ಕಾರವಾರ(ಆಗಸ್ಟ್. 23): ಮಳೆಯಿಂದ ನಲುಗಿದ್ದ ಉತ್ತರಕನ್ನಡ ಜಿಲ್ಲೆಯಲ್ಲಿ ಈಗ ಸ್ವಲ್ಪ ಪ್ರಮಾಣದಲ್ಲಿ ಮಳೆ ತಗ್ಗಿದೆ. ಆದರೆ, ಮಳೆ ಬಿಟ್ಟರು ಮರದ ಹನಿ ಬಿಡಲಿಲ್ಲ ಎಂಬಂತೆ ಮತ್ತೆ ಅಲ್ಲಲ್ಲಿ ಸಮಸ್ಯೆಗಳು ತಲೆದೂರುತ್ತಲೇ ಇವೆ. ಈ ನಡುವೆ ಮತ್ತೆ ಅಲ್ಲಲ್ಲಿ ಗುಡ್ಡ ಕುಸಿತ ಪ್ರಕರಣಗಳು ವರದಿಯಾಗುತ್ತಲಿದ್ದು, ಕಾರವಾರ ತಾಲೂಕಿನ ಅಸ್ನೋಟಿ ಗ್ರಾಮದಲ್ಲಿ ಹತ್ತಾರು ಕುಟುಂಬ ಕ್ಷಣಕ್ಷಣಕ್ಕೂ ಗುಡ್ಡ ಕುಸಿತದ ಭೀತಿ ಎದುರಿಸುತ್ತಿದೆ.
ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಅಸ್ನೋಟಿ ಗ್ರಾಮದಲ್ಲಿ ಗುಡ್ಡ ಜರಿದು ಬೀಳಲಾರಂಭಿಸಿದೆ. ಇತ್ತೀಚಿನ ಮೂರ್ನಾಲ್ಕು ವರ್ಷದ ಹಿಂದೆ ಇಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ನಡೆದು ಭೂಮಿ ಒಡಲು ಬಗೆದು ಮಣ್ಣು ತೆಗೆಯಲಾಗಿತ್ತು. ಈಗ ಭಾರೀ ಮಳೆ ಹಿನ್ನೆಲೆಯಲ್ಲಿ ಈ ಜಾಗದಲ್ಲಿ ಗುಡ್ಡದ ಮಣ್ಣು ಜಾರಿ ಬೀಳಲಾರಂಭಿಸಿದೆ. ಗುಡ್ಡದ ಕೆಳಗಡೆ ಮೂವತ್ತಕ್ಕೂ ಹೆಚ್ಚು ಮನೆಗಳಿವೆ. ಅದರಲ್ಲಿ ಅತೀ ಹತ್ತಿರದಲ್ಲಿ ನಾಲ್ಕೈದು ಕುಟುಂಬ ದಿನನಿತ್ಯಕ್ಕೂ ಭಯದಲ್ಲೆ ದಿನದೂಡುತ್ತಿದ್ದಾರೆ.
ಈಗಾಗಲೆ ಗುಡ್ಡದ ಮಣ್ಣು ಮಳೆ ನೀರಿಗೆ ತೋಯ್ದು ಬಂದು ಮನೆ ಅಕ್ಕಪಕ್ಕದ ರಸ್ತೆ, ಕೃಷಿ ಭೂಮಿ ಸೇರಿಕೊಂಡಿದೆ. ಇದರಿಂದ ಇಲ್ಲಿನ ಜನ ಸಾಕಷ್ಟು ಹಾನಿ ಅನುಭವಿಸಿದ್ದಾರೆ. ಜತೆಗೆ ಆತಂಕದಲ್ಲಿ ದಿನ ದೂಡುತ್ತಿದ್ದಾರೆ. ನೂರಾರು ಎಕರೆ ಕೃಷಿ ಭೂಮಿಗೆ ಗುಡ್ಡದ ಮಣ್ಣು ಸೇರಿ ಕೃಷಿ ಮಾಡದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಮಣ್ಣು ಮಿಶ್ರಿತ ನೀರು ಗುಡ್ಡದಿಂದ ಜಾರಿ ಬಂದು ಇಲ್ಲಿನ ಜನರ ಬಾವಿ ಸೇರಿ ಆ ನೀರು ಹಾಳಾಗಿದೆ. ಇದರಿಂದ ಕುಡಿಯಲು ನೀರಿಗಾಗಿ ಪರಿತಪಿಸುವಂತಾಗಿದೆ. ಗುಡ್ಡ ಇವತ್ತು ಬೀಳತ್ತೊ ನಾಳೆ ಬೀಳತ್ತೊ ಎಂದು ಇಲ್ಲಿನ ಜನ ಭಯದ ನರೆಳಲ್ಲಿ ಕ್ಷಣ ಕ್ಷಣಕ್ಕೂ ಜೀವನ ದೂಡುತ್ತಿದ್ದಾರೆ.
