ನವದೆಹಲಿ: ಬಿಡದಿ ಧ್ಯಾನಪೀಠದ ನಿತ್ಯಾನಂದ ಸ್ವಾಮೀಜಿ ಗಣೇಶ ಚತುರ್ಥಿ ದಿನದಂದೇ ದೂರದ ಈಕ್ವೆಡಾರ್ ದೇಶದ ಕರಾವಳಿಯ ಸಣ್ಣ ದ್ವೀಪದಲ್ಲಿ ಕೈಲಾಸ ದೇಶದ ರಿಸರ್ವ ಬ್ಯಾಂಕ್ ಕೈಲಾಸ ಆರಂಭಿಸಿದ್ದಾನೆ.
ಕೈಲಾಸ ದೇಶದ ಪ್ರಧಾನಮಂತ್ರಿಯೂ ಆಗಿರುವ ನಿತ್ಯಾನಂದ, ತನ್ನ ಬೆಂಬಲಿಗರೊಂದಿಗೆ ಬ್ಯಾಂಕ್ ಕಾರ್ಯಾರಂಭಕ್ಕೆ ಚಾಲನೆ ನೀಡಿದ್ದಾನೆ. ಈತ ದೇಶ ತೊರೆದಿದ್ದಾನೆಂದು ಹೇಳಲಾದ ಕಳೆದ ನವೆಂಬರ್ ಈ ರಾಷ್ಟ್ರ ಉದಯವಾಗಿದೆ ಎಂದು ನಿತ್ಯಾನಂದ ಹೇಳಿಕೊಂಡಿದ್ದ. ಜತೆಗೆ ಈ ದೇಶದ ಪ್ರಜೆಗಳಿಗೆಂದೇ ಈ ಪಾಸ್ಪೋರ್ಟ್ ಆರಂಭಿಸಿದ್ದ.
ಈತನ ಕೈಲಾಸ ದೇಶ ನಿಖರವಾಗಿ ಎಲ್ಲಿದೆ ಎಂಬುದನ್ನು ಈವರೆಗೂ ನಿತ್ಯಾನಂದ ತಿಳಿಸಿಲ್ಲವಾದರೂ, ಹಲವು ಮಾಧ್ಯಮಗಳಲ್ಲಿ ಇದು ಈಕ್ವೆಡಾರ್ನಲ್ಲಿರುವ ಒಂದು ದ್ವೀಪ ಎಂದೇ ಗುರುತಿಸಲಾಗಿದೆ. ಇದನ್ನು ನಿತ್ಯಾನಂದ ಖರೀದಿಸಿದ್ದಾನೆ ಎಂದೇ ಹೇಳಲಾಗಿದೆ.
ಕೈಲಾಸವೊಂದು ರಾಜ್ಯಗಳಿಲ್ಲದ ದೇಶ, ಜತೆಗೆ ಹೊಸ ಭೂಭಾಗವನ್ನು ಬಯಸುವುದಿಲ್ಲ ಎಂಬುದು ನಿತ್ಯಾನಂದನ ವ್ಯಾಖ್ಯಾನ. ತಾವಿರುವ ನೆಲದಲ್ಲಿ ಹಿಂದೂ ಧರ್ಮವನ್ನು ಪಾಲಿಸಲಾಗದ ಜನರಿಂದ ಈ ಕೈಲಾಸ ಸೃಷ್ಟಿಯಾಗಿದೆ ಎಂದು ಕೈಲಾಸ ವೆಬ್ಸೈಟ್ನಲ್ಲಿ ಹೇಳಿಕೊಳ್ಳಲಾಗಿದೆ.
ಕೈಲಾಸದಲ್ಲಿ ಆಚರಿಸಲ್ಪಡುತ್ತಿರುವ ಗಣೇಶ ಚತುರ್ಥಿ ಸಂದರ್ಭದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಕೈಲಾಸದ ಕರೆನ್ಸಿಯನ್ನು ಗಣಪತಿ, ಪರಮಶಿವ ಹಾಗೂ ಗುರು ನಿತ್ಯಾನಂದ ಸ್ವಾಮೀಜಿ ಪದತಲಕ್ಕೆ ಅರ್ಪಿಸಲಾಗಿದೆ ಎಂದು ಘೋಷಿಸಲಾಗಿದೆ.
ಹಿಂದು ಧಾರ್ಮಿಕ ನೀತಿಗಳ 100ಕ್ಕೂ ಅಧಿಕ ಪುಸ್ತಕಗಳು 360ಕ್ಕೂ ಅಧಿಕ ಲೇಖನಗಳನ್ನು ಅಧ್ಯಯನ ಮಾಡಿ ಈ ಕರೆನ್ಸಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಕೈಲಾಸ ವೆಬ್ಸೈಟ್ನಲ್ಲಿ ತಿಳಿಸಲಾಗಿದೆ.
ಅಷ್ಟಕ್ಕೂ ಇಲ್ಲಿನ ಕರೆನ್ಸಿ ಕೈಲಾಸಿಯನ್ ಡಾಲರ್. ಜತೆಗೆ, ಇತರ ನಾಣ್ಯಗಳನ್ನು ಬಿಡುಗಡೆ ಮಾಡಲಾಗಿದೆ. ಇದರ ಮೌಲ್ಯವೆಷ್ಟು ಎಂಬುದು ಇನ್ನೂ ಗೊತ್ತಾಗಿಲ್ಲ. ಡಾಲರ್ ಎಂದ ಮೇಲೆ ಅಮೆರಿಕನ್ ಡಾಲರ್ ಮೌಲ್ಯವೇ ಹೊಂದಿರಬಹದು ಎಂದು ಅಂದಾಜಿಸಲಾಗುತ್ತಿದೆ. ಭಾರತೀಯ ರೂ. ವಿನಿಮಯ ದರ ಅಂದಾಜು 75 ರ.ಗಳಿಬಹುದೆಂದು ಅಂದಾಜಿಸಲಾಗುತ್ತಿದೆ.
ಕೈಲಾಸ ದ್ವಿಪಕ್ಷೀಯ ಒಪ್ಪಂದ ಮಾಡಿಕೊಂಡಿರುವ ದೇಶಗಳಲ್ಲಿ ಮಾತ್ರ ಈ ಕರೆನ್ಸಿ ಚಲಾವಣೆಯಲ್ಲಿ ಇರಲಿದೆಯಂತೆ. ರಿಸರ್ವ್ ಬ್ಯಾಂಕ್ ಆರಂಭಿಸಲು ದೇಶವೊಂದರ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಹೀಗಾಗಿ ರಿಸರ್ವ್ ಬ್ಯಾಂಕ್ ಆಫ್ ಕೈಲಾಸ ಕಾನೂನು ಬದ್ಧವಾಗಿದೆ ಎಂದು ಕೈಲಾಸ ವೆಬ್ಸೈಟ್ನಲ್ಲಿ ಹೇಳಿಕೊಳ್ಳಲಾಗಿದೆ.
Comments are closed.