ಕರ್ನಾಟಕ

ಜೆಡಿಎಸ್​ ಕಾರ್ಯಕರ್ತರಿಂದಲೇ ನಿಖಿಲ್​ ಕುಮಾರಸ್ವಾಮಿಗೆ ತರಾಟೆ

Pinterest LinkedIn Tumblr

ಬೆಂಗಳೂರು: ಜೆಡಿಎಸ್​ನ ಯುವರಾಜ ನಿಖಿಲ್​ ಕುಮಾರಸ್ವಾಮಿಗೆ ಪಕ್ಷದ ಕಾರ್ಯಕರ್ತರೇ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಕೂಡಲೇ ಯುವ ಘಟಕದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಪಕ್ಷದಿಂದಲೇ ಹೊರಡಿ, ರಾಜಕೀಯದತ್ತ ಮತ್ತೆ ಸುಳಿಯಬೇಡಿ ಎಂದೆಲ್ಲ ಖಡಕ್​ ವಾರ್ನಿಂಗ್​ ಮಾಡಿದ್ದಾರೆ.

ನಾವು ಯಾವತ್ತಿದ್ದರೂ ಕುಮಾರಣ್ಣ ಮತ್ತು ದೇವೇಗೌಡರ ಅಭಿಮಾನಿಗಳು. ರಾಜಕೀಯ ನಿಮಗೆ(ನಿಖಿಲ್​) ಆಗಿ ಬರಲ್ಲ‌‌. ಯುವ ಅಧ್ಯಕ್ಷ ಸ್ಥಾನವನ್ನ ಗ್ರೌಂಡ್ ಕೆಲಸ ಮಾಡೋರಿಗೆ ಬಿಟ್ಟು ಕೊಡ್ರಿ.. ಇಲ್ಲಾಂದ್ರೆ ಪಕ್ಷ ಹಾಳಾಗುತ್ತೆ.. ನೀವು ಸಿನಿಮಾ ಮಾಡ್ಕೊಂಡು ಆರಾಮಾಗಿರಿ… ಎಂದೆಲ್ಲ ನಿಖಿಲ್​ಗೆ ಪಕ್ಷದ ಕಾರ್ಯಕರ್ತರು ಖಾರವಾಗಿಯೇ ಸಲಹೆ ನೀಡಿದ್ದಾರೆ. ಅಷ್ಟಕ್ಕೂ ಕಾರ್ಯಕರ್ತರು ನಿಖಿಲ್​ ವಿರುದ್ಧ ಕೋಪಗೊಂಡಿರೋದು ಏಕೆ ಗೊತ್ತಾ?

‘ಸೃಜನಶೀಲ ನಿರ್ಮಾಪಕರು ಮತ್ತು ಆತ್ಮೀಯರು ಆದ ಶ್ರೀ ಮುನಿರತ್ನ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು’ ಎಂದು ನಿಖಿಲ್​ಗೌಡ ತನ್ನ ಫೇಸ್​ಬುಕ್​ನಲ್ಲಿ ಪೋಸ್ಟ್ ಹಾಕಿಕೊಂಡಿರುವುದೇ ಈ ರಾದ್ದಾಂತಕ್ಕೆಲ್ಲ ಕಾರಣ.

ಹೌದು, ಎಚ್​.ಡಿ. ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್​ ಸಮ್ಮಿಶ್ರ ಸರ್ಕಾರ ಪತನವಾಗಲು ವಿ. ಮುನಿರತ್ನ ಕೂಡ ಕಾರಣಕರ್ತರು. ಮುನಿರತ್ನ ಆ್ಯಂಡ್​ ಟೀಂ ಪಕ್ಷ​ ತೊರೆದು ಬಿಜೆಪಿಗೆ ಹೋಗಿದ್ದರಿಂದಲೇ ಕುಮಾರಸ್ವಾಮಿ ಸರ್ಕಾರ ಬಹುಮತ ಕಳೆದುಕೊಂಡು ಬಿಜೆಪಿಗೆ ಅಧಿಕಾರ ಬಿಟ್ಟುಕೊಡುವಂತಾಯಿತು. ಅಂದಿನಿಂದ ಪಕ್ಷದ ಸ್ಥಳೀಯ ಕಾರ್ಯಕರ್ತರು ಮತ್ತು ಮುನಿರತ್ನ ಬೆಂಬಲಿಗರ ನಡುವೆ ಮುಸುಕಿನ ಗುದ್ದಾಟ ಇದ್ದೇ ಇದೆ.

