ರಾಷ್ಟ್ರೀಯ

ದೇಶದ ಶೇ.15ರಷ್ಟು ಮಂದಿಗೆ ಈಗಾಗಲೇ ಕೊರೋನಾ ವೈರಸ್ ಬಂದು ಹೋಗಿದೆ: ವರದಿ

Pinterest LinkedIn Tumblr


ನವದೆಹಲಿ: ಭಾರತದಲ್ಲಿ ಮಾರಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 11 ಲಕ್ಷ ಗಡಿ ದಾಟಿರುವತೆಯೇ ಇತ್ತ ಅಧ್ಯಯನವೊಂದು ಈಗಾಗಲೇ 18 ಕೋಟಿ ಭಾರತೀಯರಲ್ಲಿ ಕೊರೋನಾ ವೈರಸ್ ಬಂದು ಹೋಗಿದೆ ಎಂಬ ಅಚ್ಚರಿ ಅಂಶವನ್ನು ಬಯಲಿಗೆ ತಂದಿದೆ.

ಹೌದು.. ಖ್ಯಾತ ಖಾಸಗಿ ಪರೀಕ್ಷಾ ಲ್ಯಾಬ್ ಸಂಸ್ಥೆ ಥೈರೋಕೇರ್ ಈ ಬಗ್ಗೆ ಮಾಹಿತಿ ನೀಡಿದ್ದು, ತಾನು ನಡೆಸಿದ ಅಧ್ಯಯನದಲ್ಲಿ ದೇಶದ ಸುಮಾರು 18 ಕೋಟಿ ಭಾರತೀಯರಲ್ಲಿ ಈಗಾಗಲೇ ಕೊರೋನಾ ವೈರಸ್ ಬಂದು ಹೋಗಿದೆ ಎಂದು ಹೇಳಿದೆ.

ಭಾರತದಲ್ಲಿ ಕೊರೋನಾ ಸೋಂಕಿತರ ಹೆಚ್ಚಳದ ಬೆನ್ನಲ್ಲೇ ಐಸಿಎಂಆರ್ ಎರಡು ರೀತಿಯ ಕೋವಿಡ್ ಟೆಸ್ಟ್ ಗೆ ಅನುಮತಿ ನೀಡಿದೆ. ಅಲ್ಲದೆ ಪಟ್ಟಿ ಮಾಡಿದ ಕೆಲ ಖಾಸಗಿ ಲ್ಯಾಬ್ ಗಳೂ ಕೂಡ ಕೊರೋನಾ ಪರೀಕ್ಷೆ ಮಾಡಲು ಆರಂಭಿಸಿವೆ. ಈ ಪೈಕಿ ಥೈರೋಕೇರ್ ಲ್ಯಾಬ್ ಕೂಡ ಒಂದಾಗಿದ್ದು. ಈ ಥೈರೋಕೇರ್ ಸಂಸ್ಥೆ ದೇಶದ ವಿವಿಧ ಮೂಲೆಗಳಿಂದ ಸುಮಾರು 60 ಸಾವಿರ ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಿದೆ. ಈ ರೀತಿ ಪರೀಕ್ಷೆಗಳಪಡಿಸಿದ ದತ್ತಾಂಶಗಳನ್ನು ಥೈರೋಕೇರ್ ಸಂಸ್ಥೆ ಅಧ್ಯಯನ ಮಾಡಿದ್ದು, ಅದರಂತೆ ದೇಶದ ಸುಮಾರು ಶೇ.15ರಷ್ಟು ಮಂದಿಗೆ ಈಗಾಗಲೇ ಕೊರೋನಾ ಬಂದು ಹೋಗಿದೆ ಎಂಬ ಅಚ್ಚರಿ ಅಂಶವನ್ನು ಬಯಲಿಗೆ ತಂದಿದೆ.

ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಮಾಹಿತಿ ನೀಡಿರುವ ಥೈರೋಕೇರ್ ಸಂಸ್ಥೆಯ ಮುಖ್ಯಸ್ಥ ಆರೋಕಿಯಾ ಸ್ವಾಮಿ ವೇಲುಮಣಿ ಅವರು, ಥೈರೋಕೇರ್ ಸಂಸ್ಥೆ ದೇಶದ ವಿವಿಧ ಮೂಲೆಗಳಿಂದ ಸುಮಾರು 60 ಸಾವಿರ ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಿದೆ. ಪ್ರಮುಖವಾಗಿ ಇತ್ತೀಚಿನ ದಿನಗಳಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಸೋಂಕಿತರು ಕಂಡುಬರುತ್ತಿರುವ ಥಾಣೆ, ಬೆಂಗಳೂರು, ಹೈದರಾಬಾದ್ ಮತ್ತು ಇತರೆ ಜಿಲ್ಲೆಗಳಲ್ಲಿ ಥೈರೋಕೇರ್ ಸಂಸ್ಥೆ ಆಂಟಿಬಾಡಿ ಟೆಸ್ಟ್ ಮಾಡಿದೆ. ಸುಮಾರು 60 ಸಾವಿರ ಮಂದಿಯನ್ನು ಥೈರೋಕೇರ್ ಸಂಸ್ಥೆ ಟೆಸ್ಟ್ ಗೆ ಒಳಪಡಿಸಿದೆ. ಅದರ ದತ್ತಾಂಶಗಳ ಅಧಾರದ ಮೇಲೆ ದೇಶದ ಶೇ.15ರಷ್ಟು ಮಂದಿಗೆ ಈಗಾಗಲೇ ಕೊರೋನಾ ವೈರಸ್ ಬಂದು ಹೋಗಿದೆ. ಇವರಲ್ಲಿ ಈಗಾಗಲೇ ಆಂಟಿಬಾಡಿ ಕೂಡ ರಚನೆಯಾಗಿದೆ ಎಂದು ಹೇಳಿದ್ದಾರೆ.

