ಕರ್ನಾಟಕ

ಲಾಕ್​ಡೌನ್ ಸಂದರ್ಭ ಬೆಂಗಳೂರಿನಲ್ಲಿ ಡ್ರಗ್ಸ್ ಜಾಲ; 48 ಆರೋಪಿಗಳ ಅರೆಸ್ಟ್

Pinterest LinkedIn Tumblr


ಬೆಂಗಳೂರು(ಜು.27): ಮಾಹಾಮಾರಿ ಕೊರೊನಾ ಸೋಂಕು ಹೋಗಲಾಡಿಸಲು ಸರ್ಕಾರ ಹಲವು ಕ್ರಮಗಳನ್ನ ಕೈಗೊಂಡಿದೆ‌. ಪ್ರಮುಖವಾಗಿ ಸೋಂಕು ಹರಡುವಿಕೆ ತಡೆಯಲು ಲಾಕ್ ಡೌನ್ ಜಾರಿ ಮಾಡಲಾಗಿತ್ತು. ಲಾಕ್ ಡೌನ್ ನಿಂದಾಗಿ ಜನರ ಓಡಾಟ, ವಾಹನಗಳ ಸಂಚಾರ, ವ್ಯಾಪಾರ ವಹಿವಾಟು ಎಲ್ಲವೂ ಸ್ಥಗಿತವಾಗಿತ್ತು. ಆದರೆ ಲಾಕ್ ಡೌನ್ ವೇಳೆಯೇ ಕೆಲ ದಂಧೆಕೋರರು ಮಾದಕ ವಸ್ತುಗಳನ್ನ ಎಗ್ಗಿಲ್ಲದೆ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಉದ್ಯಾನ ನಗರಿ ಬೆಂಗಳೂರಿನಲ್ಲಿ ದಿನೇ ದಿನೇ ಕೊರೋನಾ ಸೋಂಕು ಹೆಚ್ಚಾಗುತ್ತಿದೆ. ಕೊರೋನಾ ಆಟ್ಟಹಾಸಕ್ಕೆ ಕಡಿವಾಣ ಹಾಕಲು ಸರ್ಕಾರ ಸಿಲಿಕಾನ್ ಸಿಟಿಯನ್ನು ಲಾಕ್ ಡೌನ್ ಮಾಡಿತ್ತು. ಆದರೆ ಇದೇ ವೇಳೆ ನಗರದಲ್ಲಿ ಡ್ರಗ್ಸ್ ಮಾರಾಟ ಜಾಲವು ವಿಸ್ತರಣೆಯಾಗಿದ್ದು, ಪೊಲೀಸರ ನಿದ್ದೆಗೆಡಿಸಿದೆ. ಲಾಕ್ ಡೌನ್ ಬಳಿಕ ನಗರದಲ್ಲಿ ಆನ್ಲೈನ್ ಮೂಲಕ ಮಾದಕವಸ್ತು ಮಾರಾಟ ದಂಧೆ ಶುರುವಾಗಿದೆ. ಈ ದಂಧೆಯಲ್ಲಿ ವಿದ್ಯಾರ್ಥಿಗಳು, ಟೆಕ್ಕಿಗಳು, ಯುವಕ-ಯುವತಿಯರನ್ನ ಟಾರ್ಗೆಟ್ ಮಾಡಿಕೊಂಡು ಆಸಾಮಿಗಳು ಮಾದಕವಸ್ತುಗಳನ್ನ ಮಾರಾಟ ಮಾಡುತ್ತಿದ್ದರು ಎಂಬ ವಿಷಯ ಬಯಲಾಗಿದೆ.

ಲಾಕ್ ಡೌನ್ ವೇಳೆ ಮನೆಯಲ್ಲಿದ್ದ ಯುವಕರನ್ನ ಪೋನ್ ಮೂಲಕ ಸಂಪರ್ಕಿಸುತ್ತಿದ್ದ ಮಾರಾಟಗಾರು, ಬಳಿಕ ಕೊರಿಯರ್ ಮೂಲಕ ವಿದ್ಯಾರ್ಥಿಗಳು ಮತ್ತು ಯುವಕರಿಗೆ ಮಾದಕವಸ್ತು ಕಳಿಸುತ್ತಿದ್ದರಂತೆ‌‌. ಲಾಕ್ ಡೌನ್ ವೇಳೆ ಡ್ರಗ್ಸ್, ಗಾಂಜಾ, ಎಂಡಿಎಂಎ ಮಾರಾಟ ಜಾಸ್ತಿಯಾಗಿದ್ದರಿಂದ ನಗರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. ಕಳೆದ ಎರಡು ಮೂರು ದಿನಗಳಿಂದ ವಿಶೇಷ ದಾಳಿ ನಡೆದಿದ್ದು ಕೆಜಿಗಟ್ಟಲೆ ಮಾದಕವಸ್ತುಗಳನ್ನ ವಶಕ್ಕೆ ಪಡೆದಿದ್ದಾರೆ.

ನಗರದ ಪೂರ್ವ ವಿಭಾಗದಲ್ಲಿ 29 ಆರೋಪಿಗಳನ್ನ ಬಂಧಿಸಿರುವ ಪೊಲೀಸರು, ಆರೋಪಿಗಳಿಂದ 1.6 ಕೆಜಿಯಷ್ಟು ಮಾದಕ ವಸ್ತುಗಳನ್ನ ಜಪ್ತಿ ಮಾಡಿದ್ದಾರೆ‌. ಅದೇ ರೀತಿ ದಕ್ಷಿಣ ವಿಭಾಗದಲ್ಲಿ 1.1 ಕೆಜಿಯಷ್ಟು ಮಾದಕ ವಸ್ತುಗಳು ಜಪ್ತಿ ಮಾಡಿದ್ದು19 ಆರೋಪಿಗಳನ್ನ ಬಂಧಿಸಿದ್ದಾರೆ.

ಪೋನ್ ಮೂಲಕ ವಿದ್ಯಾರ್ಥಿಗಳು, ಯುವಕ ಯುವತಿಯರನ್ನ ಸಂಪರ್ಕಿಸುತ್ತಿದ್ದ ಡ್ರಗ್ ಪೆಡ್ಲರ್ ಗಳು ದೊಡ್ಡ ಮಟ್ಟದಲ್ಲಿ ಮಾದಕವಸ್ತು ಸಪ್ಲೈ ಮಾಡಿರೋದು ಬೆಳಕಿಗೆ ಬಂದಿದೆ. ಬಂಧಿತ ಡ್ರಗ್ ಪೆಡ್ಲರ್ ಗಳ ವಿರುದ್ದ NDPS ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Comments are closed.