ಈ ನಡುವೆ ನಿಖಿಲ್​ ಕುಮಾರಸ್ವಾಮಿ, ಮುನಿರತ್ನ ಜತೆಗಿರುವ ಫೋಟೋವೊಂದನ್ನು ಫೇಸ್​ಬುಕ್​ನಲ್ಲಿ ಹಾಕಿ ಬರ್ತ್​ ಡೇ ವಿಶ್ ಮಾಡಿದ್ದಾರೆ. ಇದನ್ನ ಕಂಡ ಜೆಡಿಎಸ್​ ಬೆಂಬಲಿಗರು ಹೌಹಾರಿದ್ದಾರೆ.

ಶ್ರೀನಿವಾಸ್ ರೆಡ್ಡಿ ಕ್ರಾಂತಿಕಾರಿ ಎಂಬುವವರು, ‘ಅಣ್ಣ ನಿನಗೆ(ನಿನಗೆ) ರಾಜಕೀಯ ಮಾಡೋದು ಬರಲ್ಲ. ಸಿನಿಮಾ ಮಾಡ್ಕೋಳಿ. ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡೋದು ಸೂಕ್ತ’ ಎಂದು ಕಮೆಂಟ್​ ಮಾಡಿದ್ದಾರೆ.

‘ನಿಖಿಲ್ ಅವ್ರೇ ನಿಮ್ಮ ಮೇಲೆ ನಮಗೆ ತುಂಬಾ ಅಭಿಮಾನ ಇದೆ. ಆದರೆ, ನೀವು ಈ ರೀತಿ ಮಾಡಿದರೆ ನಮಗೆ(ಕಾರ್ಯಕರ್ತರಿಗೆ) ಅವಮಾನ. ನಿಮಗೆ ಅಭಿಮಾನ ಇದ್ರೆ ಫೋನ್ ನಲ್ಲಿ ಅಭಿನಂದಿಸಿ. ನಿಮ್ಮ ಅಧಿಕೃತ ಪೇಜ್​ನಲ್ಲಿ ವಿಶ್ ಮಾಡಿರೋದು ಇಡೀ ಜೆಡಿಎಸ್​ ಕಾರ್ಯಕರ್ತರಿಗೆ ಮಾಡಿರುವ ಅವಮಾನ’ ಎನ್ನುತ್ತ ನಿಖಿಲ್​ಗೆ ನಯವಾಗಿಯೇ ತಿವಿದ ಬಿ.ಟಿ. ರಾಮಕೃಷ್ಣ, ‘ನಿಮ್ಮನ್ನ ತಲೆ ಮೇಲೆ ಹೊತ್ತು ತಿರುಗುವ ನಮಗೆ ಇಷ್ಟೇನಾ ನೀವು ಕೊಟ್ಟ ಗೌರವ. ನಿಮಗೋಸ್ಕರ ಎಲ್ಲರನ್ನೂ ವಿರೋಧ ಮಾಡಿಕೊಳ್ಳುತ್ತಿದ್ದೇವೆ. ಸರ್ಕಾರ ಬೀಳಿಸಿ ಡ್ರಾಮಾ ಆಡಿದ ಇವನು. ನಾನು ಯಾವತ್ತಿದ್ದರೂ ಕುಮಾರಣ್ಣ-ದೇವೇಗೌಡರ ಅಭಿಮಾನಿ. ಈ ತರ ನೀವು ಡಬ್ಬಲ್ ಸ್ಟ್ಯಾಂಡ್ ಮೈಂಟೈನ್ ಮಾಡೋದು ತಪ್ಪು’ ಎಂದು ಬುದ್ಧಿಮಾತು ಹೇಳಿದ್ದಾರೆ.

ಇನ್ನು ಖಾರವಾಗಿಯೇ ಕಮೆಂಟ್​ ಕೊಟ್ಟಿರುವ ಲಕ್ಷ್ಮೀಕಾಂತ ಗೌಡ, ‘ಹೀಗೆ ಹೋದರೆ… ಈ ಜನ್ಮದಲ್ಲಿ ಎಲೆಕ್ಷನ್​ನಲ್ಲಿ ಗೆಲ್ಲೋಕೆ ಆಗಲ್ಲ… ಹೀಗೆ ಬಹಿರಂಗವಾಗಿ ಫೋಟೋ ಹಾಕಿ ನಿಷ್ಠಾವಂತ ಕಾರ್ಯಕರ್ತರ ಮಾನ ಮರ್ಯಾದೆ ಹಾಳು ಮಾಡುವ ಬದಲು ಯುವ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ’ ಎಂದು ಆಗ್ರಹಿಸಿದ್ದಾರೆ.

