ಉಡುಪಿ: ಕಾಪು ತಾಲೂಕಿನ ಪಡುಬಿದ್ರಿಯ ಮಳೆಹಾನಿ ಪ್ರದೇಶ ಹಾಗೂ ಕಡಲ್ಕೊರೆತ ಪ್ರದೇಶಗಳಿಗೆ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ್ ಬೊಮ್ಮಾಯಿ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಅವರು , ಜಿಲ್ಲೆಯಲ್ಲಿ ಕಳೆದ ಎರಡು ವಾರಗಳಿಂದ ಮಳೆಯಿಂದಾಗಿ ಹಾನಿಯುಂಟಾಗಿದ್ದು, ಅಲ್ಲದೇ ಕಡಲ್ಕೊರೆತ ಹಾಗೂ ನದಿಯ ನೀರಿನ ರಭಸದಿಂದ ಕೊರೆತ ಉಂಟಾಗಿದೆ. ಅಲ್ಲದೆ ಮನೆಗಳಿಗೆ ನೀರು ನುಗ್ಗಿ ಜನಸಾಮಾನ್ಯರಿಗೆ ತೊಂದರೆ ಉಂಟಾಗಿದೆ ಎಂದರು.
ಹೆಚ್ಚು ಮಳೆಯಿಂದಾಗಿ ಪಶ್ಚಿಮ ಘಟ್ಟಗಳ ಕಡೆಯಿಂದ ನದಿಗಳಲ್ಲಿ ಹೆಚ್ಚು ನೀರು ಉಕ್ಕಿ ಹರಿದು ನದಿ ದಡದಲ್ಲಿ ವಾಸಿಸುವ ಜನರ ಸುರಕ್ಷತೆಯನ್ನು ಕಾಪಾಡಲು ಮುನ್ನೆಚ್ಚರಿಕೆ ಕ್ರಮಗಳನ್ನು ಜಿಲ್ಲಾಡಳಿತದಿಂದ ಕೈಗೊಂಡಿದೆ ಎಂದು ಉಸ್ತುವಾರಿ ಸಚಿವರು ಹೇಳಿದರು. ಕರಾವಳಿ ತೀರದಲ್ಲಿ ಎರಡು ಪ್ರಮುಖ ಸಮಸ್ಯೆಗಳಾದ ಕಡಲ್ಕೊರೆತ ಹಾಗೂ ಮಣ್ಣು ಕುಸಿತ ಉಂಟಾಗುತ್ತಿದೆ. ಕಡಲ್ಕೊರೆತ ನಿಯಂತ್ರಿಸಲು ಶಾಶ್ವತ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲು ಹಾಗೂ ಪಶ್ಚಿಮ ಘಟ್ಟದ ಸೂಕ್ಷ್ಮ ಪ್ರದೇಶದಲ್ಲಿ ಭೂಕುಸಿತ ಉಂಟಾಗುವ ಪ್ರದೇಶಗಳನ್ನು ಗುರುತಿಸಿ ಅದಕ್ಕೆ ಸಂಬಂಧಿಸಿದಂತೆ ಜಿಯೋ ಮ್ಯಾಪಿಂಗ್ ಮುನ್ಸೂಚನೆ ಕ್ರಮಗಳನ್ನು ಸ್ಥಾಪಿಸಲು ಕೇಂದ್ರ ಭೂವಿಜ್ಞಾನ ಸರ್ವೇಕ್ಷಣಾ ಇಲಾಖೆ ಅಧ್ಯಯನ ನಡೆಸಲು ನಿನ್ನೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನಡೆಸಿದ ವಿಡಿಯೋ ಸಂವಾದದಲ್ಲಿ ಅವರ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ನೆರೆ ಪರಿಹಾರಕ್ಕಾಗಿ ಜಿಲ್ಲಾಡಳಿತದಲ್ಲಿ 3 ಕೋಟಿ ರೂ,ಗಳಿದ್ದು, ,ಇನ್ನೂ 10 ಕೋಟಿ ರೂಪಾಯಿ ಎನ್.ಡಿ.ಆರ್.ಎಫ್ನಲ್ಲಿ ನೀಡಲು ಬೇಡಿಕೆ ಇಟ್ಟಿದ್ದೇವೆ. ಇನ್ನೂ ಮರ್ನಾಲ್ಕು ದಿನಗಳಲ್ಲಿ ಬಿಡುಗಡೆಯಾಗಲಿದೆ ಎಂದರು.
