ಬೆಂಗಳೂರು: ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಸಂಬಂಧಿಕನೊಬ್ಬ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಕೋಮು ಪ್ರಚೋದಕ ಪೋಸ್ಟ್ ಒಂದು ಬೆಂಗಳೂರಿನ ಕೆಜಿ ಹಳ್ಳಿ ಹಾಗೂ ಡಿಜೆ ಹಳ್ಳಿ ವ್ಯಾಪ್ತಿಯಲ್ಲಿ ನಡುರಾತ್ರಿ ಗಲಭೆಗೆ ಕಾರಣವಾಗಿದೆ.
ಶಾಸಕ ಅಖಂಡ ಶ್ರೀನಿವಾಸ್ ಅವರ ಆಪ್ತರೂ ಆಗಿರುವಂತಹ ನವೀನ್ ಎಂಬುವವರು ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ಮುಸ್ಲಿಂ ಸಮುದಾಯದವರನ್ನು ಅವಹೇಳನ ಮಾಡುವಂತಹ ಪೋಸ್ಟ್ ಹಾಕಿದ್ದರು. ಹೀಗಾಗಿ ದಿಢೀರೆಂದು ಉದ್ರಿಕ್ತ ಗುಂಪೊಂದು ಅಖಂಡ ಶ್ರೀನಿವಾಸ್ ಅವರ ಮನೆಯ ಬಳಿ ಆಗಮಿಸಿ ಮನೆ ಮತ್ತು ಕಚೇರಿಗೆ ಕಲ್ಲು ತೂರಾಟ ನಡೆಸಿದ್ದಾರೆ.
ಕಚೇರಿ ಎದುರು ನಿಂತಿದ್ದ ಕಾರುಗಳಿಗೂ ಬೆಂಕಿ ಹಚ್ಚಿರುವ ಕಿಡಿಗೇಡಿಗಳು ಸ್ಥಳದಲ್ಲಿ ದೊಡ್ಡ ಮಟ್ಟದ ದಾಂಧಲೆ ಮಾಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವುದಾಗಿ ಅಖಂಡ ಶ್ರೀನಿವಾಸ್ ಮಾತು ನೀಡಿದರೂ ಸಹ ಅದನ್ನು ಕೇಳದ ಉದ್ರಿಕ್ತ ಗುಂಪು ಅವರ ಮನೆಯ ಎದುರು ಪ್ರಕ್ಷುಬ್ಧ ವಾತಾವರಣ ನಿರ್ಮಾಣ ಮಾಡಿದೆ.
ಪರಿಣಾಮ ಅಖಂಡ ಶ್ರೀನಿವಾಸ್ ಮನೆಗೆ ಕೆಎಸ್‌ಆರ್‌ಪಿ ತುಕಡಿಯನ್ನು ರವಾನಿಸಿ ಬಿಗಿ ಬಂದೋಬಸ್ತ್ ನೀಡಲಾಗಿದೆ. ಶಾಸಕ ಆಖಂಡ ಶ್ರೀನಿವಾಸಮೂರ್ತಿ ಮನೆಗೆ ಕಮೀಷನರ್ ಕಮಲ್ ಪಂತ್ ಬೇಟಿ ನೀಡಿ ಮನೆ ಪರಿಶೀಲನೆ ನಡೆಸಿದ್ದಾರೆ. ನಗರದ ಎಲ್ಲ ಡಿಸಿಪಿ, ಎಸಿಪಿಗಳು ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಕಡಗೆ ದೌಡಾಯಿಸಿದ್ದಾರೆ. ಅಲ್ಲದೆ ಉದ್ರಿಕ್ತರ ಮೇಲೆ ಲಘು ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಲಾಗಿದೆ.
ಡಿಜೆ ಹಳ್ಳಿ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದ ಸಾವಿರಾರು ದುಷ್ಕರ್ಮಿಗಳು, ಪೊಲೀಸ್ ವಾಹನ ಜಖಂ ಮಾಡಿದ್ದಲ್ಲದೆ, ಬೆಂಕಿಯನ್ನೂ ಇಟ್ಟರು. ಇಷ್ಟಕ್ಕೇ ಸುಮ್ಮನಾಗದ ಪುಂಡರು, ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲೆ ಕಲ್ಲು ತೂರಾಟ ನಡೆಸಿ ಅವರ ಮನೆಗೆ ಬೆಂಕಿ ಇಟ್ಟಿದ್ದಾರೆ.
ಈ ಗಲಭೆಯಲ್ಲಿ ಪೊಲೀಸರ ಗುಂಡಿಗೆ ಇಬ್ಬರು ಬಲಿಯಾಗಿದ್ದು, ಮೂವರ ಕಾಲಿಗೆ ಗುಂಡು ತಗುಲಿದೆ. ಹಲವಾರು ಪೊಲೀಸರೂ ಕೂಡಾ ಕಲ್ಲೇಟಿಗೆ ಗಾಯಗೊಂಡಿದ್ದಾರೆ.
ಕೆ.ಜಿ.ಹಳ್ಳಿ ಠಾಣೆ ಬಳಿ ನಡೆದ ಪೊಲೀಸರ ಫೈರಿಂಗ್ ವೇಳೆ ವ್ಯಕ್ತಿ ಸಾವನ್ನಪ್ಪಿದ್ದಾನೆ. ಡಿ.ಜೆ.ಹಳ್ಳಿ ಪೊಲೀಸ್ ಠಾಣೆ ಹಾಗೂ ಕಾವಲ್ ಭೈರಸಂದ್ರ ಬಳಿ ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕಾಗಿ ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಈ ವೇಳೆ ಮೂವರ ಕಾಲಿಗೆ ಗುಂಡು ತಗುಲಿದೆ ಎನ್ನಲಾಗಿದ್ದು, ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ.
ಮೊದಲು ಗುಂಪು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದರು. ಆದರೆ, ಪರಿಸ್ಥಿತಿ ನಿಯಂತ್ರಣಕ್ಕೆ ಸಿಗದಿದ್ದಾಗ ಪೊಲೀಸರು ಅನಿವಾರ್ಯವಾಗಿ ಗಾಳಿಯಲ್ಲಿ ಗುಂಡಿನ ಮೊರೆ ಹೋಗಿದ್ದರು. ಪೊಲೀಸರ ಮೇಲೆ ದುಷ್ಕರ್ಮಿಗಳು ನಿರಂತರವಾಗಿ ದಾಳಿ ನಡೆಸಿದ್ದು, ಡಿಜೆ ಹಳ್ಳಿ, ಕೆಜಿ ಹಳ್ಳಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿದ್ದರು.
ಸಿಆರ್‌ಪಿಎಫ್ ತುಕಡಿಯ ವಾಹನಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಗಲಭೆಯಲ್ಲಿ ಡಿಸಿಪಿ ವಾಹನ ಕೂಡ ಧ್ವಂಸವಾಗಿದೆ. ಪುಲಿಕೇಶಿ ನಗರ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರ ಕಾವಲ್ ಭೈರಸಂದ್ರ ನಿವಾಸದ ನೆಲಮಹಡಿ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಶಾಸಕ ಜಮೀರ್ ಅಹಮದ್ ಕೈಗೂ ಗಾಯವಾಗಿದೆ.
Comments are closed.