‘ನೀವು ಸಿನಿಮಾ ಮಾಡ್ಕೊಂಡು ಆರಾಮಾಗಿರಿ…ರಾಜಕೀಯ ನಿಮಗೆ ಆಗಿ ಬರಲ್ಲ‌‌. ಪಕ್ಷ ಬಿಟ್ಟು ಹೋದವರನ್ನು ನೀವು ಅಭಿಮಾನಿಸಿದ್ರೆ ನಾನು ಕೂಡ ಜೆಡಿಸ್ ಬಿಟ್ಟು ಆಚೆ ಹೋಗಬೇಕಾಗುತ್ತೆ‌‌‌‌‌… ಹುಷಾರ್!’ ಎಂದು ತಮ್ಮಣ್ಣ ಗೌಡ ಎಚ್ಚರಿಸಿದ್ದಾರೆ.

ಮಾಧವ್ ಆರ್​. ಗೌಡ ಅವರು, ‘ನಿಖಿಲ್ ಹೀಗೆ ಹೇಳ್ತಿದ್ದೀನಿ ಅಂತ ಬೇಜಾರು ಮಾಡ್ಕೋಬೇಡಿ, ಜವಾಬ್ದಾರಿಯುತವಾಗಿ ಪಕ್ಷ ಸಂಘಟನೆ ಮಾಡುವ ನಿಷ್ಠಾವಂತ ಕಾರ್ಯಕರ್ತನಿಗೆ ಯುವ ಘಟಕದ ಅಧ್ಯಕ್ಷ ಸ್ಥಾನವನ್ನು ಬಿಟ್ಟು ಕೊಡಿ’ ಎಂದು ಮನವಿ ಮಾಡಿದ್ದಾರೆ.

‘ಕಾಂಪ್ರಮೈಸ್ ರಾಜಕೀಯ ಮಾಡೋನು ಎಂದಿಗೂ ನಾಯಕ ಆಗೋಕೆ ಸಾಧ್ಯವಿಲ್ಲ… ಜೆಡಿಎಸ್ ಗೆ ಗುಡ್​ ಬೈ…’ ಎಂದು ವಿಕಾಸ್​ ಗುರುದೇವ್​ ಎಂಬುವವರು ಕಮೆಂಟ್​ ಮಾಡಿದ್ದಾರೆ.

ನಿಮ್ಮಪ್ಪನಿಗೇ ವಿಷ ಇಕ್ಕಿದ ಅಯೋಗ್ಯನಿಗೆ ಬರ್ತ್ ಡೇ ವಿಶ್ ಮಾಡೋದು, ವಾವ್ ಸೂಪರ್!?, ಯಾಕೆ ಸುಮ್ನೆ ನಮ್ಮಂತಹ ನಿಷ್ಠಾವಂತ ಕಾರ್ಯಕರ್ತರ ಹಾಗೂ ಅಭಿಮಾನಿಗಳ ಹೊಟ್ಟೆ ಉರುಸ್ತೀರಾ?, ರಾಜಕೀಯ ಬೇಕೋ ಅಥವಾ ಫಿಲ್ಮ್ ಬೇಕೋ ಎರಡರಲ್ಲಿ ಒಂದನ್ನ ಆಯ್ಕೆ ಮಾಡಿಕೊಳ್ಳಿ, ನಿಖಿಲ್ ರಾಜಕೀಯ ಬಿಟ್ಟು ಸೃಜನಶೀಲ ನಿರ್ಮಾಪಕನ ಹತ್ತಿರವೇ ಇರು, ನಿನಗೆ ದೇವೇಗೌಡರಷ್ಟು ರಾಜಕೀಯ ಕಿಚ್ಚು ಇಲ್ಲ, ಏನೋ ಮಾರಾಯ ನಿನ್ನ ಅವಸ್ಥೆ? ಸುಮ್ನೆ ನಿನ್ನ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬೇರೆ ಯಾವುದಾದರೂ ಕ್ಷೇತ್ರದಲ್ಲಿ ಕೆಲಸ ಮಾಡಿಕೊಂಡು ಇರು.. ನಮ್ಮ ಪಕ್ಷವನ್ನು ಯಾಕೆ ಹಾಳು ಮಾಡುತೀ..? ಹೀಗೆ ನೂರಾರು ಮಂದಿ ನಿಖಿಲ್​ ವಿರುದ್ಧ ಕಮೆಂಟ್ಸ್ ಮಾಡುತ್ತಿದ್ದು, ವಿ.ಮುನಿರತ್ನಗೆ ಬರ್ತ್​ ಡೇ ವಿಶ್ ಮಾಡಿದ್ದಕ್ಕೆ ಆಕ್ರೋಶ ಹೊರ ಹಾಕಿದ್ದಾರೆ.

Comments are closed.