ಕೋಲಾರ: ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಮಲ್ಲಪ್ಪನಬೆಟ್ಟ ದೈವೀಯ ಮಹತ್ವವನ್ನು ಹೊಂದಿರುವ ಸ್ಥಳವಾಗಿದೆ ಎಂಬ ಮಾತಿದೆ. ಕರ್ನಾಟಕ, ತಮಿಳುನಾಡು, ಆಂಧ್ರ ರಾಜ್ಯಗಳ ಗಡಿಯ ಅರಣ್ಯ ಪ್ರದೇಶದಲ್ಲಿ ಅಪರೂಪದ ಶಿವನ ದೇಗುಲವಿದ್ದು, ಹಲವು ವರ್ಷಗಳಿಂದಲೂ ಕರ್ನಾಟಕ ರಾಜ್ಯದ ಮುಜರಾಯಿ ಇಲಾಖೆಯಿಂದ ಅರ್ಚಕರನ್ನ ನೇಮಿಸಿ ಪೂಜೆ ಪುನಸ್ಕಾರಗಳನ್ನ ಮಾಡಿಕೊಂಡು ಬರಲಾಗುತ್ತಿದೆ. ಆದರೆ ಚಂದ್ರಬಾಬು ನಾಯುಡು ಅವರು ಆಂಧ್ರದ ಸಿಎಂ ಆದ ನಂತರ, ಸ್ವಕ್ಷೇತ್ರ ಕುಪ್ಪಂ ತಾಲೂಕಿನ ಜನರನ್ನ ಮೆಚ್ಚಿಸಲು, ಬೆಟ್ಟಕ್ಕೆ ಕೋಲಾರ ಜಿಲ್ಲೆಯಿಂದ ಬರುವ ದಾರಿಯನ್ನ ತಡೆದು ಉದ್ದಟತನ ಪ್ರದರ್ಶಿಸಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಅವರು ಸಿಎಂ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಆದರೆ ಬೆಟ್ಟದಲ್ಲಿನ ಗರ್ಭಗುಡಿಯಲ್ಲಿನ ಮುಖ್ಯ ದೇವರ ಲಿಂಗವನ್ನು ಬೇರೆಡೆ ಸ್ಥಳಾಂತರ ಮಾಡುವ ದುಸ್ಸಾಹಸಕ್ಕೆ ಕೈ ಹಾಕಿದ್ದ ಆಂದ್ರದ ಅರ್ಚಕರು ಇದೀಗ ಅನಾರೋಗ್ಯಕ್ಕೆ ತುತ್ತಾಗಿ ದೇಗುಲ ನೂತನ ಗರ್ಭಗುಡಿಗೆ ಲಿಂಗವನ್ನ ಸ್ಥಳಾಂತರ ಮಾಡಲಾಗದೆ ಶಾಪಕ್ಕೆ ಗುರಿಯಾಗಿದ್ದಾರೆಂಬ ಮಾತುಗಳು ಹರಿದಾಡುತ್ತಿದೆ.
ಈ ಮಧ್ಯೆ ಕೋಲಾರ ಜಿಲ್ಲೆಯ ಸಾರ್ವಜನಿಕರ ಬೇಡಿಕೆಯನ್ನ ಜಿಲ್ಲಾಡಳಿತ ಇನ್ನೂ ಪರಿಗಣಿಸಿದಂತೆ ಅನ್ನಿಸುತ್ತಿಲ್ಲ. ಮಲ್ಲಪ್ಪನಬೆಟ್ಟಕ್ಕೆ ಕರ್ನಾಟಕದಿಂದಲೇ ತೆರಳಲು ರಸ್ತೆ ಮಾರ್ಗ, ಹಾಗು ದೇಗುಲ ಭೂಭಾಗ ಸಂಬಂಧ ಇರುವ ವಿವಾದವನ್ನ ಬಗೆಹರಿಸಿಕೊಳ್ಳಲು ಸೆಂಟ್ರಲ್ ಸರ್ವೇ ಮಾಡಿಸುವಂತೆ ಹಲವು ವರ್ಷಗಳಿಂದ ಮನವಿ ಮಾಡುತ್ತಿದ್ದರೂ ಇನ್ನು ಸರ್ವೇ ಕಾರ್ಯ ನಡೆದಿಲ್ಲ.
