ಕರಾವಳಿ

ದಾಖಲೆಗಳಿಲ್ಲದೇ ಕೊರೋನಾ ವಾರಿಯರ್ಸ್ ಬಗ್ಗೆ ಆರೋಪಿಸಿದರೇ ನಿರ್ದಾಕ್ಷಿಣ್ಯ ಕ್ರಮ: ಡಿಸಿ ಜಿ. ಜಗದೀಶ್(Video)

Pinterest LinkedIn Tumblr

ಉಡುಪಿ: ನಾನು ಕೂಡ ಆರು ದಿನಗಳಿಂದ ಹೋಂ ಕ್ವಾರೆಂಟೈನ್ ಆಗಿದ್ದೆ. ಜಿಲ್ಲೆಯಲ್ಲಿ ಕಳೆದೆರಡು ದಿನದಿಂದ ಕೊರೋನಾ ವಿಚಾರದಲ್ಲಿ ಎರಡು ಗೊಂದಲಗಳು ಆಗಿದೆ. ಉಡುಪಿ ಮೂಲದ 26 ವರ್ಷದ ಮಹಿಳೆ ಸಾವಿಗೆ ವೈದ್ಯರ ನಿರ್ಲಕ್ಷ್ಯವಾಗಿದ್ದರೆ ಪರಿಣಿತ ವೈದ್ಯರ ತಂಡದಿಂದ ನಿಸ್ಪಕ್ಷಪಾತ ತನಿಖೆ ನಡೆಯಲಿದೆ. ಇನ್ನು ಕುಂದಾಪುರ ಮೂಲದ ವ್ಯಕ್ತಿಯ ಮೃತದೇಹ ಬದಲಾವಣೆ ಆಗಿದ್ದು ಈ ಮೊದಲೇ ನಾವು ಮೃತದೇಹ ನಿರ್ವಹಣೆಗೆ ಸಮಿತಿ ಮಾಡಿದ್ದು ಈವರೆಗೆ ಅವರ ತಂಡ 80ಕ್ಕೂ ಅಧಿಕ ಮೃತದೇಹಗಳನ್ನು ಕೊರೋನಾ ನಿಯಮಾವಳಿಯಂತೆ ನಿರ್ವಹಣೆ ಮಾಡಿದ್ದಾರೆ. ನಿನ್ನೆಯ ಖೇದಕರ ಘಟನೆ ಬಗ್ಗೆ ಮೃತದೇಹ ನಿರ್ವಹಣೆಗೆ ಸಮಿತಿಗೆ ನೋಟಿಸ್ ನೀಡಲಾಗಿದೆ ಎಂದು ಉಡುಪಿ ಡಿಸಿ ಜಿ. ಜಗದೀಶ್ ಹೇಳಿದ್ದಾರೆ.
ಕೋಟೇಶ್ವರ ಮೂಲದ ಮೃತ ವ್ಯಕ್ತಿಯ ಪುತ್ರನೊಂದಿಗೆ ಖುದ್ದು ಮಾತನಾಡಿ ಆದಂತಹ ಅಚಾತುರ್ಯದ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದು ಕ್ಷಮೆ ಕೇಳಿದ್ದಲ್ಲದೇ ಮುಂದಿನ ದಿನದಲ್ಲಿ ಯಾರಿಗೂ ಇಂತಹ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸುವುದಾಗಿ ತಿಳಿಸಿದ್ದೇನೆ ಎಂದು ಡಿಸಿ ಹೇಳಿದರು.
ಕೊರೋನಾ ತಪಾಸಣೆ ಹೆಚ್ಚುಹೆಚ್ಚು ಮಾಡುವುದರಿಂದ ಸೋಂಕಿತರಿಗೆ ಅಗತ್ಯ ಚಿಕಿತ್ಸೆ ಕೊಡುವುದು ಮಾತ್ರವಲ್ಲದೇ ಸೋಂಕು ಹರಡುವುದು ತಪ್ಪಿಸಬಹುದು. ಯಾವುದೇ ರೋಗ ಲಕ್ಷಣಗಳಿಲ್ಲದೇ ಇರುವ ಸೋಂಕಿತರು ಮನೆಯಲ್ಲಿಯೇ ಐಸೋಲೇಟೆಡ್ ಆಗಿರಲು ಅವಕಾಶವಿದೆ. ಉಸಿರಾಟ ಸಮಸ್ಯೆ, ಹೆಚ್ಚಿನ ಜ್ವರ ಸೇರಿದಂತೆ ರೋಗ ಲಕ್ಷಣ ಇರುವರನ್ನು ಮಾತ್ರವೇ ಖಾಸಗಿ ಅಥವಾ ಸರಕಾರಿ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳೂ ಕೂಡ ಸರಕಾರ ನಿಗದಿ ಮಾಡಿದ ದರವನ್ನು ಪಡೆಯಬೇಕು, ಹೆಚ್ಚಿನ ದರವನ್ನು ಪಡೆದ ಘಟನೆಗಳಿದ್ದರೇ ಜಿಲ್ಲಾಡಳಿತದ ಗಮನಕ್ಕೆ ತಂದರೆ ನಿರ್ದಾಕ್ಷಿಣ್ಯ ಕ್ರಮ ವಹಿಸುತ್ತೇವೆ ಎಂದರು.
ಕೊರೋನಾ ವಿಚಾರದಲ್ಲಿ ಹಣ ಮಾಡುವ ದಂಧೆಯಾಗುತ್ತಿದೆಯೆಂದು ಸಾಮಾಜಿಕ ಜಾಲತಾಣದಲ್ಲಿ ಒಂದಷ್ಟು ಮಂದಿ ಪೋಸ್ಟ್ ಹಾಕುತ್ತಿದ್ದು ಇದೆಲ್ಲವೂ ಸಂಪೂರ್ಣ ತಪ್ಪು ಅಭಿಪ್ರಾಯ. ಕೊರೋನಾ ತಪಾಸಣೆಗೆ ಖಾಸಗಿ ಆಸ್ಪತ್ರೆಯ ಲ್ಯಾಬಿನಲ್ಲಿ 1500 ರೂ ಪಡೆದರೆ ಸರಕಾರದ ಲ್ಯಾಬ್ ಆದರೆ ಉಚಿತವಾಗಿ ನಡೆಯಲಿದೆ. ಯಾವುದೇ ಹಣ ಕಾಸಿನ ವ್ಯವಹಾರ ಇಲ್ಲಿ ನಡೆಯುವುದಿಲ್ಲ. ಕೊರೋನಾ ವಾರಿಯರ್ಸ್ ಆದವರಿಗೆ ಅವಮಾನ ಮಾಡುವ ಕೆಲಸ ಮಾಡಬೇಡಿ. ಭ್ರಷ್ಟಾಚಾರದ ನಿಜವಾದ ಮಾಹಿತಿಯಿದ್ದರೆ ದಾಖಲೆ ಸಹಿತ ನೀಡಿದಲ್ಲಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುತ್ತೆ. ದಾಖಲೆಗಳಿಲ್ಲದೇ ಕೇವಲ ಆರೋಪ ಮಾಡಿದರೆ ಅಂತ ಕಿಡಿಗೇಡಿಗಳು ಕಷ್ಟಕ್ಕೆ ಸಿಲುಕುವುದು ಖಂಡಿತ ಎಂದು ಡಿಸಿ ಎಚ್ಚರಿಕೆ ನೀಡಿದ್ದಾರೆ.

Comments are closed.