ದೇಶದ ಶೇ. 90ರಷ್ಟು ಮಂದಿ ಇನ್ನೂ ಕೊರೋನಾ ವೈರಸ್ ಸೋಂಕಿಗೆ ತುತ್ತಾಗಿಲ್ಲ. ಕೇವಲ ಶೇ.9ರಷ್ಟು ಮಂದಿ ಮಾತ್ರ ಸೋಂಕಿಗೆ ತುತ್ತಾಗಿದ್ದಾರೆ. ಲಕ್ಷಣಗಳಿಲ್ಲ. ಉತ್ತಮ ರೋಗ ನಿರೋಧಕ ಶಕ್ತಿಯಿಂದ ಗುಣುಖರಾದವರು ಶೇ.0.9.. ಶೇ.0.9.ಮಂದಿಯಲ್ಲಿ ಲಕ್ಷಣಗಳು ಕಂಡುಬಂದಿದ್ದು, ಪ್ರಸುತ ಸೋಂಕಿಗೆ ತುತ್ತಾದವರ ಪೈಕಿ ಶೇ.0.9ರಷ್ಟು ಸೋಂಕಿತರು ಗಂಭೀರ ಸ್ಥಿತಿಯಲ್ಲಿದ್ದಾರೆ. ಆಸ್ಪತ್ಪೆಗೆ ದಾಖಲಾಗಿ ಗುಣಮುಖರಾದವರ ಪ್ರಮಾಣ ಶೇ.0.1ರಷ್ಟು ಎಂದು ಟ್ವೀಟ್ ಮಾಡಿದ್ದಾರೆ.

ವೇಲುಮಣಿ ಅವರ ಪ್ರಕಾರ ದೇಶದಲ್ಲಿ ಶೇ.10 ರಿಂದ 30ರಷ್ಟು ಮಂದಿಯಲ್ಲಿ ಆಂಟಿಬಾಡಿ ರಚನೆಯಾಗಿದೆ. ಅಂದರೆ ಇಷ್ಟು ಮಂದಿಯಲ್ಲಿ ಕೊರೋನಾ ವೈರಸ್ ಬಂದು ಹೋಗಿದೆ ಎಂದು ಅರ್ಥ. ಪ್ರಸ್ತುತ ನಾವು ದೇಶದ ವಿವಿಧೆಡೆ ಸುಮಾರು 60 ಸಾವಿರ ಮಂದಿಯ ಆಂಟಿಬಾಡಿ ಟೆಸ್ಟ್ ಮಾಡಿದ್ದೇವೆ. ಈ ಪ್ರಮಾಣವನ್ನು ಗಮನಿಸಿದರೆ ದೇಶದ 18 ಕೋಟಿ ಜನರು ತಮಗೆ ಗೊತ್ತಿಲ್ಲದೇ ಕೊರೋನಾ ವೈರಸ್ ಗೆ ತುತ್ತಾಗಿ ಗುಣಮುಖರಾಗಿದ್ದಾರೆ. ಅಂತೆಯೇ ಕೊರೋನಾ ವೈರಸ್ ಸಮುದಾಯಕ್ಕೆ ಹರಡಿರುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಬಹಳಷ್ಟು ಜನ ಇಷ್ಟು ಕಡಿಮೆ ಪ್ರಮಾಣದ ಟೆಸ್ಟ್ ಮೂಲಕ ನಿಖರ ಉತ್ತರ ಪಡೆಯುವುದು ಕಷ್ಟ ಎಂದು. ಆದರೆ ನಾನು ಹೇಳುತ್ತೇನೆ ಎಲ್ಲರಿಗೂ ಅವರದ್ದೇ ಆದ ದೃಷ್ಟಿಕೋನ ಮತ್ತು ಚಿಂತನೆಗಳಿರುತ್ತವೆ ಎಂದು ವೇಲುಮಣಿ ಹೇಳಿದ್ದಾರೆ.

ಅಂತೆಯೇ ಕೊರೋನಾ ವೈರಸ್ ಸೈಲೆಂಟ್ ಆಗಿ ಎಲ್ಲರನ್ನೂ ಆವರಿಸುತ್ತಿದ್ದು, ವೇಗವಾಗಿ ರೋಗನಿರೋಧಕ ಶಕ್ತಿಯನ್ನು ಪ್ರಚೋದಿಸುತ್ತಿದೆ ಎಂದು ವೇಲುಮಣಿ ಅಭಿಪ್ರಾಯಪಟ್ಟಿದ್ದಾರೆ.

Comments are closed.