ಮೂರು ರಾಜ್ಯಗಳ ಸ್ವತ್ತು ಈ ಅಪರೂಪದ ಮಲ್ಲಪ್ಪನಬೆಟ್ಟ:
ಗಡಿಭಾಗದ ಗ್ರಾಮಸ್ಥರು ದೇವಾಲಯಕ್ಕೆ ಹೋಗಬೇಕಾದರೆ ಅಂಧ್ರದ ಅನುಮತಿ ಪಡೆದು ಹೋಗಬೇಕಾದ ಪರಿಸ್ಥಿತಿ ಇದೆ. ಅಂಧ್ರದ ಕುಪ್ಪಂ, ತಮಿಳುನಾಡಿನ ಕೃಷ್ಣಗಿರಿ ಹಾಗೂ ರಾಜ್ಯದ ಅರಣ್ಯಪ್ರದೇಶದೊಂದಿಗೆ ಗಡಿ ಹಂಚಿಕೊಂಡಿರುವ ಮಲ್ಲಪ್ಪನ ಬೆಟ್ಟದಲ್ಲಿ ಈ ದೇವಾಲಯವಿದ್ದು ಮುಜರಾಯಿ ಇಲಾಖೆಗೆ ಸೇರಿದ ಅತಿ ಪುರಾತನ ದೇಗುಲವಾಗಿದೆ. ಇನ್ನು, ರಾಜ್ಯಗಳ ಗಡಿ ನಕ್ಷೆಯಲ್ಲಿ ಶಿವನ ಗರ್ಭಗುಡಿ ರಾಜ್ಯಕ್ಕೆ ಸೇರಿದ್ರೆ, ಗುಡಿ ಮುಂದಿರುವ ಜಾಗ ಅಂಧ್ರಕ್ಕೆ ಸೇರಿದೆ. ಹಾಗಾಗಿ ಎರಡು ರಾಜ್ಯಗಳ ನಡುವೆ ಗಡಿವಿವಾದಕ್ಕೆ ಇದು ಕಾರಣವಾಗಿದೆ. 2013 ರಿಂದ ಎರಡು ರಾಜ್ಯಗಳ ನಡುವೆ ದೇವಾಲಯ ಗಡಿವಿವಾದ ನಡೆಯುತ್ತಿದ್ದರೆ, ಇತ್ತ ತಮಿಳುನಾಡು ಮಾತ್ರ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಈ ವಿವಾದವನ್ನ ಸುಲಭವಾಗಿ ಬಗೆಹರಿಸಬಹುದು ಎಂಬ ವಾದವಿದೆ. ಆದರೆ ಆಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ದೇಗುಲ ರಾಜ್ಯ ಕೈಬಿಟ್ಟು ಹೋಗುವ ಆತಂಕದಲ್ಲಿದೆ. ಇನ್ನು, ಈ ಪ್ರದೇಶ ಅಂಧ್ರದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಪ್ರತಿನಿಧಿಸುವ ಕುಪ್ಪಂ ವ್ಯಾಪ್ತಿಗೆ ಬರುವುದರಿಂದ ವಿವಾದಕ್ಕೆ ಸಿಲುಕಿದೆ. ಅಂಧ್ರ ಸರ್ಕಾರ ತನ್ನ ಗಡಿಭಾಗದಲ್ಲಿ ಉತ್ತಮ ರಸ್ತೆ ನಿರ್ಮಾಣ ಮಾಡಿ ಬೆಟ್ಟಕ್ಕೆ ಸಂಪರ್ಕ ಕಲ್ಪಿಸಿದೆ. ದೇಗುಲ ಇರುವ ಜಾಗ ತಮ್ಮದೆಂದು ಅಂಧ್ರದವರು ಮೊದಲಿಂದಲು ತಗಾದೆ ತೆಗೆದಿದ್ದಾರೆ.
ಹಚ್ಚ ಹಸಿರಿಂದ ಕಂಗೊಳಿಸುವ ಬೆಟ್ಟ, ಮೋಡಗಳ ಮಧ್ಯೆ ಮುಳುಗಿರುವ ಸುಂದರ ತಾಣ:ಮಲ್ಲಪ್ಪನಬೆಟ್ಟ ಅದ್ಭುತವಾದ ನೈಸರ್ಗಿಕ ಸೌಂದರ್ಯ ಹೊಂದಿದೆ. ಹೀಗಾಗಿ ಅಭಿವೃದ್ದಿಪಡಿಸಿದರೆ ರಾಜ್ಯದ ಜನರಿಗೆ ಉತ್ತಮ ಪ್ರವಾಸಿ ತಾಣವಾಗಬಹುದು. ದೇವಾಲಯಕ್ಕೆ ಹೋಗಿಬರಲು ರಾಜ್ಯದ ಗಡಿಯಿಂದ ಜಿಲ್ಲಾಡಳಿತ ಉತ್ತಮ ರಸ್ತೆ ನಿರ್ಮಾಣ ಮಾಡಬೇಕೆಂದು ಸ್ಥಳೀಯರು ಅಗ್ರಹಿಸುತ್ತಾ ಬಂದಿದ್ದಾರೆ. ಅದರೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಆಧಿಕಾರಿಗಳು ಮಾತ್ರ ನಿರ್ಲಕ್ಷ್ಯ ವಹಿಸಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರದಿಂದ ಸೆಂಟ್ರಲ್ ಸರ್ವೇ ಕಾರ್ಯ ನಡೆಯಬೇಕು, ಜಿಲ್ಲಾಡಳಿತ ಹಾಗು ಸರ್ಕಾರ ಅಗತ್ಯ ಕ್ರಮ ಜರುಗಿಸಬೇಕು ಎಂಬುದು ಜಿಲ್ಲೆಯ ಜನರ ಆಗ್ರಹವಾಗಿದೆ.
Comments are closed.