ಹೈದರಾಬಾದ್ (ಆ. 13): ಮನೆಯ ಖರ್ಚುಗಳನ್ನು ನಿಭಾಯಿಸಲಾಗದೆ ಹಣ ಹೊಂದಿಸಲು ಪರದಾಡುತ್ತಿದ್ದ ಮಹಿಳೆಯೊಬ್ಬಳು ಪಕ್ಕದ ಮನೆಯವರಿಗೆ ತನ್ನ 2 ತಿಂಗಳ ಮಗುವನ್ನು ಮಾರಾಟ ಮಾಡಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ. ಮನೆಯಲ್ಲಿ ಹಣದ ಸಮಸ್ಯೆಯಿದ್ದು, ಮಗುವನ್ನು ನೋಡಿಕೊಳ್ಳಲಾಗದ ಕಾರಣ ಮಹಿಳೆ ತನ್ನ ಮಗುವನ್ನು 45,000 ರೂ.ಗಳಿಗೆ ಮಾರಿದ್ದಾಳೆ.
ಹೈದರಾಬಾದ್‍ನ ಸುಭಾನ್‍ಪುರ್ ಏರಿಯಾದಲ್ಲಿ ಈ ಘಟನೆ ನಡೆದಿದೆ. ಎಸ್ಕೆ ಜೋಯಾ ಖಾನ್ ಎಂಬ ಮಹಿಳೆ ತನ್ನ ಮಗುವನ್ನು ಮಾರಿದಾಕೆ. ಆಕೆಯ ಜೊತೆಗೆ ಆಯೆಷಾ ಜಬೀನ್, ಶಮೀಮಾ ಬೇಗಂ ಹಾಗೂ ಸಿರಾಜ್ ಬೇಗಂ ಕೂಡ ಆರೋಪಿಗಳಾಗಿದ್ದು, ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ಆಗಸ್ಟ್ 11ರಂದು ಅಬ್ದುಲ್ ಮುಜಾಹೇದ್ ಎಂಬ ವ್ಯಕ್ತಿ ಹಬೀಬ್ ನಗರ ಪೊಲೀಸ್ ಠಾಣೆಗೆ ಬಂದು ತನ್ನ ಹೆಂಡತಿ ತನ್ನ 2 ತಿಂಗಳ ಮಗುವನ್ನು ಮಾರಿರುವುದಾಗಿ ದೂರು ನೀಡಿದ್ದ. ತಮ್ಮ ಪಕ್ಕದ ಮನೆಯಲ್ಲಿರುವ ಮೊಹಮ್ಮದ್ ಹಾಗೂ ತಬಸ್ಸುಮ್ ಬೇಗಂಗೆ 45,000 ರೂ.ಗೆ ಮಗುವನ್ನು ಮಾರಾಟ ಮಾಡಲಾಗಿದೆ ಎಂದು ಆತ ಹೇಳಿಕೊಂಡಿದ್ದ. ದೂರು ದಾಖಲಿಸಿಕೊಂಡ ಪೊಲೀಸರು ಜೋಯಾ ಖಾನ್ಳನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದ್ದರು. ಆಗ ಆಕೆ ಮಗುವನ್ನು ಮಾರಾಟ ಮಾಡಿದ್ದನ್ನು ಒಪ್ಪಿಕೊಂಡಿದ್ದಾಳೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಆಗಸ್ಟ್ 3ರಂದು ಮುಜಾಹೇದ್ ತನ್ನ ಹೆಂಡತಿಯೊಂದಿಗೆ ಜಗಳವಾಡಿ ಅಪ್ಪನ ಮನೆಗೆ ತೆರಳಿದ್ದ. ಮಗುವನ್ನು ನೋಡಿಕೊಳ್ಳಲು ಹಣವಿಲ್ಲದೆ ಅಕ್ಕಪಕ್ಕದವರಲ್ಲಿ ಸಾಲ ಮಾಡಿದ್ದ ಜೋಯಾ ಖಾನ್ಗೆ ಜೀವನ ನಡೆಸುವುದೇ ಕಷ್ಟವಾಗಿತ್ತು. ಗಂಡನ ಮೇಲೆ ಮುನಿಸಿಕೊಂಡಿದ್ದ ಜೋಯಾ ಆತನ ಬಳಿ ಹಣ ಕೇಳಲಾಗದೆ ಮಗುವನ್ನು ಮಾರಾಟ ಮಾಡಿದ್ದಾಳೆ. ತನ್ನ ಅನುಮತಿ ಇಲ್ಲದೆ ಗಂಡು ಮಗುವನ್ನು ಮಾರಾಟ ಮಾಡಿದ್ದಕ್ಕೆ ಆಕೆಯ ಗಂಡ ಪೊಲೀಸರಿಗೆ ದೂರು ನೀಡಿದ್ದಾನೆ.
Comments are closed.