕ್ಕೆ 700 ಕಿಲೋಮೀಟರ್‌ಗಿಂತ ಹೆಚ್ಚು ಪ್ರಯಾಣ ಮಾಡಿರುವುದಾಗಿ ಬಂಧಿತ ಇಬ್ಬರು ಬಹಿರಂಗಪಡಿಸಿದ್ದಾರೆ. ಬೈಕ್‌ಗಳನ್ನು 2 ಸಾವಿರ ರೂಪಾಯಿಗಳಿಗೂ ಮಾರಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಲಾಕ್‌ಡೌನ್ ಅವಧಿಯಲ್ಲಿ ಹೊರಕ್ಕೆ ಹೋಗಲಾಗದೇ ಕೆಲಸವಿಲ್ಲದ ಈ ಕ್ಲಬ್ ಸದಸ್ಯರು ಅದಾಗಲೇ ಕದ್ದಿರುವ ಬೈಕ್‌ಗಳಿಗೆ ಬೇರೆ ಬೇರೆ ಬಣ್ಣ ಹಚ್ಚುವಲ್ಲಿ ನಿರತರಾಗಿದ್ದರು. ನಂತರ ಲಾಕ್‌ಡೌನ್ ತೆರವುಗೊಂಡ ಮೇಲೆ ಕಡಿಮೆ ಹಣವಾದರೂ ಪರವಾಗಿಲ್ಲ ಎಂದುಕೊಂಡು ಕಡಿಮೆ ರೇಟ್‌ಗೆ ಮಾರಾಟ ಮಾಡಿರುವುದಾಗಿ ಪೊಲೀಸರು ಹೇಳಿದ್ದಾರೆ. ಈ ಕ್ಲಬ್‌ನ ಇನ್ನಷ್ಟು ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.
Comments are closed.