ಆರೋಗ್ಯ

ಉಡುಪಿ ಜಿಲ್ಲೆಯಲ್ಲಿ ಸಿಇಟಿ ಪರೀಕ್ಷೆ ಆರಂಭ: ವಿದ್ಯಾರ್ಥಿಗಳ ಆರೋಗ್ಯ ಹಿತದೃಷ್ಟಿಯಿಂದ ಹಲವು ಕ್ರಮಗಳು

Pinterest LinkedIn Tumblr

ಕುಂದಾಪುರ: ನವೇಲ್ ಕೊರೋನಾ ಸೋಂಕು ಹರಡುತ್ತಿರುವ ಭೀತಿಯ ನಡುವೆಯೂ ಸಕಲ ಮುಂಜಾಗೃತಾ ಕ್ರಮಗಳೊಂದಿಗೆ ದ್ವಿತೀಯ ಪಿಯುಸಿಯ ಒಂದು ಪರೀಕ್ಷೆ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿದ್ದ ಸರಕಾರ ಇದೀಗಾ ಸಿಇಟಿ ಪರೀಕ್ಷೆಯನ್ನು ಮುಂಜಾಗೃತಾ ಕ್ರಮಗಳೊಂದಿಗೆ ನಡೆಸಲು ಉದ್ದೇಶಿಸಿದ್ದು ಇಂದು ಮತ್ತು ನಾಳೆ ಸಿಇಟಿ ಪರೀಕ್ಷೆ ನಡೆಯಲಿದೆ. ಉಡುಪಿ ಡಿಸಿ ಜಿ. ಜಗದೀಶ್ ಅವರು ಜಿಲ್ಲೆಯ ಒಂದಷ್ಟು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು.

ಉಡುಪಿ‌ ಜಿಲ್ಲೆಯಲ್ಲಿ ಒಟ್ಟು 10 ಪರೀಕ್ಷಾ ಕೇಂದ್ರಗಳಿದ್ದು 3912 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಕಾರ್ಕಳದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ 264, ಭುವನೇಂದ್ರ ಪದವಿ‌ಪೂರ್ವ ಕಾಲೇಜಿನಲ್ಲಿ 288 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಕುಂದಾಪುರ ಸರಕಾರಿ‌ ಪದವಿಪೂರ್ವ ಕಾಲೇಜಲ್ಲಿ 552 ವಿದ್ಯಾರ್ಥಿಗಳು, ಆರ್.ಎನ್. ಶೆಟ್ಟಿ ಕಾಲೇಜಿನಲ್ಲಿ 480 ವಿದ್ಯಾರ್ಥಿಗಳು, ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಎಕ್ಸಾಂ ಬರೆಯುವ 336 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಜಿಲ್ಲೆಯಲ್ಲಿಯೇ ಅತೀ ದೊಡ್ಡ ಕೇಂದ್ರ ಕುಂದಾಪುರ ಸರಕಾರಿ‌ ಪದವಿ ಪೂರ್ವ ಕಾಲೇಜು ಆಗಿದೆ.

ಇನ್ನು ಉಡುಪಿಯ ವಿದ್ಯೋದಯ ಪದವಿ ಪೂರ್ವ ಕಾಲೇಜಿನಲ್ಲಿ 456, ಉಡುಪಿ‌ ಪೂರ್ಣ ಪ್ರಜ್ಞಾ ಪದವಿ ಪೂರ್ವ ಕಾಲೇಜಿನಲ್ಲಿ 456, ಮಣಿಪಾಲ ಪದವಿಪೂರ್ವ ಕಾಲೇಜು 312, ಎಂಜಿಎಂ ಪದವಿಪೂರ್ವ ಕಾಲೇಜಿನಲ್ಲಿ 456, ಸರಕಾರಿ ಪದವಿಪೂರ್ವ ಕಾಲೇಜು ಉಡುಪಿಯಲ್ಲಿ 312 ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಬರೆಯಲಿದ್ದಾರೆ.

ಸಿಇಟಿ ಪರೀಕ್ಷೆ ಹಿನ್ನೆಲೆ ಎಲ್ಲಾ ಪರೀಕ್ಷಾ ಕೇಂದ್ರ ಸ್ಯಾನಿಟೈಸಿಂಗ್ ಮಾಡಿ ಸಕಲ ತಯಾರಿ ಮಾಡಿಕೊಳ್ಳಲಾಗಿದ್ದು ಎಲ್ಲಾ ಪರೀಕ್ಷಾ ಕೇಂದ್ರದಲ್ಲಿ ವಿಶೇಷ ಮೀಸಲು ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಜು.30 ಗುರುವಾರ ಜೀವಶಾಸ್ತ್ರ, ಗಣಿತ ಪರೀಕ್ಷೆ, ಜು.31 ಶುಕ್ರವಾರ ಭೌತಶಾಸ್ತ್ರ, ರಸಾಯನ ಶಾಸ್ತ್ರ ಪರೀಕ್ಷೆ ನಡೆಯಲಿದೆ.

ಪರೀಕ್ಷೆಗೆ ಆಗಮಿಸುವ ವಿದ್ಯಾರ್ಥಿಗಳಿಗೆ ಮೊದಲು ಥರ್ಮಲ್ ಸ್ಕ್ರೀನಿಂಗ್ ಸ್ಯಾನಿಟೈಸರ್ ವ್ಯವಸ್ಥೆ ಹಾಗೂ ವಿದ್ಯಾರ್ಥಿಗಳಿಗೆ ಮಾಸ್ಕ್, ಸಾಮಾಜಿಕ ಅಂತರ ಪಾಲನೆಗೂ ಒತ್ತು ನೀಡಲಾಗಿದೆ. ಎನ್.ಎಸ್.ಎಸ್., ಭಾರತೀಯ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರದ ಹೊರಗೆ ಅಗತ್ಯ ಸೇವೆಗೆ ನಿಯೋಜನೆ ಮಾಡಲಾಗಿದೆ.

ಆಯಾಯ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು, ಆರೋಗ್ಯ ಇಲಾಖೆ, ಆಶಾ ಕಾರ್ಯಕರ್ತೆಯರು, ಪೊಲೀಸ್ ಇಲಾಖೆ ಸಿಬ್ಬಂದಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.