ಇನ್ನು ಅಸ್ನೋಟಿ ಗ್ರಾಮದಲ್ಲಿ ಗುಡ್ಡದ ಇಕ್ಕೆಲದಲ್ಲೇ ಇರುವ ಸುಮಾರು 20 ಕ್ಕೂ ಅಧಿಕ ಮನೆಗಳು ಈ ಗುಡ್ಡದಿಂದ ನಲುಗುತ್ತಿದೆ. ಇನ್ನು ಐದು ಮನೆಗಳನ್ನು ಸ್ಥಳೀಯ ಆಡಳಿತ ಈಗಾಗಲೇ ಸ್ಥಳಾಂತರ ಮಾಡಿದ್ದು, ಅವರಿಗೆ ಶಾಲೆಯೊಂದರಲ್ಲಿ ಇರಲು ವ್ಯವಸ್ಥೆ ಮಾಡಿತ್ತು. ಆದರೆ, ಅಲ್ಲಿ ಮೂಲ ಸೌಕರ್ಯದ ವ್ಯವಸ್ಥೆ ಇಲ್ಲ ಎಂಬ ಕಾರಣಕ್ಕೆ ಅವರೆಲ್ಲಾ ರಾತ್ರಿ ಆಗುತ್ತಿದ್ದಂತೆ ಒಂದೊಂದು ದಿನ ಸಂಬಂಧಿಕರ ಮನೆಗಳಿಗೆ ಹೋಗಿ ವಾಸ ಮಾಡುತ್ತಿದ್ದಾರೆ.
ಇನ್ನು ಮಣ್ಣು ಅಕ್ರಮ ಮಾರಾಟ ಮಾಡುವಾಗ ಕಣ್ಣು ಮುಚ್ಚಿ ಕುಳಿತಿದ್ದ ಸ್ಥಳೀಯ ಆಡಳಿತ ಈಗ ಗುಡ್ಡ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ನಮ್ಮನ್ನೆಲ್ಲಾ ಸ್ಥಳಾಂತರ ಮಾಡುತ್ತಿದ್ದಾರೆ. ಆದರೆ, ಮಣ್ಣು ಮಾಫಿಯಾ ನಿಲ್ಲಿಸುವ ಕೆಲಸ ಮಾಡಲಿಲ್ಲ ಎನ್ನುವುದು ಇಲ್ಲಿನ ಜನರ ಬಲವಾದ ಆರೋಪ. ಇಲ್ಲಿ ಬಂದ ಅಧಿಕಾರಿಗಳು ಜಾಗ ನೋಡಿ ವಾಪಾಸ್ ಹೋಗುತ್ತಿದ್ದು, ತಮಗೆ ಮನೆ ಕಾಲಿ ಮಾಡಿ ಅಂತಾರೆ ಹೊರತು ಪರಿಹಾರ ಮತ್ತಿತರೆ ಒದಗಿಸುತ್ತಿಲ್ಲ ಅಂತಾರೆ ಇಲ್ಲಿನ ನಿವಾಸಿಗಳು.
ಒಟ್ಟಾರೆ ಮಣ್ಣು ಮಾಫಿಯಾ ಕೈಗೆ ಸಿಕ್ಕಿ ನಲುಗಿದ್ದ ಹತ್ತಾರು ಎಕರೆ ಜಾಗ ಈಗ ಗುಡ್ಡ ಕುಸಿತವಾಗುತ್ತಿದ್ದು, ಬೆಲೆಬಾಳುವ ಮರಗಳು ಕೂಡ ಗುಡ್ಡ ಕುಸಿತದಿಂದಾಗಿ ನೆಲಕ್ಕುರುಳುತ್ತಿವೆ. ಅಮಾಯಕ ಸ್ಥಳೀಯರು ಮಾತ್ರ ಜೀವ ಕೈಯಲ್ಲಿ ಹಿಡಿದುಕೊಂಡು ಜೀವನ ನಡೆಸುವಂತಾಗಿದೆ.
Comments are closed.