ನವದೆಹಲಿ: ಈಶಾನ್ಯ ಲಡಾಖ್ ನಲ್ಲಿ ಚೀನಾ-ಭಾರತ ಸೇನಾ ಸಿಬ್ಬಂದಿಗಳ ನಡುವಿನ ಘರ್ಷಣೆಯ ನಂತರ, ಭಾರತದ ಪ್ರದೇಶದಲ್ಲಿದ್ದ ಪಿಎಲ್ಎ ಸಿಬ್ಬಂದಿಗಳನ್ನು ವಾಪಸ್ ಕರೆಸಿಕೊಳ್ಳುವುದಕ್ಕೆ ಹಲವು ಸುತ್ತಿನ ಮಾತುಕತೆಯನ್ನು ನಡೆಸಲಾಗಿದೆ. ಆದರೆ ಚೀನಾ ಯಾವುದಕ್ಕೂ ಬಗ್ಗದೇ ತನ್ನ ಮೊಂಡುತನವನ್ನು ಮುಂದುವರೆಸಿದೆ.
ಸೇನಾ ಮಾತುಕತೆ ಹಾಗೂ ರಾಜತಾಂತ್ರಿಕ ಮಾತುಕತೆಗಳ ನಡುವೆಯೇ ಭಾರತವನ್ನು ದಾರಿ ತಪ್ಪಿಸುವ ಕೆಲಸಕ್ಕೆ ಕೈ ಹಾಕಿವ್ರುವ ಚೀನಾ, ಘರ್ಷಣೆ ನಡೆದ ಪ್ರದೇಶದಿಂದ ಸಿಬ್ಬಂದಿಗಳನ್ನು ವಾಪಸ್ ಕರೆಸಿಕೊಂಡಂತೆ ಮಾಡಿತ್ತು. ಆದರೆ ಈಗ ಮತ್ತೆ ಎಲ್ಎಸಿಯಾದ್ಯಂತ ತನ್ನ ಸಿಬ್ಬಂದಿಗಳಿಗೆ ನೆರವಾಗುವ ರೀತಿಯಲ್ಲಿ ಸೇತುವೆ, ರಸ್ತೆ ನಿರ್ಮಾಣ ಸೇರಿದಂತೆ ಹಲವು ರೀತಿಯ ಮೂಲಸೌಕರ್ಯ ನಿರ್ಮಾಣಗಳನ್ನು ಮಾಡುತ್ತಿದೆ.
ಈ ಬಗ್ಗೆ ಸೇನಾ ಅಧಿಕಾರಿಯೊಬ್ಬರು ನೀಡಿರುವ ಹೇಳಿಕೆಯ ಸಹಿತ ಟೈಮ್ಸ್ ಆಫ್ ಇಂಡಿಯಾ ವಿಸ್ತೃತ ವರದಿ ಪ್ರಕಟಿಸಿದೆ.
ಎಲ್ಎಸಿಯಲ್ಲಿ ಉಂಟಾಗಿದ್ದ ಪರಿಸ್ಥಿತಿಯನ್ನು ತಿಳಿಗೊಳಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಗಂಭೀರವಾದ ಇರಾದೆ ಚೀನಾಗೆ ಇಲ್ಲ, ಬದಲಾಗಿ ಮಾತುಕತೆಯ ಚೆಂಡನ್ನು ಸೇನಾ ಹಾಗೂ ರಾತಾಂತ್ರಿಕ ಮಾತುಕತೆಗಳ ಅಂಗಳದಲ್ಲಿ ಬದಲಾವಣೆ ಮಾಡುತ್ತಾ, ತನ್ನ ಕೆಲಸವನ್ನು ಮುಂದುವರೆಸಿಕೊಂಡು ಹೋಗುತ್ತಿದೆ ಎಂದು ಸೇನಾ ಅಧಿಕಾರಿಯೊಬ್ಬರು ಹೇಳಿರುವುದನ್ನು ಟೈಮ್ಸ್ ವರದಿ ಮಾಡಿದೆ.
ಹಾಗೆಂದು ಭಾರತವೇನು ಸುಮ್ಮನೆ ಕುಳಿತಿಲ್ಲ. ಲಡಾಖ್ ನಿಂದ ಅರುಣಾಚಲಪ್ರದೇಶದದಾದ್ಯಂತ ಇರುವ 3,488 ಕಿ.ಮೀ ಉದ್ದದ ಎಲ್ಎಸಿಯಲ್ಲಿ ಚೀನಾ ಸಿಬ್ಬಂದಿಗಳಿಗೆ ಸರಿಸಮವಾದ ಸಿಬ್ಬಂದಿಗಳು, ಆರ್ಟಿಲರಿ ಟ್ಯಾಂಕ್ ಸೇರಿದಂತೆ ಹಲವು ಶಸ್ತ್ರಾಸ್ತ್ರಗಳ ನಿಯೋಜನೆಯಲ್ಲಿ ತೊಡಗಿದೆ.
ಇತ್ತ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ನೇತೃತ್ವದಲ್ಲಿ ರಕ್ಷಣಾ ಪಡೆಗಳ ಮುಖ್ಯಸ್ಥ, ಎನ್ಎಸ್ಎ ಅಜಿತ್ ದೋವಲ್, ಮೂರು ಸೇನಾ ಪಡೆಗಳ ಮುಖ್ಯಸ್ಥರೊಂದಿಗೆ ಸತತ 3 ದಿನಗಳ ಕಾಲ ಸಭೆ ನಡೆಸಿದ್ದು, ಚೀನಾ ಹಾಗೂ ಪಾಕಿಸ್ತಾನದಿಂದ ಬರಬಹುದಾದಂತಹ ದಾಳಿ ಹಾಗೂ ಅದನ್ನು ಎದುರಿಸಲು ಅಗತ್ಯವಿರುವ ಸನ್ನದ್ಧತೆ ಬಗ್ಗೆ ಮಹತ್ವದ ಸಭೆ ನಡೆಸಿದ್ದಾರೆ.
ಚೀನಾ ಎಲ್ಎಸಿಗೆ ಹತ್ತಿರವಿರುವ ತನ್ನ ಹೊಟಾನ್, ಕ್ಸಿನ್ಜಿಯಾಂಗ್ ನಲ್ಲಿರುವ ಕಶ್ಗಾನ್ ನಲ್ಲಿರುವ ಏರ್ ಬೇಸ್ ಗಳಲ್ಲಿ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಕಾರ್ಯದಲ್ಲಿ ತೊಡಗಿದ್ದು, ಲಡಾಖ್ ನಲ್ಲಿ ಘರ್ಷಣೆ ಉಂಟಾದಾಗಿನಿಂದಲೂ ತ್ವರಿತವಾಗಿ ಈ ಕೆಲಸ ಮಾಡತೊಡಗಿದೆ ಅಷ್ಟೆ ಅಲ್ಲದೇ ಶತಾಯಗತಾಯ ಲಡಾಖ್ ನಲ್ಲಿರುವ ಎಲ್ಎಸಿಯನ್ನು ಪಶ್ಚಿಮದ ಒಳಭಾಗಕ್ಕೆ ಒತ್ತುವರಿ ಮಾಡಲು ಯತ್ನಿಸುತ್ತಿದೆ.
Comments are closed.