ಪ್ರಕೃತಿ ವಿಕೋಪದ ತುರ್ತು ಸಂದರ್ಭದಲ್ಲಿ ಕರ್ಯ ನಿರ್ವಹಿಸಲು ಎನ್.ಡಿ.ಆರ್.ಎಫ್ ಹಾಗೂ ಅಗ್ನಿಶಾಮಕದಡಿಯಲ್ಲಿ ಎಲ್.ಜಿ.ಆರ್.ಎಫ್ ತಂಡಗಳನ್ನು ರಚನೆ ಮಾಡಿದ್ದು, ಮಂಗಳೂರು, ಬೆಳಗಾಂ, ಗುಲ್ಬರ್ಗಾ ಮತ್ತು ಬೆಂಗಳೂರಿನಲ್ಲಿ ನಾಲ್ಕು ತಂಡಗಳನ್ನು ನಿಯೋಜಿಸಿದ್ದು ಈಗಾಗಲೇ ಕರ್ಯ ಪ್ರವೃತವಾಗಿದೆ ಎಂದರು. ರಾಜ್ಯದ 15 ಜಿಲ್ಲೆಗಳಲ್ಲಿ ತುರ್ತು ಪ್ರಕೃತಿ ವಿಕೋಪ ಸಂದರ್ಭದಲ್ಲಿ ತಕ್ಷಣ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಅಗ್ನಿಶಾಮಕ ಘಟಕಗಳಿಗೆ ಅವಶ್ಯಕವಿರುವ ಸಲಕರಣೆಗಳನ್ನು ಖರೀದಿ ಮಾಡಲು ಅನುದಾನ ಬಿಡುಗಡೆ ಮಾಡಿರುವುದಾಗಿ ತಿಳಿಸಿದರು.
ಸ್ವಾತಂತ್ರೋತ್ಸವ ದಿನಾಚರಣೆಯನ್ನು ಈ ಬಾರಿ ಕೇಂದ್ರ ಸರ್ಕಾರದ ಮಾರ್ಗ ಸೂಚಿಯಂತೆ, ಕೋವಿಡ್ ನಿಯಮವಳಿಗಳನ್ನು ಪಾಲಿಸಿಕೊಂಡು ಸ್ವಾತಂತ್ರ್ಯ ದಿನಾಚರಣೆಯನ್ನು ಮಾಡಲಾಗುತ್ತದೆ. ಸಾರ್ವಜನಿಕರಿಗೆ ವೀಕ್ಷಣೆ ಮಾಡಲು ನೇರ ಪ್ರಸಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಲಾಗುವುದು ಎಂದರು.
ನೆರೆ ಪರಿಹಾರ ಕಾರ್ಯದ ಜೊತೆಗೆ ಕೊರೋನಾ ಸೋಂಕು ತಡೆಯುವುದು ಸವಾಲಿನ ಕಾರ್ಯವಾಗಿದ್ದು, ಜಿಲ್ಲೆಯಲ್ಲಿ ಕೊರೋನಾ ರೋಗದಿಂದ ಗುಣಮುಖರಾಗುವವರ ಸಂಖ್ಯೆ ಹೆಚ್ಚು ಇದೆ. ಈ ಬಗ್ಗೆ ಜಿಲ್ಲಾಡಳಿತವು ಅಗತ್ಯವಿರುವ ಎಲ್ಲಾ ರೀತಿಯ ಮುಂಜಾಗೃತ ಕ್ರಮಗಳನ್ನು ಕೈಗೊಂಡಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಜಿಲ್ಲಾಧಿಕಾರಿ ಜಿ ಜಗದೀಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋತ್, ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
Comments are closed.